Mi17 V5 ಸೇನಾ ಹೆಲಿಕಾಪ್ಟರ್ ಬಗೆಗಿನ ಪ್ರಮುಖ ಸಂಗತಿಗಳಿವು
ನಿನ್ನೆ, ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ರವರು ಚಲಿಸುತ್ತಿದ್ದ Mi17 V5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರು ಬಳಿ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಜನರು ಮೃತ ಪಟ್ಟಿದ್ದಾರೆ. ಈ ಘಟನೆ ಇಡೀ ದೇಶವನ್ನು ತಲ್ಲಣಗೊಳಿಸಿದೆ. ಬ್ರಿಗೇಡಿಯರ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ ಸೇನಾ ಸಿಬ್ಬಂದಿಗಳಿದ್ದ ಈ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿತ್ತು.

ಅಪಘಾತಕ್ಕೀಡಾಗಿದ್ದ ಬಿಪಿನ್ ರಾವತ್ ರವರನ್ನು ತಮಿಳುನಾಡಿನ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತ ಪಟ್ಟರು. ಈ ದುರ್ಘಟನೆಗೆ ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ. ದಟ್ಟ ಮಂಜಿನಿಂದಾಗಿ ಹೆಲಿಕಾಪ್ಟರ್ ಪತನಗೊಂಡಿತೇ, ಮರ ಉರುಳಿ ಬಿದ್ದಿದೆಯೇ ಅಥವಾ ಇಂಜಿನ್ ಕೆಟ್ಟು ಈ ಘಟನೆ ಸಂಭವಿಸಿತೇ ಎಂಬ ಬಗ್ಗೆ ನಾನಾ ಗೊಂದಲಗಳು ಉಂಟಾಗಿವೆ.

ಕೇಂದ್ರ ಸರ್ಕಾರವು ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ದೇಶದ ಅತ್ಯುನ್ನತ ಶ್ರೇಣಿಯ ಸೇನಾ ಕಮಾಂಡರ್ ಆದ ಬಿಪಿನ್ ರಾವತ್ ರವರ ಹಾರಾಟಕ್ಕೆ Mi17 V5 ಹೆಲಿಕಾಪ್ಟರ್ ಅನ್ನು ಬಳಸಲಾಗುತ್ತಿತ್ತು. ಈ ಹೆಲಿಕಾಪ್ಟರ್ ಅನ್ನು ರಷ್ಯಾದಲ್ಲಿ ತಯಾರಿಸಲಾಗಿದೆ ಎಂಬುದು ಗಮನಾರ್ಹ. ರಷ್ಯಾದ ಹೆಲಿಕಾಪ್ಟರ್ ಕಂಪನಿ ಅಡಿಯಲ್ಲಿ ಕಾರ್ಯನಿರ್ವಹಿಸುವ ಕಜನ್ ಹೆಲಿಕಾಪ್ಟರ್ ಕಂಪನಿಯಿಂದ ಈ ಹೆಲಿಕಾಪ್ಟರ್ ಅನ್ನು ತಯಾರಿಸಲಾಗಿದೆ.

ಈ ಹೆಲಿಕಾಪ್ಟರ್ ಅನ್ನು ಮಿಲಿಟರಿ ಸಿಬ್ಬಂದಿ, ಸಶಸ್ತ್ರ ಪಡೆ ಹಾಗೂ ಪ್ರಮುಖ ಲಾಜಿಸ್ಟಿಕ್ಸ್ ಗಳನ್ನು ಸಾಗಿಸಲು ಬಳಸಲಾಗುತ್ತದೆ. ಇದರ ಜೊತೆಗೆ ವಿವಿಐಪಿಗಳ ರಕ್ಷಣೆಗೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೂ ಬಳಸಲಾಗುತ್ತದೆ. ರಷ್ಯಾ ನಿರ್ಮಿತ ಈ ಹೆಲಿಕಾಪ್ಟರ್ ಅನ್ನು 1977 ರಲ್ಲಿ ಪರಿಚಯಿಸಲಾಯಿತು. ಈ ಹೆಲಿಕಾಪ್ಟರ್ ಪ್ರಪಂಚದ ವಿವಿಧ ಭಾಗಗಳಲ್ಲಿ ಬಳಕೆಯಲ್ಲಿದೆ.

