ಗಂಟೆಗೆ 193 ಕೀ.ಮೀ. ವೇಗ; ಒಂದೇ ಸಮನೆ ಹೊತ್ತಿ ಉರಿದ ಫೋರ್ಡ್ ಮಸ್ಟಾಂಗ್
ಕ್ರೀಡಾ ಕಾರುಗಳು ವೇಗಕ್ಕೆ ಹೆಸರುವಾಸಿಯಾಗಿದೆ. ಸೂಪರ್ ಕಾರುಗಳು ಪ್ರತಿ ಗಂಟೆಗೆ ಸರಾಸರಿ 200 ಕೀ.ಮೀ. ವೇಗದಲ್ಲಿ ಸಾಗಬಲ್ಲದು. ಆದರೆ ರೇಸ್ ಟ್ರ್ಯಾಕ್ ನಲ್ಲಿ ಗಂಟೆಗೆ 193 ಕೀ.ಮೀ. ವೇಗದಲ್ಲಿ ಸಂಚರಿಸುತ್ತಿದ್ದ 2016 ಜಿಟಿ350 ಫೋರ್ಡ್ ಮಸ್ಟಾಂಗ್ ಕಾರಿಗೆ ಒಂದೇ ಸಮನೆ ಬೆಂಕಿ ಹೊತ್ತಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಿಂದು ಮುಂದು ನೋಡದೇ ಫಾಕ್ಟರಿಯಿಂದ ಹೊರಬಂದ ಹೊಚ್ಚ ಹೊಸ ಕಾರುಗಳನ್ನು ಟ್ರ್ಯಾಕ್ ಗೆ ನಿಶ್ಚಿಂತೆಯಿಂದ ಇಳಿಸಬಹುದು ಎಂಬುದು ಮಾಲಿಕ ಜೋ ಚಾರ್ಲ್ಸ್ ಸಹ ಅಂದುಕೊಂಡಿದ್ದರು. ಆದರೆ ಅಲ್ಲಿ ನಡೆದ ಘಟನೆಯು ಬೇರೆಯೇ ಆಗಿತ್ತು.

ರೇಸ್ ಆರಂಭವಾದ 15 ನಿಮಿಷವಾಗುಷ್ಟರಲ್ಲಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಕಾರು ಚಾಲಕ ಜೋ ಚಾರ್ಲ್ಸ್ ಅಪಾಯದಿಂದ ಪಾರಾಗಿದ್ದಾರೆ.

ಎಂಜಿನ್ ಘಟಕದಲ್ಲಿ ಉಂಟಾಗಿರುವ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂಬುದು ತಿಳಿದು ಬಂದಿದೆ. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಇಂಧನ ಲೀಕ್ ಆಗಿ ಕಾರಿಗೆ ಬೆಂಕಿ ಹಚ್ಚಿಕೊಂಡಿತ್ತು.

ಸ್ಟ್ರೀಟ್ ಮಾನ್ಯತೆ ಪಡೆದ ಕಾರಿನಲ್ಲಿ ಶರವೇಗದಲ್ಲಿ ಸಾಗುತ್ತಿದ್ದ ಅವರು ಬಿಎಂಡಬ್ಲ್ಯು ಹಿಂದಿಕ್ಕುವ ಪ್ರಯತ್ನದಲ್ಲಿದ್ದರು. ಕ್ಷಣಾರ್ಧದಲ್ಲಿ ಕಾರಿಗೆ ಏನೋ ಅಪಾಯ ಕಾದಿದೆ ಎಂಬುದನ್ನು ಮನಗಂಡರು.

ಆರಂಭದಲ್ಲಿ ಸಮೀಪದಲ್ಲಿ ಹಾದು ಹೋಗುವ ಬಿಎಂಡಬ್ಲ್ಯು ಕಾರಿಗೆ ಬೆಂಕಿ ತಗುಲಿದೆ ಎಂದು ಅಂದುಕೊಂಡು ಜೋ ವೇಗವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಮಾಡಿದ್ದರು.

ಆದರೆ ಕೊನೆಗೆ ತಮ್ಮ ಕಾರಿನ ಹಿಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆಯೆಂಬುದನ್ನು ಅರಿತ ಅವರು ಕಾರನ್ನು ನಿಲುಗಡೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಬಳಿಕ ಆಯೋಜಕರ ಸಮಯ ಪ್ರಜ್ಞೆಯಿಂದಾಗಿ ಬಹುಬೇಗನೇ ಬೆಂಕಿಯನ್ನು ನಂದಿಸಲಾಯಿತು. ಇದರಿಂದಾಗಿ ಸಂಭವನೀಯ ದುರಂತವನ್ನು ತಡೆಗಟ್ಟಲಾಗಿದೆ.

ಬಳಿಕ ಫೋರ್ಡ್ ಅಧಿಕೃತರಿಂದಲೂ ಉತ್ತಮವಾದ ಸ್ಪಂದನೆಯು ಜೋ ಅವರಿಗೆ ಲಭಿಸಿತ್ತು. ಅಲ್ಲದೆ 2016 ಜಿಟಿ350 ಬದಲು ಹೊಚ್ಚ ಹೊಸ 2017 ಜಿಟಿ350ಆರ್ ಕಾರನ್ನು ನೀಡಲಿದೆ.


Click it and Unblock the Notifications








