ಸ್ಕೂಟರ್ ಬೆನ್ನಟ್ಟಿದ ನಾಯಿಗಳ ಹಿಂಡು... ಕಾರಿಗೆ ಡಿಕ್ಕಿ... 5 ಅಡಿ ಹಾರಿ ನೆಲಕ್ಕಪ್ಪಳಿಸದ ಮಹಿಳೆ
ಬೀದಿ ನಾಯಿಗಳ ಹಾವಳಿಯಿಂದ ಅದೆಷ್ಟೋ ಮಂದಿ ವಾಹನ ಸವಾರರು ಅಪಘಾತಗಳಿಗೆ ತುತ್ತಾಗಿದ್ದಾರೆ. ಇನ್ನು ಕೆಲವು ಘಟನೆಗಳಲ್ಲಿ ಸಾವನ್ನಪ್ಪಿರುವ ಉದಾಹರಣೆಗಳು ಇವೆ. ನಾಯಿಗಳನ್ನು ಸಾಕುವವರಿಗೆ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ತಿಳಿದಿರುತ್ತದೆ. ಆದರೆ ತಿಳಿಯದವರು ಅಪಘಾತಗಳನ್ನು ಎದುರಿಸಬೇಕಾಗುತ್ತದೆ. ಅಂತಹದೇ ಘಟನೆ ಇಲ್ಲೂ ನಡೆದಿದೆ.
ಒಡಿಶಾದಲ್ಲಿ ನಡೆದ ಈ ಘಟನೆಯು ಬೀದಿನಾಯಿಗಳ ಹಿಂಡು ಹೇಗೆ ಅಪಘಾತಕ್ಕೆ ಕಾರಣವಾಯಿತು ಎಂಬುದನ್ನು ತೋರಿಸುತ್ತದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಕೂಟರ್‌ನಲ್ಲಿದ್ದವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಈ ವಿಡಿಯೋ ನೋಡಲು ತುಸು ಭಯವಾಗುತ್ತದೆ, ಸ್ಕೂಟರ್‌ನ ಫ್ಲೋರ್‌ಬೋರ್ಡ್‌ನಲ್ಲಿ ನಿಂತಿರುವ ಮಗು ಮತ್ತು ಸ್ಕೂಟರ್ ಓಡಿಸುತ್ತಿರುವ ಮಹಿಳೆಯೊಂದಿಗೆ ಹಿಂಬದಿ ಮತ್ತೊಬ್ಬರು ಮಹಿಳೆ ಕುಳಿತಿರುವುದನ್ನು ನೋಡಬಹದು. ಒಂದೇ ಸಮನೇ ಕಾರಿಗೆ ಡಿಕ್ಕಿ ಹೊಡೆಯುವ ದೃಶ್ಯ ಒಮ್ಮೆಲೆ ಬೆಚ್ಚಬೀಳಿಸುತ್ತದೆ.

ಮಾಹಿತಿಯ ಪ್ರಕಾರ ಇಬ್ಬರು ಮಹಿಳೆಯರು ಹಾಗೂ ಒಂದು ಸಣ್ಣ ಮಗು ಮುಂಜಾನೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸುಮಾರು 6 ಬೀದಿ ನಾಯಿಗಳು ಸ್ಕೂಟರ್ ಅನ್ನು ಬೆನ್ನಟ್ಟಿರುವುದನ್ನು ನಾವು ನೋಡಬಹುದು. ನಿಧಾನವಾಗಿಯೇ ಚಲಿಸುತ್ತಿದ್ದ ಸ್ಕೂಟರ್ ಅನ್ನು ಏಕಾ ಏಕಿ ನಾಯಿಗಳು ಬೆನ್ನಟ್ಟಿವೆ. ಈ ವೇಳೆ ಗಾಬರಿಗೊಂಡ ಮಹಿಳೆ, ನಾಯಿಗಳು ತಮ್ಮನ್ನು ಕಚ್ಚುವ ಆತಂಕದಿಂದ ಒಂದೇ ಸಮನೆ ವೇಗವನ್ನು ಹೆಚ್ಚಿಸಿದ್ದಾರೆ.
ಅದೇ ಅತಿವೇಗದಲ್ಲಿ ಮಹಿಳೆ ನಾಯಿಗಳನ್ನು ನೋಡುತ್ತಾ ಆತಂಕಗೊಂಡು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಅವರು ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದು, ಒಂದೆರಡು ನಾಯಿಗಳು ಸ್ಕೂಟರ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದವು. ಈ ವೇಳೆ ಮಗು ಸೇರಿದಂತೆ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಡಿಕ್ಕಿಯಾಗುವ ಮುನ್ನದವರೆಗೆ ಅಟ್ಟಿಸಿಕೊಂಡು ಬಂದ ನಾಯಿಗಳು ಡಿಕ್ಕಿಯಾದ ಬಳಿಕ ಅಲ್ಲಿಂದ ಪರಾರಿಯಾಗಿವೆ. ಡಿಕ್ಕಿಗೆ ಒಳಗಾದ ಕಾರಿಗೂ ಹಿಂಬದಿ ಡೆಂಟ್ ಆಗಿದೆ.

ಅಪಘಾತಕ್ಕೆ ಒಳಗಾದ ಮಹಿಳೆ ಮಾತನಾಡಿ, "ನಾವು ಬೆಳಿಗ್ಗೆ 6 ಗಂಟೆಗೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಆರರಿಂದ ಎಂಟು ನಾಯಿಗಳು ನಮ್ಮನ್ನು ಹಿಂಬಾಲಿಸಲು ಪ್ರಾರಂಭಿಸಿದವು. ಆಗ, ನಾನು ಸ್ಕೂಟರ್‌ನ ವೇಗವನ್ನು ಹೆಚ್ಚಿಸಲು ನಿರ್ಧರಿಸಿದೆ, ಇಲ್ಲದಿದ್ದರೆ ನಾಯಿಗಳು ಹಿಂಬದಿ ಕುಳಿತಿದ್ದವರನ್ನು ಕಚ್ಚುತ್ತಿದ್ದವು. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ದೊಡ್ಡ ದುರಂತವನ್ನು ತಪ್ಪಿಸಲಾಗಿದೆ. ಇಲ್ಲದಿದ್ದರೇ ನಾವು ವಿದ್ಯುತ್ ಕಂಬ ಅಥವಾ ಚರಂಡಿಗೆ ಡಿಕ್ಕಿ ಹೊಡೆದಿದ್ದರೆ ಅಪಘಾತವು ಇನ್ನೂ ತೀರ್ವವಾಗಿರುತ್ತಿತ್ತು ಎಂದರು.
ನಿಯಮ ಉಲ್ಲಂಘನೆ:
ಈ ಘಟನೆಯಲ್ಲಿ ಮಹಿಳೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಾಯಿಗಳು ಬೆನ್ನಟ್ಟಿದ್ದಕ್ಕೆ ಕೆಳಗೆ ಬಿದ್ದು ಗಾಯಗಳಾಗಿವೆ ಸರಿ, ಆದರೆ ಹೆಲ್ಮೆಟ್ ಧರಿಸಿದ್ದರೇ ಅದರ ತೀರ್ವತೆ ಕಡಿಮೆ ಇರುತ್ತಿತ್ತು. ಟ್ರಾಫಿಕ್ ಪೋಲೀಸರು ಪದೇ ಪದೆ ಹೆಲ್ಮೆಟ್ ಧರಿಸಿ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇದನ್ನು ಪಾಲಿಸದೇ ಇದ್ದಾಗ ಇನ್ನೊಬ್ಬರ ತಪ್ಪಿನಲ್ಲಿ ಅಪಘಾತವಾದರೂ ನಿಯಮ ಉಲ್ಲಂಘಿಸಿದ್ದಕ್ಕೆ ನಮ್ಮ ಕಡೆಯು ತಪ್ಪಿದೆ ಎಂದು ಸಾಭಿತಾಗುತ್ತದೆ.
ಚಾಲನೆ ವೇಳೆ ನಾಯಿಗಳನ್ನು ಎದುರಿಸುವುದೇಗೆ?
ನಾಯಿಗಳು ಹೆಚ್ಚಾಗಿ ರಸ್ತೆಗಳಲ್ಲಿ ವಿನೋದಕ್ಕಾಗಿ ಬೆನ್ನಟ್ಟುತ್ತವೆ. ಅವುಗಳಿಗೆ ಕಚ್ಚುವ ಉದ್ದೇಶವೇ ಇರುವುದಿಲ್ಲ, ಆದರೆ ನಮ್ಮ ಗಾಬರಿಯೇ ಅಪಘಾತಕ್ಕೆ ಕಾರಣವಾಗುತ್ತದೆ. ವಿಡಿಯೋದಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು, ನಾಯಿಗಳು ಕೆಳಗೆ ಬಿದ್ದ ನಂತರ ಗೊಂದಲಕ್ಕೊಳಗಾಗಿ ಅವರ ಮೇಲೆ ದಾಳಿ ಮಾಡದೆ ಹಿಂತಿರುಗಿವೆ. ಹಾಗಾಗಿ ನಾಯಿಗಳು ಬೆನ್ನಟ್ಟಿದಾಗ ಗಾಬರಿಯಾಗದೇ ವಾಹನವನ್ನು ಒಮ್ಮೆಲೆ ನಿಲ್ಲಿಸಬೇಕು, ಆಗ ಅವು ಕೂಡ ಬೆನ್ನಟ್ಟುವುದನ್ನು ನಿಲ್ಲಿಸಿ ತಮ್ಮ ಪಾಡಿಗೆ ಹೋಗುತ್ತವೆ.
ಕೆಲವೊಮ್ಮೆ ನಾಯಿಗಳು ಬೆನ್ನಟ್ಟಲು ಇತರ ಕಾರಣಗಳು ಇರುತ್ತವೆ. ಅಪರೂಪದ ಸಂದರ್ಭಗಳಲ್ಲಿ ನಾವು ಒಂದು ನಾಯಿಯ ಜೊತೆಗೆ ಆಟವಾಡಿದ್ದಾಗ ಅದರ ವಾಸನೆ ನಮ್ಮ ಮೇಲೆ ಅಥವಾ ವಾಹನ ಮೇಲೆ ಇದ್ದಾಗ, ರಸ್ತೆಗಳಲ್ಲಿನ ನಾಯಿಗಳು ಅದನ್ನು ಪತ್ತೆಗಚ್ಚಿ ನಮ್ಮನ್ನು ಬೆನ್ನಟ್ಟುತ್ತವೆ. ಇದಕ್ಕೆ ಕಾರಣ ನಾಯಿಗಳು ತಮ್ಮ ಏರಿಯಾ ಪ್ರಾಣಿಗಳನ್ನು ಬಿಟ್ಟು ಹೊರಗಿನ ನಾಯಿಗಳನ್ನು ಶತ್ರುಗಳಂತೆ ಪರಿಗಣಿಸುತ್ತವೆ. ಹಾಗಾಗಿ ಬೆನ್ನಟ್ಟುತ್ತವೆ, ಆದರೆ ನಮ್ಮನ್ನು ಕಚ್ಚುವುದಿಲ್ಲ. ಹಾಗಾಗಿ ವಾಹನಗನ್ನು ಕೂಡಲೇ ನಿಲ್ಲಿಸಿದರೆ ಸಂಭವನೀಯ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು.


Click it and Unblock the Notifications