ಈ ಹಿನ್ನೆಲೆಯಲ್ಲಿ ಈ ಹೆಲಿಕಾಪ್ಟರ್ ಅನ್ನು ಅತ್ಯಂತ ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ. 2008 ರಲ್ಲಿ, 80 ಹೆಲಿಕಾಪ್ಟರ್‌ಗಳನ್ನು ರಷ್ಯಾದಿಂದ ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇವುಗಳಲ್ಲಿ 2013 ರವರೆಗೆ 36 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಮಿಕ್ಕ ಹೆಲಿಕಾಪ್ಟರ್‌ಗಳನ್ನು 2018ರ ಜುಲೈನಲ್ಲಿ ಭಾರತಕ್ಕೆ ವಿತರಿಸಲಾಯಿತು.

ಈ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯಿಂದ 2019 ರಲ್ಲಿ ಪ್ರತ್ಯೇಕ ಕಾರ್ಯಾಗಾರವನ್ನು ಆರಂಭಿಸಲಾಯಿತು. ಹೀಗಾಗಿ ಈ ಹೆಲಿಕಾಪ್ಟರ್ ಅನ್ನು ಹೆಚ್ಚು ನಿರ್ವಹಣೆಯಲ್ಲಿ ಇರಿಸಲಾಗಿದೆ ಎಂದು ಹೇಳಬಹುದು. ಆದರೂ ಈ ಹೆಲಿಕಾಪ್ಟರ್ ಗಳು ಕಳೆದ 8 ವರ್ಷಗಳಲ್ಲಿ 6 ಬಾರಿ ಅಪಘಾತಕ್ಕೀಡಾಗಿವೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಈ ಹೆಲಿಕಾಪ್ಟರ್‌ಗಳನ್ನು ಅತ್ಯುತ್ತಮ ನಿರ್ವಹಣೆಯೊಂದಿಗೆ ನಿರ್ವಹಿಸಲಾಗುತ್ತದೆ.

ಈ ಹೆಲಿಕಾಪ್ಟರ್ ಗರಿಷ್ಠ 13,000 ಕೆ.ಜಿ ತೂಕದೊಂದಿಗೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕಾಪ್ಟರ್ ಗರಿಷ್ಠ 36 ಸೈನಿಕರನ್ನು ಅಥವಾ 4,500 ಕೆ.ಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕಾಪ್ಟರ್ ನಲ್ಲಿ ಅತ್ಯಾಧುನಿಕ ನಿಯಂತ್ರಣ ಸಾಧನಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ಪ್ರಯಾಣಿಸುವ ಸೌಲಭ್ಯ, ಹವಾಮಾನ ವೈಪರೀತ್ಯದ ಮುನ್ಸೂಚನೆ ನೀಡುವ ಸೌಲಭ್ಯ ಹಾಗೂ ಆಟೋ ಪೈಲಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಹೆಲಿಕಾಪ್ಟರ್ ಹೊಂದಿದೆ.

ಇಷ್ಟೆಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದು ಜನರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಭಾರತೀಯ ವಾಯುಪಡೆಯ ಸುಪರ್ದಿಯಲ್ಲಿರುವ Mi17 V5 ಹೆಲಿಕಾಪ್ಟರ್, ಮಷಿನ್ ಗನ್ ಸೇರಿದಂತೆ ರಕ್ಷಣಾತ್ಮಕ ಅಥವಾ ಆಕ್ರಮಣಕಾರಿ ಬಳಕೆಗಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಬಹು ಬಳಕೆಗಾಗಿ ಇದನ್ನು ಅತ್ಯುತ್ತಮ ಹೆಲಿಕಾಪ್ಟರ್ ಮಾದರಿ ಎಂದು ಪರಿಗಣಿಸಲಾಗುತ್ತದೆ.

ಸ್ಫೋಟದ ಅಪಾಯಗಳನ್ನು ತಪ್ಪಿಸಲು ಈ ಹೆಲಿಕಾಪ್ಟರ್ ನಲ್ಲಿರುವ ಫ್ಯೂಯಲ್ ಟ್ಯಾಂಕ್‌ಗಳಿಗೆ ವಿಶೇಷ ಫೋಮ್ ಪಾಲಿಯುರೆಥೇನ್ ಲೇಪನವನ್ನು ನೀಡಲಾಗುತ್ತದೆ.ಹೆಲಿಕಾಪ್ಟರ್‌ನ ಚಿಮಣಿಯನ್ನು ಬೆಚ್ಚಗಿಡಲು ಹಾಗೂ ಕ್ಷಿಪಣಿಗಳಿಗೆ ಅಪ್ಪಳಿಸುವ ಅಪಾಯವನ್ನು ತಪ್ಪಿಸಲು ಈ ಹೆಲಿಕಾಪ್ಟರ್ ನಲ್ಲಿ ಜಾಮರ್ ನಂತಹ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

Mi17 V5 ಹೆಲಿಕಾಪ್ಟರ್ ಗಂಟೆಗೆ 250 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೆಲಿಕಾಪ್ಟರ್ ನಲ್ಲಿರುವ ಫ್ಯೂಯಲ್ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸಿದರೆ 580 ಕಿ.ಮೀಗಳವರೆಗೆ ಸಂಚರಿಸಬಹುದು. ಹೆಚ್ಚುವರಿ ಫ್ಯೂಯಲ್ ಟ್ಯಾಂಕ್‌ಗಳನ್ನು ಅಳವಡಿಸಿದರೆ 1,065 ಕಿ.ಮೀಗಳವರೆಗೆ ಪ್ರಯಾಣಿಸುವ ಸಾಧ್ಯತೆಗಳಿವೆ. ಈ ಹೆಲಿಕಾಪ್ಟರ್ 6,000 ಅಡಿಗಳವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ.

Mi17 V5 ಹೆಲಿಕಾಪ್ಟರ್ ಅನ್ನು ವಿಶ್ವದ ಹಲವು ದೇಶಗಳಲ್ಲಿ ಹೆಚ್ಚಿನ ವಿಶ್ವಾಸಾರ್ಹತೆಯೊಂದಿಗೆ ಬಳಸಲಾಗುತ್ತದೆ. ಭಾರತದ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಪ್ರಯಾಣಿಸುತ್ತಿದ್ದ ಈ ಹೆಲಿಕಾಪ್ಟರ್ ಪತನಗೊಂಡಿರುವುದು ಹಲವು ಪ್ರಶ್ನೆಗಳನ್ನು ಉಂಟು ಹಾಕಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ವಿವಿಧ ರಾಜಕೀಯ ಮುಖಂಡರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಹೆಲಿಕಾಪ್ಟರ್ ನಲ್ಲಿದ್ದ ಬ್ಲಾಕ್ ಬಾಕ್ಸ್ ಪತ್ತೆಯಾಗಿ ಅದನ್ನು ಪರಿಶೀಲಿಸಿದ ನಂತರ ಅಪಘಾತಕ್ಕೆ ಕಾರಣಗಳೇನು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಮಾನವ ದೋಷದಿಂದ ಈ ಅಪಘಾತ ಸಂಭವಿಸಿದೆಯೇ ಅಥವಾ ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆಯೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ.

ಬಿಪಿನ್ ರಾವತ್, ಅವರ ಪತ್ನಿ, ಹಾಗೂ ಇನ್ನಿತರ ಸೇನಾ ಸಿಬ್ಬಂದಿಗಳ ನಿಧನಕ್ಕೆ ಜನತೆ ಕಂಬನಿ ಮಿಡಿಯುತ್ತಿದ್ದಾರೆ. ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ಸೇನಾ ಮುಖ್ಯಸ್ಥರು ಸಹ ಬಿಪಿನ್ ರಾವತ್ ರವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


Click it and Unblock the Notifications