ಬಡ ಜನತೆಗೆ ಪೆಟ್ಟು ನೀಡಿದ ಕರೋನಾ ಮಹಾಮಾರಿ, ಶೇರ್ ಆಟೋ ನಿಷೇಧ..!
ಕರೋನಾ ವೈರಸ್ ಎಂಬ ಮಾರಣಾಂತಿಕ ವೈರಸ್ ಜಗತ್ತನ್ನು ಕಾಡುತ್ತಿದೆ. ವಿಶ್ವದ ಎಲ್ಲಾ ರಾಷ್ಟ್ರಗಳು ಈ ವೈರಸ್ ನಿಂದ ತತ್ತರಿಸಿವೆ. ಈ ವೈರಸ್ ಹೊಂದಿರುವ ವ್ಯಕ್ತಿ ಸೀನುವುದರಿಂದ, ಕೆಮ್ಮುವುದರಿಂದ ಹಾಗೂ ಆ ವ್ಯಕ್ತಿಯ ಸಂಪರ್ಕಕ್ಕೆ ಬರುವುದರಿಂದ ಈ ವೈರಸ್ ಇತರರಿಗೆ ಹರಡುತ್ತದೆ.

ಈ ವೈರಸ್ ಸುಲಭವಾಗಿ ಹಾಗೂ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಈ ವೈರಸ್ ನಿಂದ ಸಾಯುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವೈರಸ್ ಆರಂಭದಲ್ಲಿ ಚೀನಾದ ವುಹಾನ್‌ನಲ್ಲಿ ಕಂಡುಬಂದಿತ್ತು. ಸಾಂಕ್ರಾಮಿಕ ರೋಗವಾದ ಕಾರಣ ವಿಶ್ವದೆಲ್ಲೆಡೆ ಹಬ್ಬಿದೆ.

ಈ ವೈರಸ್ ಇದುವರೆಗೂ 170ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಚೀನಾ, ಇಟಲಿಯಲ್ಲಿ ಹೆಚ್ಕಿನ ಜನರು ಈ ವೈರಸ್ ನಿಂದ ಸಾವಿಗೀಡಾಗಿದ್ದಾರೆ. ಇದುವರೆಗೂ ವಿಶ್ವದ್ಯಾಂತ 14,000ಕ್ಕೂ ಹೆಚ್ಚು ಜನರು ಕರೋನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ.

ಮಾರ್ಚ್ 21ರಂದು 627 ಜನರು ಇಟಲಿಯಲ್ಲಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಕರೋನಾ ವೈರಸ್ ಪೀಡಿತರ ಸಂಖ್ಯೆ 4,825 ಕ್ಕೆ ಏರಿದೆ. ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.

ಕರೋನಾದ ಪ್ರಭಾವವು ಇಟಲಿಯಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ತೀವ್ರಗೊಳ್ಳುತ್ತಿದೆ. ಇದುವರೆಗೂ ಚೀನಾದಲ್ಲಿ 3,255 ಜನರು, ಇರಾನ್‌ನಲ್ಲಿ 1,556, ಸ್ಪೇನ್‌ನಲ್ಲಿ 1,378, ಫ್ರಾನ್ಸ್‌ನಲ್ಲಿ 562 ಹಾಗೂ ಅಮೇರಿಕಾದಲ್ಲಿ 324 ಜನರು ಸಾವನ್ನಪ್ಪಿದ್ದಾರೆ. ಈ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಭಾರತದಲ್ಲಿ ಈ ಸೋಂಕು ಹರಡದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ಮೋದಿರವರು ನಿನ್ನೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಇದು ದೊಡ್ಡ ಯಶಸ್ಸನ್ನು ಕಂಡಿದೆ. ದೇಶದಲ್ಲಿ ಕರೋನಾ ಸೋಂಕು ಹರಡದಂತೆ ತಡೆಗಟ್ಟುವ ಕಾರಣಕ್ಕೆ ಈ ಕರ್ಫ್ಯೂಗೆ ಕರೆ ನೀಡಲಾಗಿತ್ತು.

ಆದರೆ, ಜನರ ಅಸಮರ್ಪಕ ಸಹಕಾರದಿಂದಾಗಿ, ಪ್ರತಿ ದಿನ ಜನರು ಕರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮೆಟ್ರೋ ರೈಲು, ಬಸ್, ರೈಲುಗಳನ್ನು ರದ್ದುಪಡಿಸಲಾಗಿತ್ತು. ಜನರು ಹೊರಹೋಗದಂತೆ ತಡೆಯಲು ಸರ್ಕಾರವು ಈ ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರಗಳೂ ಸಹ ಇದಕ್ಕೆ ಸಹಕಾರ ನೀಡುತ್ತಿವೆ.

ಯಾವಾಗಲೂ ಬಿಜಿ ಇರುತ್ತಿದ್ದ ನಗರಗಳು ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿವೆ. ವಾಹನಗಳ ಓಡಾಟವಿಲ್ಲದಿರುವುದರಿಂದ ವಾಯುಮಾಲಿನ್ಯ ಪ್ರಮಾಣವು ಕಡಿಮೆಯಾಗಿದೆ. ಮಹಾರಾಷ್ಟ್ರದ ಥಾಣೆಯ ನಗರದ ಅಧಿಕಾರಿಗಳು ಕರೋನಾ ವೈರಸ್ ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ.

ಥಾಣೆಯ ಪುರಸಭೆಯು ಕೆಲವು ದಿನಗಳ ಮಟ್ಟಿಗೆ ಶೇರ್ ಆಟೋಗಳನ್ನು ನಿಷೇಧಿಸಿದೆ. ಇದರ ಜೊತೆಗೆ ಉಬರ್ ಹಾಗೂ ಓಲಾಗಳ ಶೇರ್ ರೈಡ್ ಅನ್ನು ಸಹ ನಿಷೇಧಿಸಿದೆ. ಈ ನಿಷೇಧವು ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ. ಕರೋನಾ ಹರಡದಂತೆ ತೆಗೆದುಕೊಂಡಿರುವ ಈ ಕ್ರಮವು ಬಡ ಜನರಿಗೆ ಪೆಟ್ಟು ನೀಡಲಿದೆ ಎಂದು ಹೇಳಲಾಗಿದೆ.

ಆದರೆ ಕರೋನಾ ವೈರಸ್ ಹರಡದಂತೆ ತಡೆಯಲು ಇದನ್ನೆಲ್ಲಾ ಸಹಿಸದೇ ಬೇರೆ ದಾರಿಯಿಲ್ಲ. ಇಲ್ಲಿಯವರೆಗೆ, ಮಹಾರಾಷ್ಟ್ರದಲ್ಲಿ 60ಕ್ಕೂ ಹೆಚ್ಚು ಜನರು ಕರೋನಾ ವೈರಸ್ ನಿಂದ ಭಾದಿತರಾಗಿದ್ದಾರೆ.

ಭಾರತದ ಇತರ ರಾಜ್ಯಗಳಿಗಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಈ ಕಾರಣಕ್ಕೆ ಶೇರ್ ಆಟೋಗಳನ್ನು ನಿಷೇಧಿಸಲಾಗಿದೆ. ಇದೇ ರೀತಿಯ ಕ್ರಮಗಳನ್ನು ಹಲವು ರಾಜ್ಯಗಳು ತೆಗೆದುಕೊಂಡಿವೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications