ತನ್ನ ಪ್ರಯತ್ನ ವಿಫಲವಾದ ಬೆನ್ನಲ್ಲೇ ಭಾರತದಲ್ಲಿ ಯಶಸ್ವಿ ಉಡಾವಣೆ... ISRO ವನ್ನು ಮೆಚ್ಚಿದ ವಿಶ್ವದ ಧನವಂತ
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ)-ಸಿ 55 ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದನ್ನು ಮೆಚ್ಚಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ.
ಸದ್ಯ ಬಾಹ್ಯಾಕಾಶದಲ್ಲಿ ತಮ್ಮ ಸಂಶೋಧನೆ ಹಾಗೂ ರಾಕೆಟ್ ಉಡಾವಣೆಯಲ್ಲಿ ಕ್ರಾಂತಿ ಸೃಷ್ಟಿಸಿದ್ದ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ, ತಮ್ಮ ಇತ್ತೀಚಿನ ರಾಕೆಟ್ ಉಡಾವಣೆಯಲ್ಲಿ ವಿಫಲವಾಗಿತ್ತು. ತಮ್ಮ ಸ್ಪೇಸ್ ಎಕ್ಸ್‌ನಿಂದ ಮುಂದಿನ ಪೀಳಿಗೆಯ ರಾಕೆಟ್ ಸ್ಟಾರ್‌ಶಿಪ್ ಪರೀಕ್ಷೆಯು ಸ್ಫೋಟದಲ್ಲಿ ಕೊನೆಗೊಂಡ ಕೆಲವೇ ದಿನಗಳಲ್ಲಿ ಇಸ್ರೋದ ಯಶಸ್ವಿ ಉಡಾವಣೆಯಾಗಿದೆ. ಈ ಕುರಿತು PSLV- C55/TeLEOS-2 ಮಿಷನ್ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು.

TeLEOS-2 ಮತ್ತು LUMELITE-4 ಉಪಗ್ರಹಗಳನ್ನು ಹೊತ್ತೊಯ್ದ ರಾಕೆಟ್ ಅವುಗಳ ಉದ್ದೇಶಿತ 586 ಕಿ.ಮೀ ವೃತ್ತಾಕಾರದ ಕಕ್ಷೆಗೆ ನಿಖರವಾಗಿ ಇರಿಸಿತು ಎಂದು ಇಸ್ರೋ ಬರೆದುಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್ ಮಸ್ಕ್ ಅಭಿನಂದಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ದೇಶದ ರಾಕೆಟ್ ಆಗಲಿ ಅದನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿ ತನ್ನ ಕಕ್ಷೆಗೆ ಸೇರುವಂತೆ ಮಾಡಲು ಸಾವಿರಾರು ಮಂದಿ ವಿಜ್ಞಾನಿಗಳ ಶ್ರಮವಿರುತ್ತದೆ. ಅದರಲ್ಲೂ ಕಡಿಮೆ ವೆಚ್ಚದಲ್ಲಿ ರಾಕೆಟ್ ತಯಾರಿಸುವುದು ಎಂದರೆ ಅಷ್ಟು ಸುಲಭವಲ್ಲ.
ಆದರೆ ಮೊದಲಿನಿಂದಲೂ ನಮ್ಮ ಇಸ್ರೋ ಇತರ ದೇಶಗಳಿಗೆ ಹೋಲಿಸಿಕೊಂಡರೆ ಕಡಿಮೆ ಖರ್ಚಿನೊಂದಿಗೆ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಜನಪ್ರಿಯತೆಯನ್ನು ಪಡೆದಿದೆ. ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ವಿಷಯಕ್ಕೆ ಬಂದರೆ, ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದ ಚಂದ್ರ ಮತ್ತು ಮಂಗಳ ಗ್ರಹಗಳ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾದ ರಾಕೆಟ್ ಸುಮಾರು ನಾಲ್ಕು ನಿಮಿಷಗಳ ಕಾಲ ಉರಿದು ಆಕಾಶಕ್ಕೆ ಹಾರುವಾಗ ಸ್ಫೋಟಿಸಿದೆ. ಬಾಹ್ಯಾಕಾಶ ನೌಕೆಯಿಂದ ಬೂಸ್ಟರ್ ಅನ್ನು ಬೇರ್ಪಡಿಸುವಾಗ ವಿಫಲವಾಗಿದೆ ಎನ್ನಲಾಗಿದೆ.

ಇಸ್ರೋದ ವಿಜ್ಞಾನಿಗಳ ಸತತ ಪರಿಶ್ರಮದಿಂದ PSLV-C55 ಮಿಷನ್ ಅನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಇಸ್ರೋದಿಂದ ನಡೆಸಲಾದ ವರ್ಷದ ಮೂರನೇ ಪ್ರಮುಖ ಉಡಾವಣೆ ಆಗಿದೆ. PSLV-C55 ಬಾಹ್ಯಾಕಾಶದ ಪೂರ್ವ ದಿಕ್ಕಿನಲ್ಲಿ ಕಡಿಮೆ ಇಳಿಜಾರಿನ ಕಕ್ಷೆಯನ್ನು ಪ್ರವೇಶಿಸಿತು. ಇದು 228 ಟನ್ PSLV ಗಾಗಿ 57 ನೇ ಹಾರಾಟವಾಗಿದೆ, ಇದು ಉಪಗ್ರಹ ಉಡಾವಣೆಗಳಿಗೆ ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ ಆಯ್ಕೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್-ಸಿ 55
ಇಸ್ರೋ ಇದೀಗ ಉಡಾವಣೆಗೊಳಿಸಿರುವ ಸಿ55 ನಲ್ಲಿ ಎರಡು ಉಪಗ್ರಹಗಳನ್ನು ಸಿಂಗಾಪುರದ ಸರ್ಕಾರಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಒಟ್ಟು 757 ಕಿಲೋಗ್ರಾಂಗಳಷ್ಟು ತೂಕವಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಪೇಲೋಡ್ TeLEOS-2 ಆಗಿತ್ತು, ಇದು ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಆಗಿದ್ದು, ಇದು 1-ಮೀಟರ್ ಪೂರ್ಣ-ಪೋಲಾರಿಮೆಟ್ರಿಕ್ ರೆಸಲ್ಯೂಶನ್ ಇಮೇಜಿಂಗ್‌ನೊಂದಿಗೆ ಎಲ್ಲಾ-ಹವಾಮಾನ, ಹಗಲು ಮತ್ತು ರಾತ್ರಿ ಕವರೇಜ್ ಅನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ.

ಎರಡು ಗ್ರಾಹಕ ಉಪಗ್ರಹಗಳ ಜೊತೆಗೆ, ಈ ಕಾರ್ಯಾಚರಣೆಯು ಪಿಎಸ್‌ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯೂಲ್ (POEM) ಅನ್ನು ಸಹ ಒಳಗೊಂಡಿದೆ. ಇದು ರಾಕೆಟ್‌ನ ಪುನರಾವರ್ತಿತ ನಾಲ್ಕನೇ ಹಂತವಾಗಿದ್ದು, ಬೇರ್ಪಡಿಸಲಾಗದ ಪೇಲೋಡ್‌ಗಳೊಂದಿಗೆ ಪರೀಕ್ಷೆಗಳನ್ನು ನಡೆಸಲು ಇಸ್ರೋ ಪ್ರಾಯೋಗಿಕ ವೇದಿಕೆಯಾಗಿ ಅಭಿವೃದ್ಧಿಪಡಿಸಿದೆ. ಈ ಯಶಸ್ವಿ ಉಡಾವಣೆಯು ಇಸ್ರೋ ಸಾಮರ್ಥ್ಯವನ್ನು ಮತ್ತೊಮ್ಮೆ ವಿಶ್ವಕ್ಕೆ ತೋರಿದಂತಾಗಿದೆ. ಮುಂದಿನ ದಿನಗಳಲ್ಲಿ ಇಸ್ರೋದಿಂದ ಇಂತಹ ಹೆಚ್ಚಿನ ಯಶಸ್ವಿ ಉಡಾವಣೆಗಳಾಗಬೇಕು ಎಂಬುದು ನಮ್ಮ ಆಶಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications