ಭಾರತಕ್ಕೆ ಹಾರಿತು ವಿಶ್ವದ ಅತ್ಯಂತ ದುಬಾರಿ ವಿಮಾನ
ಇನ್ನು ಮುಂದೆ ವಿಮಾನದಲ್ಲಿ ಸಂಚರಿಸುವಾಗ ದುಬಾರಿ ಫ್ಲ್ಯಾಟ್ ನಲ್ಲಿ ಲಭ್ಯವಾಗುವ ಎಲ್ಲ ಸೌಲಭ್ಯಗಳು ನಿಮಗೆ ಲಭ್ಯವಾಗಲಿದೆ. ಅಂತೆಯೇ ಪ್ರಯಾಣದುದ್ಧಕ್ಕೂ ಆರಾಮವಾಗಿ ಮಗುವಿನಂತೆ ನಿದ್ರಿಸಿ ಸಂಚರಿಸಬಹುದಾಗಿದೆ.
ಅರಬ್ ರಾಷ್ಟ್ರದ ಎರಡನೇ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಎತಿಹಾಡ್ ಏರ್ ವೇಸ್ ಇಂತಹದೊಂದು ವಿನೂತನ ಕಲ್ಪನೆಯೊಂದಿಗೆ ಮುಂದೆ ಬಂದಿದ್ದು, 2016 ಮೇ 01ರಂದು ದುಬೈನಿಂದ ಮುಂಬೈಗೆ ಮೊದಲ ಹಾರಾಟವನ್ನು ನಡೆಸಿದೆ.

ಇದರೊಂದಿಗೆ ದುಬೈ-ಮುಂಬೈ ಹಾದಿಯು ವಿಶ್ವದ ಅತ್ಯಂತ ದುಬಾರಿ ವಿಮಾನಯಾನಗಳ ಸಾಲಿಗೆ ಸೇರಿಕೊಂಡಿದ್ದು, ಒಮ್ಮೆ ಪ್ರಯಾಣಿಸಬೇಕಾದ್ದಲ್ಲಿ 3.31 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

496 ಮಂದಿಗೆ ಆರಾಮದಾಯಕವಾಗಿ ಪಯಣಿಸಬಹುದಾದ ಈ ವಿಮಾನದಲ್ಲಿ ನಿವಾಸ, ಎರಡು ಐಷಾರಾಮಿ ಕೊಠಡಿಗಳು, ಸ್ನಾನ ಗೃಹ, ಡಬಲ್ ಬೆಡ್ ರೂಂ ಮತ್ತು ಲಿವಿಂಗ್ ಕೊಠಡಿಗಳಿರಲಿದೆ.

ಪ್ರಸ್ತುತ ದುಬೈ ಮತ್ತು ಮುಂಬೈ ನಡುವಣ ಯಾತ್ರೆ ಆರಂಭಿಸಲಾಗಿದೆ. ಅತಿ ಶೀಘ್ರದಲ್ಲೇ ನ್ಯೂಯಾರ್ಕ್ - ಮುಂಬೈ ಮತ್ತು ಲಂಡನ್ - ಮುಂಬೈ ಪಯಣವನ್ನು ಆರಂಭಿಸಲಾಗುವುದು.

ನ್ಯೂಯಾರ್ಕ್-ಮುಂಬೈ ಮತ್ತು ಲಂಡನ್-ಮುಂಬೈ ನಡುವಣ ಯಾತ್ರೆ ಶುಲ್ಕವನ್ನು ಅನುಕ್ರಮವಾಗಿ 25.22 ಮತ್ತು 17.25 ಲಕ್ಷ ರು.ಗಳಷ್ಟು ನಿಗದಿಪಡಿಸಲಾಗಿದೆ.

ವಿಮಾನದೊಳಗಿರುವ ನಿವಾಸದಲ್ಲಿ 32 ಇಂಚುಗಳ ದೊಡ್ಡದಾದ ಎಲ್ ಸಿಡಿ ಫ್ಲ್ಯಾಟ್ ಟಿ.ವಿಯನ್ನು ಆಳವಡಿಸಲಾಗಿದೆ. ಇನ್ನು ಭೋಜನ ಸೇವೆಗಾಗಿ ಮೇಲಾಳುಗಳನ್ನು ನಿಯೋಜಿಸಲಾಗಿದೆ.

ಇನ್ನುಳಿದಂತೆ ಲೆಥರ್ ಹೋದಿಕೆಯ ಸೋಫಾ ಸೆಟ್, ಡೈನಿಂಗ್ ಟೇಬಲ್ ಮತ್ತು ಆಲಂಕಾರ ಮತ್ತು ಲೈಟಿಂಗ್ಸ್ ಗಳನ್ನು ಕಾಣಬಹುದಾಗಿದೆ.

ವಿಮಾನಯಾನ ಮೂಲಗಳ ಪ್ರಕಾರ ಮುಂಬೈ-ಅಬುದಾಬಿ ಅತ್ಯಂತ ಬಿಡುವಿಲ್ಲದ ಹಾದಿಗಳಲ್ಲಿ ಒಂದಾಗಿದೆ. ಪ್ರಸ್ತುತ ರಜಾ ದಿನಗಳು ಬಂದಿರುವುದರಿಂದ ಗರಿಷ್ಠ ಸೇವೆಯನ್ನು ಗ್ರಾಹಕರಿಗೆ ಒದಗಿಸಲು ಎತಿಹಾಡ್ ಮುಂದಾಗಿದೆ.

ಈ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಒದಗಿಸಲು ಎ380-800 ವಿಮಾನವನ್ನು ಎತಿಹಾಡ್ ಬಳಕೆ ಮಾಡಲಾಗುತ್ತಿದೆ. ಇದು ವಿಶ್ವದ ಅತಿ ದೊಡ್ಡ ವಿಮಾನಗಳಲ್ಲಿ ಒಂದಾಗಿದೆ.

ಒಟ್ಟಿನಲ್ಲಿ ಯಾತ್ರಿಕರು ಗಮ್ಯಸ್ಥಾನ ತಲುಪುವ ಮುನ್ನವೇ ಸ್ನಾನ ಮಾಡಿ ಫ್ರೆಶ್ ಆಗಬಹುದಾಗಿದೆ. ಅಲ್ಲದೆ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಮಹಾರಾಷ್ಟ್ರ ದಿನಾಚರಣೆಯಂದೇ ಎತಿಹಾಡ್ ನ ಪ್ರಶಸ್ತಿ ವಿಜೇತ ಐಷಾರಾಮಿ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿರುವುದು ಮಗದೊಂದು ವಿಶೇಷ.

ಈ ನಡುವೆ ಮಹಾರಾಷ್ಟ್ರದೆಲ್ಲೆಡೆ ಬರ ಸಮಸ್ಯೆ ಇರುವುದರಿಂದ ಎತಿಹಾಡ್ ವಿಮಾನಕ್ಕೆ ಸಾಂಪ್ರದಾಯಿಕವಾಗಿ ನೀರನ್ನು ಚಿಮ್ಮಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ.


Click it and Unblock the Notifications








