ಉಚಿತವಾಗಿ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ನೀಡಲಿದೆ ಈ ದೇಶ
ಯಾವುದೇ ದೇಶವೇ ಆಗಲಿ ತನ್ನ ಪ್ರಜೆಗಳಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಬಸ್ಸುಗಳೇ ಆಗಲಿ, ರೈಲುಗಳೇ ಆಗಲಿ ಅವುಗಳಿಗೆ ಶುಲ್ಕವನ್ನು ನಿಗದಿಪಡಿಸುತ್ತದೆ. ಇಲ್ಲದಿದ್ದರೇ ನಷ್ಟವಾಗುವುದು ಖಚಿತ.

ಯುರೋಪ್‍ನಲ್ಲಿರುವ ದೇಶವೊಂದು ತನ್ನ ಪ್ರಜೆಗಳಿಗೆ ಉಚಿತ ಸಾರ್ವಜನಿಕ ಸೇವೆಯನ್ನು ನೀಡಲು ಮುಂದಾಗಿದೆ. ಯಾವುದು ಆ ದೇಶ, ಯಾವ ಕಾರಣಕ್ಕಾಗಿ ತನ್ನ ಪ್ರಜೆಗಳಿಗೆ ಉಚಿತವಾಗಿ ಸಾರ್ವಜನಿಕ ವ್ಯವಸ್ಥೆಯನ್ನು ನೀಡುತ್ತಿದೆ ಮುಂತಾದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಯುರೋಪ್‍ನ ಪಶ್ಚಿಮ ಭಾಗಕ್ಕಿರುವ ಲಕ್ಸೆಂಬರ್ಗ್ ದೇಶವೇ ತನ್ನ ಪ್ರಜೆಗಳಿಗೆ ಉಚಿತವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನೀಡಲು ಮುಂದಾಗಿರುವ ದೇಶ. ಲಕ್ಸೆಂಬರ್ಗ್ ತನ್ನ ಅಧೀನದಲ್ಲಿರುವ ರೈಲು, ಟ್ರಾಮ್ ಹಾಗೂ ಬಸ್ಸುಗಳ ದರವನ್ನು ಶನಿವಾರ ರದ್ದುಪಡಿಸಿದೆ.

ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಮಾಲಿನ್ಯವನ್ನು ನಿಭಾಯಿಸಲು ಈ ಪ್ರಯತ್ನಕ್ಕೆ ಮುಂದಾಗಿರುವುದಾಗಿ ಅಲ್ಲಿನ ಸರ್ಕಾರವು ಹೇಳಿದೆ. ಇದರ ಜೊತೆಗೆ ಕಡಿಮೆ ಆದಾಯವಿರುವವರಿಗೂ ಸಹ ಅನುಕೂಲವಾಗಲಿದೆ ಎಂದು ಹೇಳಿದೆ.

ಲಕ್ಸೆಂಬರ್ಗ್ ಯುರೋಪ್‍ನಲ್ಲಿರುವ ಚಿಕ್ಕ ಹಾಗೂ ಶ್ರೀಮಂತ ರಾಷ್ಟ್ರವಾಗಿದೆ. ಇನ್ನು ಮುಂದೆ ಈ ದೇಶದಲ್ಲಿ ಎಲ್ಲಾ ರೀತಿಯ ಪ್ರಯಾಣಗಳು ಉಚಿತವಾಗಿರಲಿವೆ. ಈ ಮೊದಲು ವಾರ್ಷಿಕ ಪಾಸ್‍ಗಳಿಗಾಗಿ 440 ಯುರೋಗಳನ್ನು ವಿಧಿಸಲಾಗುತ್ತಿತ್ತು.

ಇನ್ನು ಮುಂದೆ ಲಕ್ಸೆಂಬರ್ಗ್‍ಗೆ ಹೋಗುವ ಪ್ರವಾಸಿಗರು ಪ್ರಥಮ ದರ್ಜೆ ಪಾಸ್‍ಗಳಿಗೆ 660 ಯುರೋಗಳನ್ನು ಪಾವತಿಸಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ಕಡಿಮೆ ಆದಾಯವನ್ನು ಹೊಂದಿರುವ ಜನರಿಗೆ, ಇದರಿಂದ ಅನುಕೂಲವಾಗಲಿದೆ ಎಂದು ಅಲ್ಲಿನ ಸಾರಿಗೆ ಸಚಿವ ಫ್ರಾಂಕೋಯಿಸ್ ಬಾಷ್ ಹೇಳಿದ್ದಾರೆ.

ಲಕ್ಸೆಂಬರ್ಗ್‍ನ ಜನಸಂಖ್ಯೆ ಕೇವಲ 6,00,000ಗಳಾಗಿದೆ. ಆದರೆ ನೆರೆಯ ಜರ್ಮನಿ, ಬೆಲ್ಜಿಯಂ ಹಾಗೂ ಫ್ರಾನ್ಸ್ ದೇಶಗಳಿಂದ ಕೆಲಸಕ್ಕಾಗಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ದಟ್ಟಣೆ ಉಂಟಾಗುತ್ತಿದೆ. ಲಕ್ಸೆಂಬರ್ಗ್‌ನಲ್ಲಿ ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯವು ವಾಹನಗಳಿಂದ ಉಂಟಾಗುತ್ತಿದೆ.

ಲಕ್ಸೆಂಬರ್ಗ್ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ನಿಭಾಯಿಸಲು, 2018-28ರ ಅವಧಿಯಲ್ಲಿ 3.9 ಬಿಲಿಯನ್ ಯುರೋಗಳನ್ನು ರೈಲ್ವೆಯಲ್ಲಿ ಹೂಡಿಕೆ ಮಾಡಲು, ಬಸ್‍ಗಳನ್ನು ಅಪ್‌ಗ್ರೇಡ್ ಮಾಡಲು ಹಾಗೂ ಗಡಿಯಲ್ಲಿ ಹೆಚ್ಚಿನ ಪಾರ್ಕ್, ರೈಡ್ ಸೈಟ್‌ಗಳನ್ನು ಅಭಿವೃದ್ಧಿಪಡಿಸಲು ವಿನಿಯೋಜಿಸಲಿದೆ.

ಇವುಗಳ ಹೊರತಾಗಿಯೂ, 2025ರ ವೇಳೆಗೆ 65%ನಷ್ಟು ಪ್ರಯಾಣಿಕರು ಕಾರುಗಳ ಮೂಲಕ ಕೆಲಸಕ್ಕೆ ಬರಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆ. ಈ ಪ್ರಮಾಣವು 2017ರಲ್ಲಿ 73%ಗಳಾಗಿತ್ತು. ಲಕ್ಸೆಂಬರ್ಗ್ ಉಚಿತ ಸಾರಿಗೆಯನ್ನು ಪ್ರಾರಂಭಿಸಿದ ಮೊದಲ ದೇಶವಾಗಿದೆ. ಎಸ್ಟೋನಿಯನ್ ರಾಜಧಾನಿ ಟ್ಯಾಲಿನ್ ಸೇರಿದಂತೆ ಹಲವು ನಗರಗಳು ಸಹ ಇದೇ ಯೋಜನೆಯನ್ನುಹೊಂದಿವೆ.


Click it and Unblock the Notifications