ಉಪಕಾರ ಮರೆಯದ ರಿಷಬ್ ಪಂತ್.. ಜೀವ ಕಾಪಾಡಿದವರಿಗೆ ಆಕ್ಟಿವಾ ಸ್ಕೂಟರ್ ಗಿಫ್ಟ್ ಕೊಟ್ರು.. ವಿಡಿಯೋ ನೋಡಿ!
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ತಮ್ಮ ಅದ್ಭುತವಾದ ಆಟದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತ & ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಹುದೊಡ್ಡ ದಾಖಲೆಯೊಂದನ್ನು ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ 37 ರನ್ ಗಳಿಸುವ ಮೂಲಕ 'ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್'ನಲ್ಲಿ ಬರೋಬ್ಬರಿ 2,000 ರನ್ ಹೊಡೆದ ಸಾಧನೆ ಮಾಡಿದ್ದು, ರೋಹಿತ್ ಶರ್ಮಾ (2685 ರನ್) ಹಾಗೂ ವಿರಾಟ್ ಕೊಹ್ಲಿ (2432 ರನ್) ಬಳಿಕ 2034 ರನ್‌ಗಳಿಂದ ಮೂರನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಸದ್ಯ, ಕ್ರಿಕೆಟ್ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿರುವ ರಿಷಬ್ ಪಂತ್, 2022ರ ಡಿಸೆಂಬರ್‌ನಲ್ಲಿ ಉತ್ತರಪ್ರದೇಶದ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಆ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರ ನೆರವಿನಿಂದ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು, ಹಲವು ತಿಂಗಳಾದ ಮೇಲೆ ಕ್ರಿಕೆಟ್ ಮೈದಾನಕ್ಕೂ ಹಿಂದಿರುಗಿದ್ದರು.

2023ರ ಜನವರಿಯಲ್ಲಿ ರಿಷಬ್ ಪಂತ್ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಜೀವ ಕಾಪಾಡಿದ ರಜತ್ ಕುಮಾರ್ ಮತ್ತು ನಿಶು ಕುಮಾರ್ ಎಂಬ ಯುವಕರಿಗೆ ಧನ್ಯವಾದವನ್ನು ಅರ್ಪಿಸಿದ್ದರು. ಇತ್ತೀಚೆಗೆ ಈ ಇಬ್ಬರು ಯುವಕರಿಗೆ ಕೃತಜ್ಞತೆ ಸಲ್ಲಿಸಲು ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಿಷಬ್ ಪಂತ್ ಗಿಫ್ಟ್ ಮಾಡಿರುವ ಸ್ಕೂಟರ್‌ಗಳನ್ನು ಆ ಇಬ್ಬರು ಯುವಕರು ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ದುರ್ಘಟನೆ ವೇಳೆ ತಮ್ಮನ್ನು ರಕ್ಷಿಸಿದ ಇಬ್ಬರಿಗೆ ದ್ವಿಚಕ್ರ ವಾಹನ ಉಡುಗೊರೆಯಾಗಿ ಕೊಟ್ಟು ಕ್ರಿಕೆಟಿಗ ರಿಷಬ್ ಪಂತ್ ಉಪಕಾರ ಸ್ಮರಿಸಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

ರಿಷಬ್ ಪಂತ್ ಗಿಫ್ಟ್ ನೀಡಿರುವ ಹೋಂಡಾ ಆಕ್ಟಿವಾ 125 ಸ್ಕೂಟರ್ ವಿಶೇಷತೆಗಳೇನು: ದೇಶೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್, ರೂ.84,085 ರಿಂದ ರೂ.92,257 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಡ್ರಮ್, ಡ್ರಮ್ ಅಲಾಯ್, ಡಿಸ್ಕ್ & ಹೆಚ್-ಸ್ಮಾರ್ಟ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ.
ಈ ಸ್ಕೂಟರ್ 124 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದೆ. 6250 ಆರ್‌ಪಿಎಂನಲ್ಲಿ 8.3 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5,000 ಆರ್‌ಪಿಎಂನಲ್ಲಿ 10.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 51.23 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ನೂತನ ಆಕ್ಟಿವಾ 125 ಸ್ಕೂಟರ್ ರೆಬೆಲ್ ರೆಡ್ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್ & ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಲೆಂಟ್ ಸ್ಟಾರ್ಟರ್, ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications