50 ವರ್ಷ ಹಳೆಯ ಬೈಕನ್ನು ರೀಸ್ಟೋರ್ ಮಾಡಿದ 82 ವರ್ಷದ ಅಜ್ಜಿ: ನಂತರ ಮಾಡಿದ್ದೇನು ಗೊತ್ತಾ?
ಕೆಲವರಿಗೆ ಬೈಕ್ ಅಥವಾ ಕಾರುಗಳು ಎಂದರೆ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಸ್ತು ಅಥವಾ ಮನುಷ್ಯರನ್ನು ಸಾಗಿಸಲು ಇರುವಂತಹ ಒಂದು ವಸ್ತು ಅಷ್ಟೆ. ಅದಕ್ಕಿಂತ ಹೆಚ್ಚಾಗಿ ಅವರು ಅದನ್ನು ಪರಿಗಣಿಸುವುದೇ ಇಲ್ಲ. ಆದರೆ ಇನ್ನು ಹಲವರಿಗೆ ವಾಹನಗಳು ಎಂದರೆ ಅದೊಂದು ಎಮೋಷನ್.
ಇದಕ್ಕೆ ಉದಾಹರಣೆಗಳಾಗಿ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದಿದೆ. ಅದರಲ್ಲೂ ಕೆಲವರಂತೂ ತಮ್ಮ ತಾತ, ತಂದೆ ಬಳಸಿದ ಕಾರು, ಬೈಕ್ ಎಂದು ಹಲವು ವಾಹನಗಳನ್ನು ಜೋಪಾನ ಮಾಡಿಟ್ಟುಕೊಳ್ಳುತ್ತಾರೆ. ಇದೀಗ ಸಾಮಾಜಿಕ ಜಾಲತಾಗಳಲ್ಲಿ ಇದೇ ರೀತಿಯ ಘಟನೆಯೊಂದು ಭಾರೀ ಸದ್ದು ಮಾಡುತ್ತಿದೆ. ಘಟನೆಯಲ್ಲಿ ಅಜ್ಜಿ ತಮ್ಮ ಮೊಮ್ಮಕ್ಕಳಿಗೆ ತನ್ನ ಗಂಡ ಬಳಸಿದ ಹಳೆಯ ಬೈಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸುಮಾರು 82 ವಯಸ್ಸಿನ ಅಜ್ಜಿ, ತನ್ನ ಮೊಮ್ಮಕ್ಕಳಿಗೆ ಸುಮಾರು 50 ವರ್ಷದ ಹಳೆಯ ಜಾವಾ ಬೈಕೊಂದನ್ನು ರೀ-ಸ್ಟೋರ್ ಮಾಡಿ ಕೊಟ್ಟಿದ್ದಾರೆ. ಈ ಘಟನೆ ಭಾರೀ ಸದ್ದು ಮಾಡುತ್ತಿದ್ದು, ಆ ಬೈಕ್ ಹಲವು ದಶಕಗಳ ಹಿಂದೆ ಆಕೆಯ ಗಂಡ ಉಪಯೋಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ತಮ್ಮ ಮೊಮ್ಮಕ್ಕಳಿಗೆ ಇದಕ್ಕಿಂತ ದೊಡ್ಡ ಗಿಫ್ಟ್ ಏನು ತಾನೇ ಸಿಗಬಲ್ಲದು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಅಭಿಪ್ರಾಯ.
ಘಟನೆಯ ವಿಡಿಯೋ ಕ್ಲಚ್ ಆ್ಯಂಡ್ ಗಿಯರ್ ಎಂಬ ಯ್ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಆಗಿದ್ದು, ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ತಿಳಿಸಿರುವಂತೆ ಸುಮಾರು 50 ವರ್ಷ ಹಳೆಯ ಜಾವಾ ಕಂಪನಿಯ ಬೈಕ್ ಎಂದು ತಿಳಿದು ಬಂದಿದೆ. ತನ್ನ ತೀರಿ ಹೋದ ಗಂಡನ ನೆನಪಿಗಾಗಿ ಅಜ್ಜಿ ಈ ಬೈಕ್ ಅನ್ನು ಮಾರದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದರು.

