ಕರ್ನಾಟಕಕ್ಕೆ ಡಬಲ್ ಧಮಾಕ: ನಾಳೆ 2 ವಂದೇ ಭಾರತ್ ಎಕ್ಸ್‌ಪ್ರೆಸ್ ಲೋಕಾರ್ಪಣೆ.. ಎಲ್ಲಿಂದ ಎಲ್ಲಿಗೆ?
ಕರ್ನಾಟಕದ ಜನರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಕ್ಕೆ 2 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಿಗಲಿದೆ ಎಂದು ನೈಋತ್ಯ ರೈಲ್ವೆ (South Western Railway) ಶನಿವಾರ ಪ್ರಕಟಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು (Kalaburagi - SMVT Bengaluru) ಹಾಗೂ ಮೈಸೂರು - ಬೆಂಗಳೂರು - ಚೆನ್ನೈ (Mysuru Bengaluru- Chennai) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಮಾರ್ಚ್ 12) ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ 7ಕ್ಕೆ ಏರಿಕೆಯಾಗಲಿದೆ.

ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 22231), ಕಲಬುರಗಿಯಿಂದ ಬೆಳಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರನ್ನು ತಲುಪಲಿದೆ. ಮಾರ್ಗ ಮಧ್ಯೆ ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ ಹಾಗೂ ಯಲಹಂಕದಲ್ಲಿ ನಿಲುಗಡೆಯಾಗಲಿದೆ. ಶುಕ್ರವಾರ ಹೊರತುಪಡಿಸಿ ವಾರದ ಎಲ್ಲ ದಿನವು ಕಾರ್ಯಾಚರಣೆಯನ್ನು ನಡೆಸಲಿದೆ.
ಎಸ್‌ಎಂವಿಟಿ ಬೆಂಗಳೂರಿಂದ ಮಧ್ಯಾಹ್ನ 2:40ಕ್ಕೆ ಸಂಚಾರವನ್ನು ಆರಂಭಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 22232), ರಾತ್ರಿ 11:30ರ ಸುಮಾರಿಗೆ ಕಲಬುರಗಿಗೆ ಹೋಗಲಿದೆ. ಈ ರೈಲು ಗರಿಷ್ಠ ವೇಗದಲ್ಲಿ ಓಡಾಟವನ್ನು ನಡೆಸುವುದರಿಂದ ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿಯು ಕಡಿಮೆಯಾಗಲಿದ್ದು, 543 ಕಿಲೋಮೀಟರ್ ಅಂತರವನ್ನು 8.45 ಗಂಟೆಗಳಲ್ಲಿ ಕ್ರಮಿಸಲಿದೆ.

ಕಲಬುರುಗಿ ಮಾತ್ರವಲ್ಲದೆ ಮೈಸೂರು - ಬೆಂಗಳೂರು - ಎಂಜಿಆರ್ ಚೆನ್ನೈ (Mysuru - Bengaluru- MGR Chennai) ನಡುವೆಯು ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಶುರು ಮಾಡಲಿದೆ. ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 12:20ರ ಸುಮಾರಿಗೆ ಎಂಜಿಆರ್ ಚೆನ್ನೈ ನಿಲ್ದಾಣವನ್ನು ತಲುಪಲಿದೆ. ಮಾರ್ಗ ಮಧ್ಯೆ ಮಂಡ್ಯ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ ಹಾಗೂ ಕಟಪಾಡಿಯಲ್ಲಿ ನಿಲುಗಡೆಯಾಗುತ್ತದೆ.
ಎಂಜಿಆರ್ ಚೆನ್ನೈ ರೈಲು ನಿಲ್ದಾಣದಿಂದ ಸಂಜೆ 5 ಗಂಟೆಗೆ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾತ್ರಿ 11:20ರ ಮೈಸೂರನ್ನು ತಲುಪಲಿದೆ. ಬುಧವಾರ ಹೊರತುಪಡಿಸಿ, ವಾರದ ಎಲ್ಲ ದಿನವು ಈ ರೈಲು ಸಂಚಾರವನ್ನು ನಡೆಸಲಿದ್ದು, ಪ್ರಯಾಣದ ಅವಧಿಯು 6.5 ಗಂಟೆ ಇರಲಿದೆ. ಪ್ರಮುಖ ಐಟಿ ನಗರಗಳೊಂದಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟವನ್ನು ನಡೆಸುವುದರಿಂದ ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮ ವೃದ್ಧಿಸಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈಸ್ವೀಡ್ ರೈಲಾಗಿ ಹೆಸರುವಾಸಿಯಾಗಿದ್ದು, ಗರಿಷ್ಠ ವೇಗದಲ್ಲಿ ಸಂಚರಿಸುತ್ತದೆ. ಜೊತೆಗೆ ಇದರಲ್ಲಿ ಪ್ರಯಾಣಿಕರಿಗೂ ಐಷಾರಾಮಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ರೈಲು ಆರಾಮದಾಯಕ ಆಸನಗಳು, ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು, ವೈಫೈ ವ್ಯವಸ್ಯೆ, ಸ್ವಯಂ ಚಾಲಿತ ಬಾಗಿಲು ಹಾಗೂ ಅಗ್ನಿ ನಿರೋಧಕ ಸಾಧನಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications