ಗ್ರಾಹಕರಿಗೆ ಉಟ ಕೊಡುವ ಧಾವಂತವಲ್ಲಿ ಈ ಡೆಲಿವರಿ ಬಾಯ್ ಮಾಡಿದ ತಪ್ಪುಗಳು ಎಷ್ಟು ಗೊತ್ತಾ?
ಇತ್ತೀಚೆಗೆ ಮಹಾನಗರಗಳಲ್ಲಿ ಫುಡ್ ಡೆಲಿವರಿ ಉದ್ಯಮವು ಭಾರೀ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಅಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಂದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಕಾರಣ, ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಉಟವನ್ನು ನೀಡುವ ಧಾವಂತದಲ್ಲಿ ಪ್ರತಿ ಹಂತದಲ್ಲೂ ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗುತ್ತಿದ್ದು, ಇದು ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ.

ಹೌದು, ಬೆಂಗಳೂರಿನಂತಹ ಮಹಾನಗರಗಳಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನಿಗದಿತ ಅವಧಿಯಲ್ಲಿ ಸಂಚರಿಸುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಯಾಕೆಂದ್ರೆ, ಟ್ರಾಫಿಕ್ ದಟ್ಟಣೆಯು ವಾಹನ ಸವಾರರನ್ನು ಹೈರಾಣಾಗಿಸುತ್ತದೆ. ಹೀಗಿರುವಾಗ ಆ್ಯಪ್ ಮೂಲಕ ಆರ್ಡರ್ ಮಾಡಲಾದ ಆಹಾರವನ್ನು ಒದಗಿಸಲು ಡೆಲಿವರಿ ಬಾಯ್ಸ್ ಮಾತ್ರ ಸಂಚಾರಿ ನಿಯಮಗಳನ್ನು ಲೆಕ್ಕಿಸದೆಯೇ ಗ್ರಾಹಕರ ಮೆಚ್ಚುಗೆಗಾಗಿ ದಿನಕ್ಕೆ ಹತ್ತಾರು ಬಾರಿ ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಲೇ ಇರುತ್ತಾರೆ.

ಸಿಗ್ನಲ್ ಜಂಪ್, ಸ್ಪೀಡ್ ರೈಡಿಂಗ್ ಮತ್ತು ಹೆಲ್ಮೆಟ್ ರಹಿತ ಬೈಕ್ ಸವಾರಿಯಂತಹ ಪ್ರಕರಣಗಳು ಡೆಲಿವರಿ ಬಾಯ್ಸ್‌ಗಳ ವಿರುದ್ಧ ಹೆಚ್ಚು ಕೇಳಿಬರುತ್ತಿದ್ದು, ಇದರಿಂದ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದಲ್ಲದೇ ಜನಸಾಮಾನ್ಯರು ಓಡಾಡುವುದಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹೀಗೆಯೇ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರಿಗೂ ಕಣ್ಣುತಪ್ಪಿಸಿ ಓಡಾಡುತ್ತಿರುವ ಡೆಲಿವರಿ ಬಾಯ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಇದುವರೆಗೆ ಹಲವಾರು ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ನಿನ್ನೆಯೂ ಕೂಡಾ ನಡೆದ ಕಾರ್ಯಾಚರಣೆ ವೇಳೆ ಸುಮಾರು 53 ಬಾರಿ ನಿಯಮ ಉಲ್ಲಂಘಿಸಿದ್ದ ಡೆಲಿವರಿ ಬಾಯ್ ಒಬ್ಬ ಸಿಕ್ಕಿಬಿದ್ದಿದ್ದಾನೆ.

ಈಗಾಗಲೇ 52 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ 53ನೇ ಬಾರಿ ಸಂಚಾರಿ ನಿಯಮ ಉಲ್ಲಂಘಿಸುವಾಗ ಪೊಲೀಸರ ಕೈಗೆ 27 ವರ್ಷದ ಆನಂದ್ ಎಂಬಾತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಕೋರಮಂಗಲದ ವಾಟರ್ ಟ್ಯಾಂಕ್ ಬಳಿಯಿರುವ ಸಿಗ್ನಲ್ ಜಂಪ್ ಮಾಡುವಾಗ ಅಲ್ಲಿಯೇ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಹಳೆಯ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಮಾಹಿತಿಯನ್ನು ವೀಕ್ಷಿಸಿದಾಗ ದೊಡ್ಡ ಪಟ್ಟಿಯನ್ನೇ ನೀಡಲಾಗಿದೆ.

ಸಿಗ್ನಲ್ ಜಂಪ್ ಮತ್ತು ಸ್ಪೀಡ್ ರೈಡಿಂಗ್ ಪ್ರಕರಣಗಳೇ ಆನಂದ್ ವಿರುದ್ಧ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಟ್ಟು 53 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ ರೂ. 5,300 ದಂಡ ವಿಧಿಸಲಾಗಿದೆ. ಪ್ರತಿ ಕೇಸ್‌ಗೆ ತಲಾ ರೂ.100ರಂತೆ ದಂಡ ವಿಧಿಸಲಾಗಿದ್ದು, ಜುಲೈ 20ರ ನಂತರ ಇದು ಹೊಸ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಮೂರು ಪಟ್ಟು ಹೆಚ್ಚಳಗೊಳ್ಳಲಿದೆ.

ಸದ್ಯಕ್ಕೆ ಆನಂದ್ ಬಳಿಯಿಂದ ದಂಡ ವಸೂಲಿ ಮಾಡಿರುವ ಟ್ರಾಫಿಕ್ ಪೊಲೀಸರು ಮತ್ತೆ ತಪ್ಪು ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದು, ಜುಲೈ 20 ನಂತರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಆಡುಗೊಡಿ ಟ್ರಾಫಿಕ್ ಇನ್ಸ್‌ಪೆಕ್ಟರ್ ರವಿಕುಮಾರ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಸಂಚಾರಿ ನಿಯಮಗಳ ಉಲ್ಲಂಘನೆಯ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಮಾಡಲು ಈಗಾಗಲೇ ಸಂಸತ್‌ನಲ್ಲಿ ಅನುಮೋದನೆ ಕೂಡಾ ದೊರೆತಿರುವುದು ಭಾರೀ ಪ್ರಮಾಣದ ದಂಡ ತೆತ್ತಬೇಕಾಗುತ್ತದೆ.

ಹೊಸ ನಿಯಮ ಜಾರಿಯಿಂದ ಚಾಲ್ತಿಯಲ್ಲಿರುವ ದಂಡದ ಮೊತ್ತಗಳು ದುಪ್ಪಟ್ಟಾಗಿದ್ದು, ಕೆಲವು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಗರಿಷ್ಠ ಮಟ್ಟದ ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಇಷ್ಟು ದಿನಗಳ ಕಾಲ ನಿಯಮ ಉಲ್ಲಂಘಿಸಿದರೂ ಕಡಿಮೆ ದಂಡದೊಂದಿಗೆ ಬಚಾವ್ ಆಗಬಹುದಾದ ಸನ್ನಿವೇಶ ಇನ್ಮುಂದೆ ಇರುವುದಿಲ್ಲ.

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಲೈಸೆನ್ಸ್ ಇಲ್ಲದೇ ವಾಹನ ಸವಾರಿ ಮಾಡುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದು, ನೋಂದಣಿಯಿಲ್ಲದ ವಾಹನಗಳ ಚಾಲನೆ ಮತ್ತು ಅಪಾಯಕಾರಿಯಾಗಿ ವಾಹನ ಚಲಾಯಿಸುವುವವರ ವಿರುದ್ಧ ಭಾರೀ ಮೊತ್ತದ ದಂಡವನ್ನು ವಸೂಲಿ ಮಾಡಲಾಗುತ್ತಿದೆ.

ಈ ಹಿಂದೆ ಇದ್ದ ಬಹುತೇಕ ಸಂಚಾರಿ ನಿಯಮಗಳ ದಂಡಗಳ ಮೊತ್ತವು ರೂ.100ರಿಂದ ರೂ.300 ಮತ್ತು ರೂ. 500ಕ್ಕೆ ಏರಿಕೆಯಾಗಿದ್ದಲ್ಲಿ, ಆಂಬ್ಯುಲೆನ್ಸ್ ಮತ್ತು ಯೋಗ್ಯತಾ ಪ್ರಮಾಣ ಪತ್ರವಿಲ್ಲದೆ ಸಾರ್ವಜನಿಕ ರಸ್ತೆಯ ಮೇಲೆ ಸಾರಿಗೆ ವಾಹನವನ್ನು ನಡೆಸುವುದು ಅಥವಾ ನಡೆಸಲು ಅನುಮತಿಸುವುದಕ್ಕೆ ರೂ. 3 ಸಾವಿರದಿಂದ ರೂ. 10 ಸಾವಿರ ತನಕ ದಂಡ ವಿಧಿಸಲು ಅನುಮತಿಸಲಾಗಿದೆ.
Source: BangaloreMirror


Click it and Unblock the Notifications








