Vande Bharat Sleeper: ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರ ಸಂಚಾರ.. ಎಲ್ಲಿಂದ, ಎಲ್ಲಿಗೆ?
ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಯಶಸ್ವಿಯಾಗಿ ಸಂಚಾರವನ್ನು ನಡೆಸುತ್ತಿದೆ. ರೈಲ್ವೆ ಇಲಾಖೆಯು ಶೀಘ್ರದಲ್ಲಿಯೇ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಲಿದ್ದು, ಇದು ಉತ್ತರ ಪ್ರದೇಶದ ಆಗ್ರಾ ಹಾಗೂ ಗೋರಖ್‌ಪುರ ನಡುವೆ ಸಂಚರಿಸುವ ನಿರೀಕ್ಷೆಯಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಆಗ್ರಾ (Agra) ಮತ್ತು ಗೋರಖ್‌ಪುರ (Gorakhpur) ಮಧ್ಯೆ ಕಾರ್ಯಾಚರಣೆ ನಡೆಸಲಿದೆ ಎನ್ನಲಾದ ಹೊಸ ವಂದೇ ಭಾರತ್ ಸ್ಲೀಪರ್ (Vande Bharat sleeper), ವಾರದಲ್ಲಿ 6 ದಿನ ಓಡಾಟ ನಡೆಸಬಹುದು. ಈ ರೈಲು ಆಗ್ರಾದಿಂದ ಬೆಳಗ್ಗೆ 5 ಗಂಟೆಗೆ ಹೊರಟು ಸಂಜೆ 7ಕ್ಕೆ ಗೋರಖ್‌ಪುರವನ್ನು ತಲುಪಲಿದೆ. ಅಲ್ಲಿಂದ ಸಂಜೆ 7 ಗಂಟೆ ಸುಮಾರಿಗೆ ಸಂಚಾರವನ್ನು ಆರಂಭಿಸಲಿದ್ದು, ಮರುದಿನ ಬೆಳಗ್ಗೆ 5ಕ್ಕೆ ಆಗ್ರಾವನ್ನು ತಲುಪಲಿದೆ ಎನ್ನಲಾಗಿದೆ.

ಆದರೆ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಎಂದಿನಿಂದ ಓಡಾಟವನ್ನು ಆರಂಭಿಸಲಿದೆ ಎನ್ನುವುದರ ಕುರಿತು ಸ್ಪಷ್ಟವಾದ ಮಾಹಿತಿಯಿಲ್ಲ. ಈ ಸ್ಲೀಪರ್ ರೈಲುಗಳು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಗಲಿವೆ ಎಂದು ಹೇಳಲಾಗಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ತಯಾರಿಕ ಘಟಕದಲ್ಲಿ ವಂದೇ ಭಾರತ್ ಸ್ಲೀಪರ್ ರೈಲನ್ನು ಉತ್ಪಾದಿಸಲಾಗುತ್ತಿದೆ.
ಹೊಸ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಕೋಚ್‌ಗಳನ್ನು ಹೊಂದಿರಲಿದ್ದು, ಅದರಲ್ಲಿ 823 ಬರ್ತ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ರೈಲು ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗವನ್ನು ಪಡೆಯಲಿದ್ದು, ಪ್ರಯಾಣಿಕರನ್ನು ಬೇಗನೇ ನಿರ್ದಿಷ್ಟ ಗಮ್ಯ ಸ್ಥಾನಕ್ಕೆ ತಲುಪಿಸುತ್ತದೆ ಎನ್ನಲಾಗಿದೆ. ನೂತನ ವಂದೇ ಭಾರತ್ ಸ್ಲೀಪರ್ ವಿಮಾನಂತಹ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರಲಿದೆ.

ಈ ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, 'ಕವಾಚ್' ವ್ಯವಸ್ಥೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕರ ಅನುಕೂಲಕ್ಕೆ ವಾಸನೆ ಮುಕ್ತ ಶೌಚಾಲಯ, ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು, ಮೊದಲ ದರ್ಜೆಯ ಎಸಿ ಕೋಚ್ ನಲ್ಲಿ ಬಿಸಿ ನೀರಿನ ಶವರ್ ಪಡೆದಿರಲಿದೆ. ಜೊತೆಗೆ ಬೋಗಿಗಳು ಕೂಡ ಶಬ್ದ ನಿರೋಧಕವಾಗಿರಲಿವೆ.
ಭಾರತೀಯ ರೈಲ್ವೆ ಹತ್ತಿರದ ನಗರಗಳಿಗೆ ಸಂಪರ್ಕವನ್ನು ಕಲ್ಪಿಸಲು ವಂದೇ ಮೆಟ್ರೋ ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್) ಯಲ್ಲಿ ವಂದೇ ಮೆಟ್ರೋ ಕೋಚ್‌ಗಳನ್ನು ತಯಾರಿಸಲಾಗುತ್ತಿದೆ. 16 ಕೋಚ್‌ಗಳನ್ನು ಹೊಂದಿರುವ ಮೊದಲ ವಂದೇ ಮೆಟ್ರೋ ರೈಲು ಮೇ ತಿಂಗಳೊಳಗೆ ಸಿದ್ದವಾಗಲಿದೆ ಎಂದು ತಿಳಿದುಬಂದಿದೆ.

ಎರಡು ಪ್ರಮುಖ ಪಟ್ಟಣಗಳನ್ನು ಬೆಸೆಯುವ ವಂದೇ ಮೆಟ್ರೋವನ್ನು ಪ್ರಯಾಣಿಕರು 250 ಕಿಲೋಮೀಟರ್ ದೂರವನ್ನು ಆರಾಮದಾಯಕವಾಗಿ ಓಡಾಡಲು ಸಾದ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ರೈಲು, ಗಂಟೆಗೆ 130 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚಾರವನ್ನು ನಡೆಸಲಿದೆ. 16 ಕೋಚ್‌ಗಳನ್ನು ಹೊಂದಿರುವ ಈ ರೈಲಿನ ಪ್ರತಿಯೊಂದು ಬೋಗಿಯಲ್ಲಿ 280 ಜನರು ಪ್ರಯಾಣಿಸಬಹುದು.
ಈ ವಂದೇ ಮೆಟ್ರೋ ರೈಲಿನಲ್ಲಿ 100 ಜನರಿಗೆ ಆಸನ ವ್ಯವಸ್ಥೆಯಿದ್ದು, 180 ಮಂದಿ ನಿಂತುಕೊಂಡು ತೆರಳಬಹುದು. ಒಟ್ಟು 4,364 ಜನರು ಏಕಕಾಲದಲ್ಲಿ ಪ್ರಯಾಣಿಸಬಹುದು. ಅತ್ಯಾಧುನಿಕ ಸೌಕರ್ಯವನ್ನು ಹೊಂದಿರುವ ವಂದೇ ಮೆಟ್ರೋದಲ್ಲಿ ಅಪಾಯದ ಸಂದರ್ಭದಲ್ಲಿ ಲೋಕೋ ಪೈಲೆಟ್ ಜೊತೆಗೆ ಪ್ರಯಾಣಿಕರು ಮಾತನಾಡಲು ಟಾಕ್ ಬ್ಯಾಕ್ ಸಿಸ್ಟಮ್, ಫೇರ್ - ಸ್ಮೋಕ್ ಡಿಟೆಕ್ಷನ್ ಸಿಸ್ಟಮ್ ಮತ್ತು ಕವಚ್ ವ್ಯವಸ್ಥೆಯನ್ನು ಪಡೆದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications