Google Maps ನಂಬಿದವರ ಪರಿಸ್ಥಿತಿ ನೋಡಿ! ಪ್ರವಾಹಕ್ಕೆ ಸಿಲುಕಿ ಜೀವ ಕಳೆದುಕೊಂಡ ಯುವಕರು
ಟೆಕ್ನಾಲಜಿ ಬೆಳೆದಂತೆ ದೇಶ ಎಷ್ಟು ಅಭಿವೃದ್ಧಿ ಕಾಣುತ್ತಿದೆಯೋ ಅದೇ ರೀತಿ ಒಂದಷ್ಟು ಸಮಸ್ಯೆಗಳನ್ನು ಕೂಡ ತಂದೊಡ್ಡುತ್ತದೆ. ಆದ್ರೆ ಈ ಸಮಸ್ಯೆಗಳು ನೂರರಲ್ಲಿ ಒಬ್ಬರಿಗೆ ಆಗುವುದರಿಂದ ಅದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಈಗ ಅತ್ಯಾಧುನಿಕ ದಾರಿ ಮಾರ್ಗದರ್ಶಿ ಎಂದು ಕರೆಯಲಾಗುವ ಗೂಗಲ್ ಮ್ಯಾಪ್ಸ್ ನಂಬಿಕೊಂಡು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
Google Maps ಬಂದ ಬಳಿಕ ಮಾರ್ಗ ತಿಳಿಯದವರು ದಾರಿ ಹೋಕರನ್ನು ಕೇಳುವುದನ್ನೇ ಬಿಟ್ಟಿದ್ದಾರೆ. ಈ ಲೇಖನ ಓದುತ್ತಿರುವ ಬಹುತೇಕರಿಗೆ ಗೂಗಲ್ ಮ್ಯಾಪ್ ತಪ್ಪು ದಾರಿಯನ್ನು ತೋರಿರುವ ಅನುಭವ ಕಂಡಿತ ಆಗಿರುತ್ತದೆ ಅಲ್ಲವೇ? ಆದ್ರೆ ಕಲವೊಮ್ಮೆ ಮಾತ್ರ ತಪ್ಪು ದಾರಿಯ ಅನುಭವವಾದ್ರು ಹಲವು ಬಾರಿ ಅದು ಸರಿ ದಾರಿಯನ್ನೇ ತೋರಿರುವುದರಿಂದ ಒಂದೆರಡು ಬಾರಿ ತಪ್ಪು ಮಾರ್ಗಗಳನ್ನು ತೋರಿದ್ರು ಯಾರು ತಲೆಕೆಡಿಸಿಕೊಳ್ಳುವುದಿಲ್ಲ.

ಇಂಟರ್ನೆಟ್ ಸಮಸ್ಯೆ, ಲೋಡಿಂಗ್ ಸಮಸ್ಯೆ, ಮೊಬೈಲ್ ಫೋನ್ ಹ್ಯಾಂಗ್ ಆಗುವುದು ಸೇರಿದಂತೆ ಸಾಫ್ಟ್‌ವೇರ್ ಅಪ್‌ಡೇಟ್‌ಗಳಂತಹ ಹಲವು ಕಾರಣಗಳಿಂದ ಗೂಗಲ್ ಮ್ಯಾಪ್ಸ್ ಸರಿಯಾಗಿ ಕೆಲಸ ಮಾಡದಿರಬಹುದು. ಆದ್ರೆ ಹಲವರು ಇವುಗಳ ಬಗ್ಗೆ ತಿಳಿಯದೇ ಗೂಗಲ್ ಮ್ಯಾಪ್ಸ್ ಅನ್ನು ಬಳಸಿ ತೊಂದರೆಗೆ ಸಿಲುಕುತ್ತಾರೆ. ಈ ಹಿಂದೆ ಕೂಡ ಗೂಗಲ್ ಮ್ಯಾಪ್ಸ್ ನಂಬಿ ಹಲವರು ಅಪಘಾತಗಳನ್ನು ಎದುರಿಸಿರುವ ಉದಾಹರಣೆಗಳು ಇವೆ.
ಇದೀಗ ಬೆಳಕಿಗೆ ಬಂದಿರುವ ಘಟನೆಯ ಬಗ್ಗೆ ಹೇಳುವುದಾದ್ರೆ, ಒಂದೇ ಬೈಕಿನಲ್ಲಿ ಹೊರಟಿದ್ದ ಮೂವರ ಯುವಕರಲ್ಲಿ ಇಬ್ಬರು ಪ್ರವಾಹಕ್ಕೆ ಕೊಚ್ಚಿಹೋಗಿದ್ದರೇ ಓರ್ವ ಈಜಿಕೊಂಡು ದಡ ಸೇರಿದ್ದಾನೆ. ಆನಂದ್ ಚೌರಾಸಿಯಾ ಮತ್ತು ಮನೀಶ್ ಮೆಹ್ತಾ ಎಂದು ಗುರುತಿಸಲಾದ ಇಬ್ಬರು ಯುವಕರ ಮೃತದೇಹಗಳು ಸೋಮವಾರ ಕೊಚ್ಚಿಹೋದ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿ ಪತ್ತೆಯಾಗಿವೆ.

ಆಗಿದ್ದೇನು?: ಕಳೆದ ಭಾನುವಾರ ರಾತ್ರಿ ಮೋಟಾರ್‌ಸೈಕಲ್‌ನಲ್ಲಿ ಗೂಗಲ್ ಮ್ಯಾಪ್ಸ್ ಆನ್ ಮಾಡಿಕೊಂಡು ಮನೆಗೆ ಹೊರೆಟಿದ್ದ ಯುವಕರಿಗೆ, ಗೂಗಲ್ ಮ್ಯಾಪ್ಸ್ ಎರಡು ಸಂಭವನೀಯ ಮಾರ್ಗಗಳನ್ನು ಸೂಚಿಸಿದೆ. ಈ ವೇಳೆ ಅವರು ಸುಲಭ ಮಾರ್ಗವನ್ನು ಆಯ್ಕೆ ಮಾಡಿದ್ದು, ಗೂಗಲ್ ಮ್ಯಾಪ್ಸ್ ಹಳೆಯ ಸೇತುವೆಯ ಕಡೆಗೆ ಅವರನ್ನು ಕರೆದೊಯ್ದಿದೆ. ಅದು ಕೂಡ ನಿರ್ಮಾಣ ಹಂತದಲ್ಲಿದ್ದ ಕಾರಣ ಅವರ ಮುಂದಿನ ಹಾದಿ ಅಸ್ಪಷ್ಟವಾಗಿದೆ.
ಹೇಗೂ ತುಂಬಾ ದೂರ ಬಂದಿದ್ದ ಯುವಕರು ಸೇತುವೆಯನ್ನು ದಾಟಲು ನಿರ್ಧರಿದ್ದಾರೆ. ಮೊದಲು ಬೈಕ್‌ನಿಂದ ಇಳಿದ ಯುವಕ ನದಿಯ ಆಳವನ್ನು ಅಳೆಯಲು ಮುಂದಾದಾಗ ತೀವ್ರ ಪ್ರವಾಹಕ್ಕೆ ಕೊಚ್ಚಿ ಹೋಗಿರುವುದಾಗಿ ಬದುಕುಳಿದ ಶಂಕರ್ ತಿಳಿಸಿದ್ದಾರೆ. ಅವನನ್ನು ರಕ್ಷಿಸಲು ಇಬ್ಬರು ಕೂಡ ನೀರಿಗೆ ಇಳಿದಿದ್ದು ಸ್ವಲ್ಪ ಸಮಯದ ನಂತರ ಮೂವರು ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.
ಮೂವರು ಯುವಕರ ಪೈಕಿ ಇಬ್ಬರು ಗಿರಿದಿಹ್‌ನ ಅರ್ಘಾ ಘಾಟ್‌ನಲ್ಲಿ ಉಸ್ರಿ ನದಿಯ ಬಲವಾದ ಪ್ರವಾಹಕ್ಕೆ ಕೊಚ್ಚಿಹೋದರು. ಅವರಲ್ಲಿ ಒಬ್ಬರು ಈಜಿಕೊಂಡು ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಶಂಕರ್ ಕುಮಾರ್ ಮೆಹ್ತಾ ಸೇರಿದಂತೆ ಮೂವರೂ ಹಜಾರಿಬಾಗ್ ನಿವಾಸಿಗಳು, ಸುಮಾರು 30ರ ಆಸುಪಾಸಿನ ವಯಸ್ಸಿನವರು ಎಂದು ಅಲ್ಲಿನ ಡಿಎಸ್ಪಿ ತಿಳಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಗೂಗಲ್ ಮ್ಯಾಪ್ಸ್‌ನಲ್ಲಿ ನಾವು ನಮೂದಿಸುವ ಸ್ಥಳಕ್ಕೆ ನೇರವಾಗಿ ಮ್ಯಾಪ್ಸ್ ಒಂದು ಮಾರ್ಗವನ್ನು ಸೂಚಿಸುತ್ತದೆ. ಬಹುತೇಕ ಆ ಮಾರ್ಗದಲ್ಲಿ ನಮಗೆ ಯಾವುದೇ ಅಡ್ಡಿಗಳು ಇರುವುದಿಲ್ಲ. ಇದರ ಜೊತೆಗೆ ಸಣ್ಣ ಪುಟ್ಟ ಮಾರ್ಗಗಳನ್ನು ಕೂಡ ಆಯ್ಕೆಯಾಗಿ ತೋರುತ್ತದೆ. ಆದ್ರೆ ಇವು ಬಹುತೇಕ ಸರಿ ಇರೋದಿಲ್ಲ, ಹಾಗಾಗಿ ಆಯ್ಕೆಯಾಗಿ ನೀಡುವ ಮಾರ್ಗಗಳನ್ನು ನಿರ್ಲಕ್ಷಿಸುವುದು ಉತ್ತಮ.


Click it and Unblock the Notifications