ಅಜ್ಜಿಯು ಈ ವರ್ಷ ತಮ್ಮ ಹಳೆಯ ಬೈಕ್ ಅನ್ನು ನವೀಕರಿಸಲು ತೀರ್ಮಾನ ಮಾಡಿ, ಮೊಮ್ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಬೈಕ್ ಅನ್ನು ನವೀಕರಿಸಲು ಒಂದು ದೊಡ್ಡ ಮೊತ್ತವೇ ಖರ್ಚಾಗಿದ್ದು ಅದರ ಸಂಪೂರ್ಣ ವೆಚ್ಚವನ್ನೂ ಅಜ್ಜಿಯೇ ಭರಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ದೊರಕಿರುವ ಮಾಹಿತಿಗಳ ಪ್ರಕಾರ ಈ ಬೈಕ್ ತೀರಾ ಹಳೆಯದು ಮತ್ತು ಬಹಳಷ್ಟು ವರ್ಷಗಳಿಂದ ಬಳಕೆಯಲ್ಲಿ ಇರಲಿಲ್ಲ.
ಹಾಗಾಗಿ ಇದನ್ನೇ ಕಾರಣವನ್ನಾಗಿಟ್ಟುಕೊಂಡು ಹಲವರು ಅಜ್ಜಿಯ ಮನಃ ಪರಿವರ್ತನೆ ಮಾಡಲು ಪ್ರಯತ್ನಿಸಿದ್ದರು. ಹಳೆಯ ಬೈಕ್ ಆಗಿದ್ದರಿಂದ ಇದರ ಬಿಡಿ ಭಾಗಗಳು ಅಷ್ಟು ಸುಲಭವಾಗಿ ಸಿಗಲಾರದು ಎಂದು ಅಜ್ಜಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅಜ್ಜಿ ಮಾತ್ರ ಬೈಕ್ ಅನ್ನು ನವೀಕರಣಗೊಳಿಸುವ ತನ್ನ ನಿರ್ಧಾರದಿಂದ ಹೊರಬಂದಿರಲಿಲ್ಲ ಎಂದು ತಿಳಿದು ಬಂದಿದೆ.

ಈ ಬೈಕ್ ನವೀಕರಿಸುವ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡ ತಂಡವೊಂದು 50 ವರ್ಷ ಹಳೆಯದಾದ ಬೈಕ್ ಅನ್ನು ತುಂಬಾ ನೀಟಾಗಿ ನವೀಕರಣ ಗೊಳಿಸಿದೆ. ತುಕ್ಕು ಹಿಡಿದು ಮೂಲೆ ಸೇರಿದ್ದ ಈ ಜಾವಾ ಬೈಕ್‌ನ ಪ್ರತಿಯೊಂದು ಭಾಗಕ್ಕೂ ಪೈಂಟ್ ಮಾಡಿ ಹಳೆಯದಾಗಿದ್ದ ಎಲ್ಲಾ ಭಾಗಗಳನ್ನು ರೀಪ್ಲೇಸ್ ಮಾಡಿ, ಹೊಸ ಟೈರ್‌ಗಳನ್ನು ಹಾಕಿ ಕೊನೆಗೆ ಈ ಬೈಕನ್ನು ಹೊಸ ಬೈಕ್ ರೀತಿಯಲ್ಲಿ ರೀಸ್ಟೋರ್ ಮಾಡಿ ಅಜ್ಜಿಯ ಮುಂದಿಟ್ಟಿದ್ದಾರೆ.
ತನ್ನ ಪತಿ ಓಡಿಸುತ್ತಿದ್ದ ಹಳೆಯ ಬೈಕ್ ಹೊಚ್ಚ ಹೊಸದಾಗಿ ತನ್ನ ಕಣ್ಣ ಮುಂದೆ ಬಂದಾಗ ಅಜ್ಜಿ ಒಂದು ಕ್ಷಣ ಭಾವುಕರಾಗಿದ್ದರು. ಈ ಬೈಕ್ ಹಿಂದೆ ಕೂತು ಪ್ರಯಾಣ ಮಾಡುತ್ತಿದ್ದ ನೆನಪುಗಳೆಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಸಾಗಿ ಹೋದ ಹಾಗಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಂತರದಲ್ಲಿ ರೀಸ್ಟೋರ್ ಮಾಡಿ ಹೊಸ ಬೈಕ್‌ನಂತೆ ಕಂಗೊಳಿಸುತ್ತಿದ್ದ ಬೈಕ್ ಅನ್ನು ತಮ್ಮ ಮುದ್ದು ಮೊಮ್ಮಕ್ಕಳಿಗೆ ಸಂತೋಷದಿಂದ ಉಡುಗೊರೆಯಾಗಿ ನೀಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications