ದೂರಗಾಮಿ ಹೋವರ್ ಬೋರ್ಡ್ ಗಿನ್ನೆಸ್ ದಾಖಲೆ
ಹೋವರ್ ಬೋರ್ಡ್ (Hoverboard), ಆಕಾಶದಲ್ಲಿ ನಿಧಾನವಾಗಿ ಚಲಿಸುವ ಒಂದು ಯಂತ್ರವಾಗಿದೆ. ಭಾರತದಲ್ಲಿ ಇದು ಅಷ್ಟು ಜನಪ್ರಿಯತೆ ಪಡೆದಿಲ್ಲವಾದರೂ ವಿದೇಶಗಳಲ್ಲಿ ಇದರ ಸಂಶೋಧನೆ ಹಾಗೂ ಅಭಿವೃದ್ಧಿ ನಡೆಯುತ್ತಲೇ ಇದೆ.
ಈಗ ಇಂತಹದೊಂದು ಸಾಹಸಕ್ಕೆ ಧುಮುಕಿರುವ ಕೆನಾಡ ಮೂಲದ ಕ್ಯಾಟಲಿನ್ ಅಲೆಕ್ಸಾಂಡ್ರು ಡುರು (catalin alexandru duru) ಅತಿ ದೂರಗಾಮಿ ಹೋವರ್ ಬೋರ್ಡ್ ನಿರ್ಮಿಸುವ ಮೂಲಕ ನೂತನ ಗಿನ್ನೆಸ್ ದಾಖಲೆ ರಚಿಸಿದ್ದಾರೆ.

ಕೆನಡಾದ ಕ್ಯುಬೆಕ್ ನಗರದ ouareau ಸರೋವರದಲ್ಲಿ ಕ್ಯಾಟೆಲಿನ್ ಈ ದಾಖಲೆ ಸಾಧಿಸಿದ್ದಾರೆ. ಪ್ರಸ್ತುತ ಗಿನ್ನೆಸ್ ದಾಖಲೆ ಪುಟದಲ್ಲಿ ಅಧಿಕೃತ ಪಟ್ಟ ಪಡೆದುಕೊಂಡಿದೆ.

ನೈಜ ಜೀವನದ ಮೊದಲ ಹೋವರ್ ಬೋರ್ಡ್ ರಚಿಸುವುದು ತನ್ನ ಗುರಿಯಾಗಿತ್ತು ಎಂದವರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಗಿನ್ನೆಸ್ ದಾಖಲೆಗಾಗಿ ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ತಮ್ಮ ಮೊದಲ ಹೋವರ್ ಬೋರ್ಡ್ ಮಾದರಿಯಲ್ಲೇ ದಾಖಲೆ ಬರೆದಿರುವ ಅಲೆಕ್ಸಾಂಡ್ರು, ಓರ್ವ ವ್ಯಕ್ತಿ ತನ್ನ ಕಾಲುಗಳಲ್ಲಿ ನಿಂತುಕೊಂಡು ಹೋವರ್ ಬೋರ್ಡ್ ನಿಯಂತ್ರಣ ಹೇಗೆ ಸಾಧಿಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ಈ ದಾಖಲೆ ಬರೆಯಲು ಕ್ಯಾಟಲಿನ್ ಅವರಿಗೆ ಕನಿಷ್ಠ 50 ಮೀಟರ್ (164 ಅಡಿ) ದೂರ ಸಂಚರಿಸುವ ಅಗತ್ಯವಿತ್ತು. ಆದರೆ ಇದರ ಐದು ಪಟ್ಟು ಜಾಸ್ತಿ ದೂರ ಕ್ರಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಹಿಂದಿನ ದಾಖಲೆ ತನಗೇನು ಅಂಥ ಮಹಾ ಸವಾಲೇನಲ್ಲ ಎಂಬುದನ್ನು ತೋರಿಸಿ ಕೊಟ್ಟಿರುವ ಈ ಕೆನಡಾ ಸಾಹಸಿ, ಭರ್ಜರಿ 275.9 ಮೀಟರ್ (905 ಅಡಿ, 2 ಇಂಚು) ದೂರ ಕ್ರಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಎರಡು ಸಂಪೂರ್ಣ ಗಾತ್ರದ ಫುಟ್ಬಾಲ್ ಮೈದಾನಕ್ಕೆ ಸಮವಾಗಿದೆ ಎಂದು ಗಿನ್ನೆಸ್ ದಾಖಲೆಯ ಅಧಿಕೃತರು ತಿಳಿಸಿದ್ದಾರೆ.

ಪ್ರಸ್ತುತ ಗಾಳಿಯಲ್ಲಿ ಸ್ವಚ್ಛಂದವಾಗಿ ಸುತ್ತಾಡುವ ಹೋವರ್ ಬೋರ್ಡ್ ಭವಿಷ್ಯದ ಸಂಚಾರ ಸಮಸ್ಯೆಯನ್ನು ನೀಗಿಸಲಿದೆ ಎಂಬುದು ಕ್ಯಾಟಲಿನ್ ಅವರ ಅಭಿಮತವಾಗಿದೆ.

ಒಂದು ವರ್ಷಗಳ ನಿರಂತರ ಪ್ರಯತ್ನದ ಮೂಲಕ ಇದರ ವಿನ್ಯಾಸ, ಎಂಜಿನ್ ಹಾಗೂ ನಿರ್ಮಾಣ ಕಾರ್ಯವನ್ನು ಕೈಗೊಂಡಿರುವುದಾಗಿ ಕ್ಯಾಟಲಿನ್ ವಿವರಿಸಿದ್ದಾರೆ.

ಇನ್ನು ಭೂಮಿಯಿಂದ ಆಕಾಶಕ್ಕೆ ಸಾಮಾನ್ಯ ಎತ್ತರದ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಈ ಯಂತ್ರ ಯಶಸ್ವಿಯಾಗಿರುವುದು ಭವಿಷ್ಯದಲ್ಲಿ ಇದರ ಕನಸು ನನಸಾಗುವ ಬಗ್ಗೆ ನಿರೀಕ್ಷೆ ಮೂಡಿಸಿದೆ.
ಹೋವರ್ ಬೋರ್ಡ್ ಗಿನ್ನೆಸ್ ದಾಖಲೆ - ರೋಚಕ ವೀಡಿಯೋ ವೀಕ್ಷಿಸಿ


Click it and Unblock the Notifications








