ದುಬಾರಿ ಬೆಲೆಯ BMW ಕಾರಿನಲ್ಲಿ ದನಗಳಿಗೆ ಮೇವು ಸಾಗಿಸಿದ ರೈತ, ವಿಡಿಯೋ ನೋಡಿ
ಭಾರತೀಯ ರೈತ ಸಾಲದಲ್ಲಿ ಹುಟ್ಟಿ, ಸಾಲದಲ್ಲಿ ಬೆಳೆದು, ಸಾಲದಲ್ಲೇ ಸಾಯುತ್ತಾನೆ ಎನ್ನುವುದು ಪ್ರಸಿದ್ಧವಾದ ನಾಣ್ನುಡಿಯಾಗಿದೆ. ಆದರೆ, ಎಲ್ಲ ರೈತರು ಬಡವರಲ್ಲ. ಅದರಲ್ಲೂ ಕೆಲವು ಮಂದಿ ಐಷಾರಾಮಿ ಜೀವನ ನಡೆಸುತ್ತಾರೆ. ಸದ್ಯ, ಬಿಹಾರದ ರೈತನೊಬ್ಬ ತನ್ನ ಜಾನುವಾರುಗಳಿಗೆ ಮೇವನ್ನು ಬಿಎಂಡಬ್ಲ್ಯೂ (BMW) ಕಾರಿನಲ್ಲಿ ಸಾಗಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
'ಟುಡೆ ಬಿಹಾರ್ ನ್ಯೂಸ್' ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಸೃಷ್ಟಿಸಿದೆ. ಈ ಬಿಎಂಡಬ್ಲ್ಯೂ 5 ಸೀರಿಯಸ್ ಕಾರಿನ ಮಾಲೀಕನನ್ನು ಅಂಶು ಕುಮಾರ್ ಎಂದು ಗುರುತಿಸಲಾಗಿದೆ. ಇವರು, ವೃತ್ತಿಯಲ್ಲಿ ಕೃಷಿಕರಾಗಿದ್ದು, ಜೊತೆಯಲ್ಲಿಯೇ ಟೂರ್ - ಟ್ರಾವೆಲ್ ವ್ಯವಹಾರವನ್ನು ನಡೆಸುತ್ತಿದ್ದಾರೆ.

ಬಿಹಾರದ ಸಮಸ್ತಿಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಕಾರು ಕಂಡುಬಂದಿದೆ. ಆದರೆ, ನಿರ್ದಿಷ್ಟ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಡಿಯೋದಲ್ಲಿ ಬಿಎಂಡಬ್ಲ್ಯೂ ಕಾರಿನ ಮೇಲ್ಚಾವಣೆ (ರೂಫ್) ಮೇಲೆ ಜಾನುವಾರುಗಳಿಗಾಗಿ ಹಸಿರು ಹುಲ್ಲನ್ನು ಸಾಗಿಸುತ್ತಿರುವುದನ್ನು ಕಾಣಬಹುದು. ಇದರೊಟ್ಟಿಗೆ, ಕಾರಿಗೆ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಗಮನಿಸಬಹುದು.
ಈ ಬಗ್ಗೆ ಸ್ವತಃ ಮಾತನಾಡಿರುವ ಅಂಶು ಕುಮಾರ್ ಅವರು, 'ನಗರ ಪ್ರದೇಶದಲ್ಲಿ ಉತ್ತಮವಾದ ಹಸಿರು ಮೇವು ಲಭ್ಯವಿಲ್ಲ, ಹಾಗಾಗಿ, ಜಾನುವಾರುಗಳ ಆಹಾರಕ್ಕಾಗಿ ಮೇವು ತರಲು ಬಿಎಂಡಬ್ಲ್ಯು ಕಾರಿನಲ್ಲಿ ತೆರಳಿದ್ದೆ. ಅವುಗಳಿಗೆ ಹಸಿರು ಹುಲ್ಲನ್ನು ನೀಡಿದರೆ, ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ನೀಡುತ್ತೇವೆ. ಯಾರೂ ರಸ್ತೆಯಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿ, ಇಂಟರ್ನೆಟ್ ನಲ್ಲಿ ಹರಿಬಿಟ್ಟಿದ್ದಾರೆ' ಎಂದು ಹೇಳಿದ್ದಾರೆ.

ರೈತ ಅಂಶು ಕುಮಾರ್ ಟೊಯೊಟಾ ಇನ್ನೋವಾ, ಮಹೀಂದ್ರಾ ಸ್ಕಾರ್ಪಿಯೊದಂತಹ ಪ್ರೀಮಿಯಂ ಕಾರುಗಳ ಮಾಲೀಕರು ಆಗಿದ್ದಾರೆ. ಕೆಲವೊಬ್ಬರು, ಆತ ಕಳ್ಳತನವಾಗಿರುವ ಬಿಎಂಡಬ್ಲ್ಯು ಕಾರನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ಇವು ಸಾಬೀತಾಗಿಲ್ಲ. ಇಲ್ಲಿ, ಗಮನಿಸಬೇಕಾದ ಅಂಶವೆಂದರೆ ಸರಿಯಾದ ನಂಬರ್ ಪ್ಲೇಟ್ ಇಲ್ಲದೆ ಕಾರನ್ನು ಉಪಯೋಗ ಮಾಡುವುದು ಸ್ಪಷ್ಟವಾಗಿ ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಆದರೆ, ಹಳ್ಳಿಗಾಡಿನಲ್ಲಿ ಇದು ಸರ್ವೇ ಸಾಮಾನ್ಯವಾಗಿದೆ.
ದೆಹಲಿಯ ವಿವಿಧ ಭಾಗಗಳಲ್ಲಿ ಡೀಸೆಲ್ ಚಾಲಿತ ಐಷಾರಾಮಿ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇವುಗಳನ್ನು ದೊಡ್ಡ ಸಂಖ್ಯೆಯಲ್ಲಿ ಜನರು ಖರೀದಿಸಿ, ಪಕ್ಕದ ಹರಿಯಾಣ, ಪಂಜಾಬ್, ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಬಳಕೆ ಮಾಡುತ್ತಾರೆ. ಹರಿಯಾಣದ ರೈತರು, ಟೊಯೊಟಾ ಫಾರ್ಚುನರ್ ಹಾಗೂ ಆಡಿ ಕ್ಯೂ 7 ಸೇರಿದಂತೆ ಅನೇಕ ದುಬಾರಿ ಕಾರುಗಳನ್ನು ಬಳಸುವ ಎಷ್ಟೋ ಸುದ್ದಿಗಳು ವೈರಲ್ ಆಗಿವೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ 5 ಸೀರಿಯಸ್ (BMW 5 Series) ಕಾರು, ರೂ.68.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು, 2.0 - ಲೀಟರ್ ಟರ್ಬೊ ಪೆಟ್ರೋಲ್, 2.0 - ಲೀಟರ್ ಡೀಸೆಲ್, 3.0 - ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಈ ಬಿಎಂಡಬ್ಲ್ಯೂ 5 ಸೀರಿಯಸ್ ಕಾರುಗಳು, 12.3 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಬ್ರೇಕ್ ಕಂಟ್ರೋಲ್ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications