Petrol, Diesel Prices Cut: ದೊಡ್ಡ ಸಿಹಿಸುದ್ದಿ... ಪೆಟ್ರೋಲ್, ಡೀಸೆಲ್ ದರ ರೂ.10 ಇಳಿಕೆ?
ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ (Central Government), ದೇಶದ ಜನರಿಗೆ ದೊಡ್ಡ ಸಿಹಿಸುದ್ದಿ ನೀಡುವ ಸಾಧ್ಯತೆಯಿದೆ. ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ದರದಲ್ಲಿ ಭಾರೀ ಇಳಿಕೆಯಾಗಲಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲು ಯೋಜಿಸುತ್ತಿದ್ದು, ಕೆಲವೇ ತಿಂಗಳಲ್ಲಿ ನೂತನ ದರಗಳು ಜಾರಿಯಾಗಬಹುದು. ಮುಂದಿನ ವರ್ಷ (2024) ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಇಂಧನ ದರಗಳು ಅಗ್ಗವಾಗುವ ನೀರಿಕ್ಷೆಯಿದೆ. ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದು, ಶೀಘ್ರದಲ್ಲೇ ಕೇಂದ್ರ ಹಣಕಾಸು ಸಚಿವಾಲಯವು ಇಂಧನ ದರ ಕಡಿತವನ್ನು ಘೋಷಿಸಬಹುದು.

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ ರೂ.10 ಕಡಿಮೆಯಾಗುವ ಸಾಧ್ಯತೆಯಿದೆ. ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ, ದೇಶದಲ್ಲಿ ಇಂಧನ ಬೆಲೆಗಳನ್ನು ತೈಲ ಮಾರಾಟ ಕಂಪನಿಗಳು ನಿರ್ಧರಿಸಲಿದ್ದು, ಪ್ರತಿ ದಿನವು ಬೆಲೆಯನ್ನು ಪರಿಷ್ಕರಿಸಬಹುದು. ಆದರೆ, ಮೇ.22 2022ರ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುವುದು ಅಥವಾ ಇಳಿಸುವುದು ಮಾಡಿಲ್ಲ.
ಕಳೆದ 3 ತಿಂಗಳಿನಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 70-80 ಡಾಲರ್ ಇರುವುದರಿಂದ ಕೇಂದ್ರ ಸರ್ಕಾರ ಇಂಧನ ದರವನ್ನು ಇಳಿಸುವ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ 2024ರ ಆರ್ಥಿಕ ವರ್ಷದಲ್ಲಿ ದೊಡ್ಡ ಲಾಭವನ್ನು ಮಾಡಿವೆ.

ರಷ್ಯಾ - ಉಕ್ರೇನ್ ಯುದ್ಧ ಸೇರಿದಂತೆ ಹಲವು ಕಾರಣಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏರಿಕೆಯಾದ ಪರಿಣಾಮ ದೇಶೀಯ ತೈಲ ಮಾರಾಟ ಕಂಪನಿಗಳು 2022ರಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ.17 ಮತ್ತು ಡೀಸೆಲ್‌ಗೆ ರೂ.35 ಗರಿಷ್ಠ ನಷ್ಟ ಅನುಭವಿದ್ದವು. ಈಗ, 1 ಲೀಟರ್ ಪೆಟ್ರೋಲ್‌ಗೆ ರೂ.8 - ರೂ.10 ಹಾಗೂ ಡೀಸೆಲ್‌ಗೆ ರೂ.3 - ರೂ.4 ಲಾಭವನ್ನು ಮಾಡುತ್ತಿದ್ದು, ರೂ.28,000 ಕೋಟಿ ಆದಾಯ ಗಳಿಸಿವೆ.
ರಾಜ್ಯದಲ್ಲಿ ಇಂಧನ ದರಗಳು ಎಷ್ಟಿದೆ ಎನ್ನುವುದನ್ನು ನೋಡುವುದಾದರೆ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.94 ಇದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.87.89 ಇದೆ. ಮೈಸೂರಿನಲ್ಲಿ 1 ಲೀ. ಪೆಟ್ರೋಲ್ ದರ ರೂ.101.63, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.87.61 ಇದೆ. ದಾವಣಗೆರೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.103.85 ಮತ್ತು 1 ಲೀ. ಡೀಸೆಲ್ ದರ ರೂ.89.45 ಇದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.96.72 ಇದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.89.62 ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.106.31 ಹಾಗೂ 1 ಲೀ. ಡೀಸೆಲ್ ದರ ರೂ.94.27 ಇದೆ. ಚೆನ್ನೈನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.102.63, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.94.24 ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications