ಟೊಯೋಟಾ ಡೀಲರ್‌ಗೆ ಶಾಕ್: ಎತ್ತಿನಗಾಡಿಯಲ್ಲಿ ಬಂದು ರೂ. 1.5 ಕೋಟಿಯ ಕಾರು ಖರೀದಿಸಿದ ರೈತ!
ರೈತನೊಬ್ಬ ವಿಶ್ವದ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಟೊಯೊಟಾ ವೆಲ್‌ಫೈರ್ (Toyota Vellfire) ಕಾರಿನ ಡೆಲಿವರಿ ಪಡೆದುಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ಇಲ್ಲಿ ವಿಶೇಷವೆಂದರೆ ರೈತ ಎತ್ತಿನ ಗಾಡಿಯಲ್ಲಿ ಶೋರೂಂಗೆ ತಲುಪಿರುವುದು, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ರೈತನಿಗೆ ಡೀಲರ್‌ಶಿಪ್ ನಲ್ಲಿ ಭವ್ಯ ಸ್ವಾಗತ ದೊರೆತಿದ್ದು, ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ಹೊಸ ಕಾರನ್ನು ಬರಮಾಡಿಕೊಂಡರು. ಅಷ್ಟಕ್ಕೂ ಈ ರೈತ ಯಾರು? ಕಾರನ್ನು ಪಡೆಯಲು ಎತ್ತಿನಗಾಡಿಯಲ್ಲಿ ಏಕೆ ಹೋದರು ಎಂಬುದನ್ನು ಇಲ್ಲಿ ತಿಳಿಯೋಣ.
ಬೆಂಗಳೂರಿನ ರೈತ SSR ಸಂಜು ಎಂಬಾತ, ರೂ. 1.5 ಕೋಟಿ (ಎಕ್ಸ್ ಶೋರೂಂ) ಮೌಲ್ಯದ ತಮ್ಮ ಹೊಸ ಐಷಾರಾಮಿ ಟೊಯೋಟಾ ವೆಲ್‌ಫೈರ್ ಅನ್ನು ಡೆಲಿವರಿ ಪಡೆಯಲು ಟೊಯೋಟಾ ಡೀಲರ್‌ಶಿಪ್‌ಗೆ ಎತ್ತಿನ ಗಾಡಿಯಲ್ಲಿ ಆಗಮಿಸುವ ಮೂಲಕ ಸುದ್ದಿಯಾಗಿದ್ದಾರೆ. ಈ ದುಬಾರಿ ಕಾರನ್ನು ಡೆಲಿವರಿ ಪಡೆಯುವುದನ್ನು ಸ್ಮರಣಿಯವಾಗಿಸಲು ಈ ರಿತಿ ಬಂದಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಆಡಂಬರದ ಜೀವನಶೈಲಿ ಮತ್ತು ಬಲವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಗೆ ಹೆಸರುವಾಸಿಯಾದ ಸಂಜು, ಪೋರ್ಷೆ ಪನಾಮೆರಾ, ಫೋರ್ಡ್ ಮಸ್ಟಾಂಗ್, ಮಸೆರಾಟಿ ಲೆವಾಂಟೆ, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಫಾರ್ಚೂನರ್ ನಂತಹ ಐಷಾರಾಮಿ ಕಾರುಗಳ ಗಣನೀಯ ಸಂಗ್ರಹವನ್ನು ಈಗಾಗಲೇ ತಮ್ಮ ನಿವಾಸದಲ್ಲಿ ಹೊಂದಿದ್ದಾರೆ. ಈ ಎಲ್ಲಾ ಕಾರುಗಳನ್ನು ವೈರಲ್ ಆಗುತ್ತಿರುವ ವಿಡಿಯೋದಲ್ಲೂ ತೋರಿಸಲಾಗಿದೆ.
ಆದರೂ ಈ ಬಾರಿ ಡೆಲಿವರಿ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಬೆಳೆದುಬಂದ ತಮ್ಮ ಬೇರುಗಳನ್ನು ಗೌರವಿಸಲು ಎತ್ತಿನಗಾಡಿ ಆಯ್ಕೆ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಕುರ್ತಾ ಮತ್ತು ಧೋತಿಯನ್ನು ಧರಿಸಿ, ಚಿನ್ನದ ಆಭರಣಗಳೊಂದಿಗೆ ಡೀಲರ್‌ಶಿಪ್‌ಗೆ ಎತ್ತಿನ ಗಾಡಿಯಲ್ಲಿ ಎಂಟ್ರಿಕೊಟ್ಟಿದ್ದರು. ಐಷಾರಾಮಿ ಕಾರು ಖರೀದಿಸಲು ವಿಶಿಷ್ಟ ರೀತಿಯಲ್ಲಿ ಆಗಮಿಸಿದ ದೃಶ್ಯವು ಆನ್‌ಲೈನ್ ನಲ್ಲಿ ಫುಲ್ ವೈರಲ್ ಆಗಿದೆ.

