ಎಚ್ಚರ! ಜಾಸ್ತಿ ಹೊತ್ತು ಡ್ರೈವಿಂಗ್ ಮಾಡಿದರೆ ಹೃದಯ ಕಾಯಿಲೆ ಗ್ಯಾರಂಟಿ
ನೀವು ಜಾಸ್ತಿ ಹೊತ್ತು ಡ್ರೈವಿಂಗ್ ನಲ್ಲೇ ಕಾಲ ಕಳೆಯುತ್ತೀರಾ? ಹಾಗಿದ್ದರೆ ಈ ದಿನದಿಂದಲೇ ದೈನಂದಿನ ವ್ಯಾಯಾಮ ಮಾಡುವುದನ್ನು ರೂಢಿ ಮಾಡಿಕೊಳ್ಳಿರಿ. ಯಾಕೆಂದರೆ ಅಧ್ಯಯನ ವರದಿಯೊಂದು ಬಿಡುಗಡೆ ಮಾಡಿರುವ ಆಘಾತಕಾರಿ ಅಂಶದ ಪ್ರಕಾರ, ಜಾಸ್ತಿ ಹೊತ್ತು ಡ್ರೈವಿಂಗ್ ಮಾಡಿದ್ದಲ್ಲಿ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗಲಿದೆ.
ನೀವು ಕಾರಿನಲ್ಲಿ ಡ್ರೈವಿಂಗ್ ಗಾಗಿ ವ್ಯಯ ಮಾಡುತ್ತಿರುವ ಸಮಯವು ಹೆಚ್ಚಾದ್ದಲ್ಲಿ ಖಂಡಿತವಾಗಿಯೂ ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು ಸೃಷ್ಟಿಯಾಗಲಿದೆ ಎಂಬುದನ್ನು ಅಧ್ಯಯನ ವರದಿಯು ಎಚ್ಚರಿಸುತ್ತದೆ.

ಆಸ್ಟ್ರೇಲಿಯನ್ ಕ್ಯಾಥಲಿಕ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಆಘಾತಕಾರಿ ವಿವರಗಳು ಕಂಡುಬಂದಿದೆ. ಇದರ ಪ್ರಕಾರ ದಿನವೊಂದರಲ್ಲಿ ನೀವು ಚಾಲನೆಗೆ ವ್ಯಯ ಮಾಡುವ ಸಮಯದ ಪ್ರಮಾಣವು ನಿಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ.

ದಿನವೊಂದರಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಡ್ರೈವಿಂಗ್ ನಲ್ಲಿ ಕಳೆಯುವ ಚಾಲಕರ ಸೊಂಟದ ಮತ್ತು ದೇಹದ ತೂಕದಲ್ಲಿ ಗಣನೀಯವಾಗಿ ವರ್ಧನೆಯುಂಟಾಗುತ್ತದೆ.

ಇದು ದಿನದಲ್ಲಿ 15 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆ ಚಾಲನೆ ಮಾಡುವ ಚಾಲಕರ ಜೊತೆ ಹೋಲಿಸಿದಾಗ ಒಟ್ಟಾರೆ ತೂಕಗಳಲ್ಲಿ 2.3 ಕೆ.ಜಿಗಳಷ್ಟು ಜಾಸ್ತಿಯಾಗಿದೆ.

ಇದು ಕ್ರಮೇಣ ಹೃದಯ ಸಂಬಂಧಿ ಕಾಯಿಲೆಗಳಿಗೆ ಎಡೆ ಮಾಡಿಕೊಳ್ಳಲಿದೆ ಎಂದು ಆರೋಗ್ಯ ಸಮಸ್ಯೆದ ಬಗ್ಗೆ ಸಂಶೋಧಕರು ವಿವರಣೆ ನೀಡುತ್ತಾರೆ.

ಅಲ್ಲದೆ ಜಾಸ್ತಿ ಹೊತ್ತು ಚಾಲನೆ ಮಾಡುವವರ ಸೊಂಟವು 1.5 ಸೆಂಟಿಮೀಟರ್ ಗಳಷ್ಟು ಹೆಚ್ಚು ಅಗಲವಾಗಿರುತ್ತದೆ. ಇದು ಸಹ ಸಮಸ್ಯೆಗೆ ಕಾರಣವಾಗಲಿದೆ.

34ರಿಂದ 65 ಪ್ರಾಯ ಪರಿಧಿಯ ಸುಮಾರು 2,000ರಷ್ಟು ವಯಸ್ಕರ ಚಾಲನೆ ಅಭ್ಯಾಸಕ್ಕೆ ಅನುಗುಣವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಮಾನದಂಡಗಳನ್ನು ಅನುಸರಿಸಲಾಗಿತ್ತು.

ಚಾಲಕರ ಆಹಾರ ಕ್ರಮ, ದೈಹಿಕ ಚಟುವಟಿಕೆ, ಮದ್ಯಪಾನ ಇತ್ಯಾದಿ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಅಧ್ಯಯನ ನಡೆಸಲಾಗಿತ್ತು.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಅಧ್ಯಯನ ತಂಡದ ಅಧ್ಯಕ್ಷ ತಕೆಮಿ ಸುಗಿಯಾಮಾ, "ಹೇಗೆ ಜಾಸ್ತಿ ಹೊತ್ತು ಟಿ.ವಿ ವೀಕ್ಷಣೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆಯೋ ಅದೇ ರೀತಿ ಹೆಚ್ಚು ಹೊತ್ತು ಚಾಲನೆ ಮಾಡಿದ್ದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಸೃಷ್ಟಿ ಮಾಡಲಿದೆ" ಎಂದಿದ್ದಾರೆ.


Click it and Unblock the Notifications








