5-ಸ್ಟಾರ್ ಸೇಫ್ಟಿ.. 68 ಸ್ವದೇಶಿ ಎಲೆಕ್ಟ್ರಿಕ್ ಕಾರುಗಳಿಗೆ ಸಿಎಂ ಚಾಲನೆ, ಬೆಲೆ.. ವಿಶೇಷತೆಗಳೇನು?
ಬೆಂಗಳೂರಿನ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 68 ಪರಿಸರ ಸ್ನೇಹಿ ಇವಿ ವಾಹನಗಳಿಗೆ (ಮಹೀಂದ್ರಾ ಎಕ್ಸ್‌ಯುವಿ400) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ನೂತನ ಇವಿಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಹಾಗೂ ವಲಯ ಕಚೇರಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ವೇಳೆ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ, 'ಶೀಘ್ರದಲ್ಲೇ ಸಿದ್ದರಾಮಯ್ಯ ಅವರ ಓಡಾಟಕ್ಕಾಗಿ ಎಲೆಕ್ಟ್ರಿಕ್ ಕಾರನ್ನು ಒದಗಿಸಲಾಗುವುದು. ಆ ನಂತರದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೂ ನೀಡಲಾಗುವುದು. ಮುಂದಿನ ಹಂತದಲ್ಲಿ ಎಲ್ಲ ಸಚಿವರು ಮತ್ತು ಅಧಿಕಾರಿಗಳು ಇವಿಯಲ್ಲಿ ಸಂಚರಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ' ಎಂದಿದ್ದಾರೆ.
ಮಹೀಂದ್ರಾ ಎಕ್ಸ್‌ಯುವಿ400 (Mahindra XUV400) ವಿಶೇಷತೆಗಳೇನು:
ಇದೊಂದು ಸ್ವದೇಶಿ ನಿರ್ಮಿತ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಕನಿಷ್ಠ ರೂ.15.49 ಲಕ್ಷ ಹಾಗೂ ಗರಿಷ್ಠ ರೂ.17.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇಸಿ ಪ್ರೊ (EC Pro) ಮತ್ತು ಇಎಲ್ ಪ್ರೊ (EL Pro) ಎಂಬ 2 ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ನೂತನ ಮಹೀಂದ್ರಾ ಎಕ್ಸ್‌ಯುವಿ400 ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಸಿಗ್ನೇಚರ್ ಎಲ್ಇಡಿ ಟೈಲ್‌ಲೈಟ್‌ಗಳು ಹಾಗೂ 16 ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಾಪೋಲಿ ಬ್ಲಾಕ್ ಹಾಗೂ ನೆಬ್ಯುಲಾ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಕಾರು ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,200 ಎಂಎಂ ಉದ್ದ, 1,821 ಎಂಎಂ ಅಗಲ ಮತ್ತು 1,634 ಎಂಎಂ ಎತ್ತರವಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,600 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 1,856 ಕೆಜಿ ತೂಕವಿದೆ.

ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೂ ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ ಸರಿ ಸುಮಾರು 378 - ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.
ಹೊಸ ಮಹೀಂದ್ರಾ ಎಕ್ಸ್‌ಯುವಿ400 ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 34.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 39.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 375 ರಿಂದ 456 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ಈ ಕಾರಿನಲ್ಲಿ ಬಳಕೆ ಮಾಡಿರುವ ಬ್ಯಾಟರಿ ಪ್ಯಾಕ್, 50 ಕೆಡಬ್ಲ್ಯೂ ಡಿಸಿ ಚಾರ್ಜರ್ ಬಳಕೆಯಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಲು 50 ನಿಮಿಷ ತೆಗೆದುಕೊಳುತ್ತದೆ. 150 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ. ಕೇವಲ 8.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಅದಕ್ಕೆ ತಕ್ಕಂತೆ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ ಜೋನ್ ಎಸಿ, ಸನ್‌ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ನೂತನ ಮಹೀಂದ್ರಾ ಎಕ್ಸ್‌ಯುವಿ400 ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಭಾರತ್ ಎನ್‌ಸಿಎಪಿಯಿಂದ 5-ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.


Click it and Unblock the Notifications








