ಡಕಾರ್ ರಾಲಿ 2016: ಕನ್ನಡಿಗ ಸಿಎಸ್ ಸಂತೋಷ್ ಮಿಂಚಿಂಗ್
2015ನೇ ಸಾಲಿನಲ್ಲಿ ಡಕಾರ್ ರಾಲಿಯಲ್ಲಿ ಭಾಗವಹಿಸಿದ ಚೊಚ್ಚಲ ಹಾಗೂ ಏಕ ಮಾತ್ರ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹೆಮ್ಮೆಯ ಸಿಎಸ್ ಸಂತೋಷ್ 2016 ಡಕಾರ್ ರಾಲಿಯಲ್ಲೂ ತಮ್ಮ ಮಿಂಚಿನ ಪ್ರದರ್ಶನ ಮುಂದುವರಿಸಿದ್ದಾರೆ.
ಸಿಎಸ್ ಸಂತೋಷ್- ದೇಶದ ಸರ್ವಕಾಲಿಕ ಮೊಟೊಕ್ರಾಸ್ ಚಾಂಪಿಯನ್
ಈ ವರೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ 2016 ಡಕಾರ್ ರಾಲಿ ಮೂರು ಹಂತ ಕೊನೆಗೊಂಡಾಗ ಸಿಎಸ್ ಸಂತೋಷ್ 61ನೇ ಸ್ಥಾನವನ್ನು ತಲುಪಿದ್ದು, ಒಟ್ಟಾರೆಯಾಗಿ 79ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

ಮೂರನೇ ಹಂತದಲ್ಲೂ ಕಳಪೆ ಹವಾಮಾನ ಪರಿಸ್ಥಿತಿಯಿಂದಾಗಿ ದಿನದ ಗುರಿ ಮುಟ್ಟುವ ದೂರವನ್ನು 664 ಕೀ.ಮೀ.ಗಳಿಂದ 626 ಕೀ.ಮೀ.ಗಳಿಗೆ ಇಳಿಕೆಗೊಳಿಸಲಾಗಿತ್ತು. ಇದಕ್ಕೂ ಮೊದಲು ಇದೇ ಕಾರಣದಿಂದಾಗಿ ಮೊದಲನೇ ಹಂತದ ರೇಸನ್ನು ಸಂಪೂರ್ಣವಾಗಿ ನಿಲುಗಡೆಗೊಳಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈ ಮುನ್ನ 127ನೇ ಸ್ಥಾನದಲ್ಲಿ ರೇಸ್ ಆರಂಭಿಸಿದ್ದ ಸಿಎಸ್ ಸಂತೋಷ್ ಎರಡನೇ ಹಂತದ ಕೊನೆಗೆ ಪರಿಣಾಮಕಾರಿ ಪ್ರದರ್ಶನದಿಂದಾಗಿ 86ನೇ ಸ್ಥಾನಕ್ಕೆ ತಲುಪಿದ್ದರು. ಈ ಬಗ್ಗೆ ಟ್ವೀಟ್ ಮಾಡಿಕೊಂಡಿರುವ ಸಂತೋಷ್, ತಮ್ಮ ಸುಜುಕಿ ಗಾಡಿಯ ಯಾಂತ್ರಿಕ ಹಾಗೂ ಸ್ಥಿರತೆಯ ಸಮಸ್ಯೆಯಿಂದಾಗಿ ಹಿನ್ನಡೆ ಅನುಭವಿಸಿದ್ದರು ಎಂದಿದ್ದರು. ಒಟ್ಟಾರೆಯಾಗಿ ಎರಡನೇ ಹಂತವನ್ನು 95ನೇ ಸ್ಥಾನದಲ್ಲಿ ಕೊನೆಗೊಳಿಸಿದರು.

ಡಕಾರ್ ರಾಲಿ ದಕ್ಷಿಣ ಅಮೆರಿಕ ರಾಷ್ಟ್ರಗಳಾದ ಅರ್ಜೇಂಟೀನಾ, ಚಿಲಿ ಹಾಗೂ ಬೊಲಿವಿಯಾದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ವಿಶ್ವದ ಅತ್ಯಂತ ಕಠಿಣ ಮೋಟಾರು ರೇಸ್ ಗಳಲ್ಲಿ ಒಂದಾಗಿದೆ. ಇಲ್ಲಿ ಬೈಕ್ ಮಾತ್ರವಲ್ಲದೆ ಕಾರು, ಕ್ವಾಡ್, ಟ್ರಕ್ ರೇಸ್ ಗಳು ನಡೆಯುತ್ತದೆ. ಅಲ್ಲದೆ ಸ್ಪರ್ಧಿಗಳು 15ರಷ್ಟು ಹಂತಗಳಲ್ಲಾಗಿ ಮ್ಯಾರಥನ್ 9,000 ಕೀ.ಮೀ. ದೂರವನ್ನು ಕ್ರಮಿಸಬೇಕಾಗಿದೆ.

ಈಗಾಗಲೇ ದೇಶ ಹಾಗೂ ವಿದೇಶಗಳಲ್ಲಿ ಹಲವಾರು ಕ್ರಾಸ್ ಕಂಟ್ರಿ ಹಾಗೂ ಸೂಪರ್ ಕ್ರಾಸ್ ರಾಲಿಯಲ್ಲಿ ವಿಜೇತ ಪತಾಕೆ ಹಾರಿಸಿರುವ ಸಂತೋಷ್ ಎರಡನೇ ಬಾರಿಗೆ ಡಕಾರ್ ರಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನ ಈ ಹೆಮ್ಮೆಯ ಪುತ್ರ ಕಳೆದ ವರ್ಷ 36ನೇ ಸ್ಥಾನವನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದರು.

ಕಳೆದ ವರ್ಷ ಕೆಟಿಎಂ 450 ರಾಲಿ ಬೈಕ್‌ನಲ್ಲಿ ಭಾಗವಹಿಸಿದ್ದ ಸಂತೋಷ್ ಈ ಸಲ ಸುಜುಕಿ 450 ರಾಲಿ ಮೋಟಾರ್ ಸೈಕಲ್ ಗೆ ಮೊರೆ ಹೋಗಿದ್ದಾರೆ. ಮುಂದಿನ ಕಠಿಣ ಹಂತಗಳಲ್ಲೂ ಮತ್ತಷ್ಟು ಯಶ ಸಿಗಲಿ ಎಂದು ನಾವು ಹಾರೈಸೋಣವೇ...

ಅವನು ಯಾವ ಧೋನಿ, ಕೊಹ್ಲಿಯೂ ಅಲ್ಲ; ಆದರೂ ದೌಡಾಯಿಸಿತು ಅಭಿಮಾನಿಗಳ ದಂಡು! ಮುಂದಕ್ಕೆ ಓದಲು ಕ್ಲಿಕ್ಕಿಸಿ


Click it and Unblock the Notifications








