ಭಾರ 1 ಟನ್; ಗಿನ್ನೆಸ್ ಪುಟ ಸೇರಿದ ವಿಶ್ವದ ಅತಿ ಭಾರದ ಸೈಕಲ್
ಜರ್ಮನಿಯ ವಾಹನ ಪ್ರೇಮಿಯೊಬ್ಬ ವಿಶ್ವದ ಅತಿ ಹೆಚ್ಚು ಭಾರದ ಹಾಗೂ ಬೃಹತ್ತಾದ ಸೈಕಲ್ ವೊಂದನ್ನು ನಿರ್ಮಿಸಿದ್ದಾರೆ. ಇನ್ನು ವಿಶೇಷತೆ ಏನೆಂದರೆ ಪ್ರಸ್ತುತ ಸೈಕಲ್ ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ.
ಜರ್ಮನಿಯ ಶಾಖ್ಟ್-ಅಡಾರ್ಫ್ ಮೂಲದ 49ರ ಹರೆಯದ ಫ್ರಾಂಕ್ ಡೋಸ್ ಎಂಬವರೇ ಈ ಬೃಹತ್ ಸೈಕಲ್ ನಿರ್ಮಾಣ ಹಿಂದಿರುವ ಸೂತ್ರಧಾರಿ. ಗಟ್ಟಿಮುಟ್ಟಾದ ಲೋಹದಿಂದ ಇದನ್ನು ತಯಾರಿಸಿದ್ದಾರೆ.

ಸರಿ ಸುಮಾರು 940 ಕೆ.ಜಿ ಭಾರದ ಸೈಕಲ್ ಈಗ ಗಿನ್ನೆಸ್ ದಾಖಲೆ ಪುಟ ಸೇರಿದೆ. ಇದಕ್ಕಾಗಿ 457.2 ಮೀಟರ್ ದೂರದ ವರೆಗೂ ಸೈಕಲ್ ತುಳಿದಿದ್ದಾರೆ.

ಬೆಲ್ಜಿಯಂ ಮೂಲದ ಜೆಫ್ ಪೀಟರ್ಸ್ ಅವರ 860 ಕೆ.ಜಿ ಭಾರದ ಸೈಕಲ್ ದಾಖಲೆಯನ್ನು ಅಳಿಸಿ ಹಾಕಿರುವ ಫ್ರಾಂಕ್ ಡೋಸ್, ವಿಶ್ವದ ಅತಿ ಭಾರದ ಸೈಕಲ್ ನ ಹೆಮ್ಮೆಯ ಮಾಲಿಕ ಎನಿಸಿಕೊಂಡಿದ್ದಾರೆ.

ಕೃಷಿ ಚಟುವಟಿಕೆಗಳಿಗಾಗಿ ಬಳಕೆ ಮಾಡುವ ಎರಡು ಬೃಹತ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಇದನ್ನು ಸಾಗಿಸಲು ಬೃಹತ್ ಟ್ರಕ್ ನೆರವು ಪಡೆಯಲಾಗಿತು.

ವಿಶ್ವದ ಬೃಹತ್ ಹಾಗೂ ಅತಿ ಭಾರದ ಸೈಕಲ್ ನಿರ್ಮಾಣಕ್ಕಾಗಿ ಅಂದಾಜು 3,07,010 ರುಪಾಯಿಗಳ ಖರ್ಚು ತಗುಲಿದೆ.

ಫ್ರಾಂಕ್ ಸಾಧನೆಗೆ ಪತ್ನಿ ಆಸ್ಟ್ರಿಡ್ ಸಹ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತನ್ನ ಪತಿಯ ಸಾಧನೆಗೆ ಅತೀವ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.


Click it and Unblock the Notifications








