86 ವರ್ಷಗಳ ಜೈತ್ರಯಾತ್ರೆ ಪೂರ್ಣಗೊಳಿಸಿದ 'ಡೆಕ್ಕನ್ ಕ್ವೀನ್'
1930ರ ಕಾಲಘಟ್ಟದಲ್ಲಿ ಬ್ರಿಟನ್ ಜನರ ಪ್ರಯಾಣಕ್ಕಾಗಿ ಪ್ರಾರಂಭಿಸಿದ ಮುಂಬೈ-ಪುಣೆ ನಡುವಣ 'ಡೆಕ್ಕನ್ ಕ್ವೀನ್' ರೈಲು 2016 ಜೂನ್ 01ರಂದು 86 ವಸಂತಗಳನ್ನು ಪೂರ್ಣಗೊಳಿಸಿದ್ದು, ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ.
ಆರಂಭದಲ್ಲಿ ವಾರಂತ್ಯದ ರೈಲು ಆಗಿರುವ ಡೆಕ್ಕನ್ ಕ್ವೀನ್ ಬಳಿಕ ದೈನಂದಿನ ಸಂಚಾರ ಸೇವೆಯನ್ನು ಆರಂಭಿಸಿತ್ತು. ಮುಂಬೈನ ಛತ್ರಪತಿ ಶಿವಾಜಿ ನಿಲ್ದಾಣದಿಂದ ಪಯಣ ಹೊರಡುವ ಡೆಕ್ಕನ್ ಕ್ವೀನ್ ಭಾರತೀಯ ರೈಲ್ವೆಯಲ್ಲಿ ಸ್ಟೀಮ್ ಎಂಜಿನ್ ನಿಂದ ಸುದೀರ್ಘಾವಧಿಯ ಓಡಾಡಿರುವ ರೈಲುಗಳಲ್ಲಿ ಒಂದಾಗಿದೆ.

ಹಲವು ಪ್ರಥಮಗಳು
ಡೆಕ್ಕನ್ ರಾಣಿಗೆ ಹಲವಾರು ದಾಖಲೆಗಳು ಹರಸಿಕೊಂಡು ಬಂದಿದೆ. ಭಾರತದ ಮೊದಲ ಸೂಪರ್ ಫಾಸ್ಟ್ ರೈಲು ಇದಾಗಿದೆ.

ಅತಿ ದೂರದ ವರೆಗೆ ಪ್ರಯಾಣಿಕ ರೈಲನ್ನು ಎಳದಿರುವ ಮೊದಲ ವಿದ್ಯುತ್ ಚಾಲಿತ ರೈಲು ಇದಾಗಿದೆ.

ಒಳಕೋಣೆಗಳನ್ನು ಹೊಂದಿರುವ ಭಾರತದ ಮೊದಲ ರೈಲೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಹಿಳೆಯರಿಗೆ ವಿಶೇಷ ಬೋಗಿಗಳನ್ನು ಹೊಂದಿರುವ ಮೊದಲ ರೈಲು ಕೂಡಾ ಇದಾಗಿದೆ. ಅಷ್ಟೇ ಯಾಕೆ ಮೊದಲ ಭೋಜನಾಲಯ ಹೊಂದಿದ ರೈಲೆಂಬ ಕೀರ್ತಿಯನ್ನು ಪಡೆದಿದೆ.

ಅದ್ಭುತ ಮತ್ತು ರಂಗುರಂಗಿನ ಇತಿಹಾಸವನ್ನು ಹೊಂದಿರುವ ಡೆಕ್ಕಾನ್ ಕ್ವೀನ್ ನಲ್ಲಿ 1966ರಲ್ಲಿ ಮೊದಲ ಬಾರಿಗೆ ಮೂರನೇ ದರ್ಜೆಯ (ಈಗ ಎರಡನೇ ದರ್ಜೆ) ಪ್ರಯಾಣಿಕರಿಗೂ ಸಂಚರಿಸಲು ಅನುವು ಮಾಡಿಕೊಲಾಗಿತ್ತು. ನಿಮ್ಮ ಮಾಹಿತಿಗಾಗಿ, 1966ರ ವರೆಗೆ ಪ್ರಥಮ ದರ್ಜೆ ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶವಿತ್ತು.

ಡೈನಿಂಗ್ ಗಾಗಿ 'ಐಎಸ್‌ಒ 9000' ಮಾನ್ಯತೆ ಪಡೆದಿರುವ ದೇಶದ ಎರಡನೇ ರೈಲು ಇದಾಗಿದೆ. ಇದಕ್ಕೂ ಮೊದಲು ಶಾನ್-ಇ ಭೋಪಾಲ ಎಕ್ಸ್ ಪ್ರೆಸ್ ಇದೇ ಮಾನ್ಯತೆಗೆ ಪಾತ್ರವಾಗಿತ್ತು.

ಸದ್ಯ ಮುಂಬೈ ಮತ್ತು ಪುಣೆ ನಡುವಣ 192 ಕೀ.ಮೀ. ದೂರವನ್ನು 3.15 ತಾಸಿನಲ್ಲಿ ಕ್ರಮಿಸುವ ಡೆಕ್ಕನ್ ಕ್ವೀನ್ ಹೊರಡುವಾಗ 12124 ಮತ್ತು ಹಿಂತಿರುವಾಗ 12123 ನಂಬರುಗಳನ್ನು ಪಡೆದಿದೆ.

ಪ್ರಾರಂಭದಿಂದಲೂ ಎಲೆಕ್ಟ್ರಿಕ್ ಎಂಜಿನ್ ಗಳಿಂದ ಓಡಾಡಲು ಆರಂಭಿಸಿರುವ ಡೆಕ್ಕನ್ ಕ್ವೀನ್ ಕೆಲವೊಮ್ಮೆ ಮಾತ್ರ ಎಂಜಿನ್ ತೊಂದರೆ ಕಾಣಿಸಿಕೊಂಡ್ಡಲ್ಲಿ ಡೀಸೆಲ್ ಲೋಕೋಮೋಟಿವ್ ಗಳನ್ನು ಬಳಕೆ ಮಾಡುತ್ತಿತ್ತು. ಆರಂಭದಲ್ಲಿ ಡಬ್ಲ್ಯುಸಿಎಂ 1 ಎಂಜಿನ್ ಪಡೆದಿರುವ ಡೆಕ್ಕನ್ ಕ್ವೀನ್ ಈಗ ಕಲ್ಯಾಣ್ ಘಟಕದ ಡಬ್ಲ್ಯುಸಿಎಎಂ 3 ಅಥವಾ ಡಬ್ಲ್ಯುಸಿಎಎಂ 2ಪಿ ಎಂಜಿನ್ ಗಳನ್ನು ಬಳಕೆ ಮಾಡುತ್ತಿದೆ.


Click it and Unblock the Notifications