ಸಂಜು ಆಗಮಿಸಿದ ತಕ್ಷಣ, ಡೀಲರ್‌ಶಿಪ್ ಸಿಬ್ಬಂದಿ ಮತ್ತು ಅವರ ಸ್ವಂತ ಭದ್ರತಾ ತಂಡವು ಅವರನ್ನು ಆತ್ಮೀಯವಾಗಿ ಸ್ವಾಗತಿಸಿತು. ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿ ಬಿಳಿ ಟೊಯೋಟಾ ವೆಲ್‌ಫೈರ್‌ನ ಅನಾವರಣ ನಡೆಯಿತು. ದೊಡ್ಡ ಹಾರದಿಂದ ಅಲಂಕರಿಸಲ್ಪಟ್ಟ ಮತ್ತು ಕೆಂಪು ಬಟ್ಟೆಯಲ್ಲಿ ಹೊದಿಸಲಾದ ವಾಹನವನ್ನು ಶೋರೂಂ ಮಹಡಿಯಲ್ಲಿ ಬಹಿರಂಗಪಡಿಸಲಾಯಿತು. ಸಂಜು ಅಂತಿಮವಾಗಿ ಉನ್ನತ ದರ್ಜೆಯ MPV ಅನ್ನು ಮನೆಗೆ ಕೊಂಡೊಯ್ದರು.
ಟೊಯೋಟಾ ವೆಲ್‌ಫೈರ್ ವಿಶೇಷತೆಗಳು: ಟೊಯೋಟಾ ವೆಲ್‌ಫೈರ್ ಅಸಾಧಾರಣ ಸೌಕರ್ಯ, ತಂತ್ರಜ್ಞಾನ ಮತ್ತು ಐಷಾರಾಮಿಗೆ ಹೆಸರುವಾಸಿಯಾದ ಉನ್ನತ ಶ್ರೇಣಿಯ MPV ಆಗಿದೆ. ಸುಮಾರು ರೂ. 1.5 ಕೋಟಿ (ಎಕ್ಸ್ - ಶೋರೂಂ) ಬೆಲೆ ಇದೆ. ಇದು ವೆಂಟಿಲೇಟೆಡ್ ಹಾಗೂ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಸೀಟ್‌ಗಳು, ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಸುಧಾರಿತ ಚಾಲಕ ಸಹಾಯ ವೈಶಿಷ್ಟ್ಯಗಳನ್ನು (ADAS) ಹೊಂದಿದೆ.
ಈ ಕಾರು 360 - ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಸ್ಟೀರಿಂಗ್ ಮತ್ತು ಹೈಬ್ರಿಡ್ ಪವರ್‌ಟ್ರೇನ್ ನೊಂದಿಗೆ ಬರುತ್ತದೆ. ಸುಮಾರು 193 PS ಪವರ್ ಮತ್ತು 240 Nm ಟಾರ್ಕ್ ಉತ್ಪಾದಿಸುವ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾದ 2.5 - ಲೀಟರ್ 4 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು ಇ - ಸಿವಿಟಿ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.
ವೈರಲ್ ವೀಡಿಯೊ ಆಧುನಿಕ ಐಷಾರಾಮಿ ಕಾರುಗಳನ್ನು ಪ್ರದರ್ಶಿಸಿದ್ದಲ್ಲದೆ, ಸಂಪ್ರದಾಯಕ್ಕೂ ಗೌರವ ಸಲ್ಲಿಸಿತು. ಸಂಜು ಅವರ ಡೆಲಿವರಿ ಕಾರ್ಯಕ್ರಮವು ಲಕ್ಷಾಂತರ ಜನರನ್ನು ಆನ್‌ಲೈನ್‌ನಲ್ಲಿ ಆಕರ್ಷಿಸಿದೆ. ಈಗಾಗಲೇ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ, ಆದರೆ ಅವರು ಹೊಸ ಕಾರಿನ ವಿತರಣೆಯನ್ನು ಯಾರೂ ಮರೆಯಲಾಗದ ಘಟನೆಯನ್ನಾಗಿ ಮಾಡಿದ್ದಾರೆ. ಈ ವಿಶೇಷವಾದ ಕಾರು ಡೆಲಿವರಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.


Click it and Unblock the Notifications








