ಚೀನಾದಲ್ಲಿ ಬಿಕೋ ಎನ್ನುತ್ತಿರುವ 200ರಷ್ಟು ಐಷಾರಾಮಿ ಕಾರುಗಳ ಸ್ಮಶಾನ
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ನಗರದಲ್ಲಿ 200ರಷ್ಟು ಐಷಾರಾಮಿ ಕಾರುಗಳು ವಾರಿಸುದಾರರಿಲ್ಲದೆ ಅನಾಥವಾಗಿ ಬಿದ್ದಿದೆ. ಇಲ್ಲಿ ಪಾಳು ಬಿದ್ದಿರುವ ಐಷಾರಾಮಿ ಸೆಡಾನ್ ಮತ್ತು ಸ್ಪೋರ್ಟ್ಸ್ ಕಾರುಗಳ ನಡುವೆ ಮರ ಗಿಡಗಳು ಬೆಳೆದು ದಟ್ಟವಾದ ಕಾಡು ಆವರಿಸಿದೆ.
ವರ್ಷಗಳ ಹಿಂದೆ ಮಾಲಿಕರು ತಮ್ಮ ಐಷಾರಾಮಿ ಕಾರುಗಳನ್ನು ಅನ್ಯ ಮಾರ್ಗವಿಲ್ಲದೆ ಇಲ್ಲಿ ಬಿಟ್ಟು ತೆರಳಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಕೇಸು ಕೋರ್ಟ್ ಮೆಟ್ಟಿಲೇರಿರುವುದರಿಂದ ಲಗ್ಷುರಿ ಕಾರುಗಳು ಬಿಕೋ ಎನ್ನುವಂತಾಗಿದೆ.

ತಲಾ ಎರಡು ಬೆಂಟ್ಲಿ ಮತ್ತು ಲ್ಯಾಂಡ್ ರೋವರ್, ಮೂರು ಮರ್ಸಿಡಿಸ್ ಬೆಂಝ್, ಆಡಿ ಸೇರಿದಂತೆ ಅನೇಕ ಕಾರುಗಳು ಇಲ್ಲಿ ಅನಾಥವಾಗಿದೆ. ಇದರ ಜೊತೆಗೆ ಸೂಪರ್ ಬೈಕ್ ಸಹ ಕಾಣಬಹುದಾಗಿದೆ.

ಕೇವಲ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಹಾಗೂ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮೌಲ್ಯವನ್ನು ಒಟ್ಟು ಸೇರಿಸಿದರೆ ಕೋಟಿಗಟ್ಟಲೆ ರುಪಾಯಿಗಳಷ್ಟು ಬೆಲೆ ಬರುತ್ತದೆ.

ಬಹುತೇಕ ವಾಹನಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕ್ರಿಮಿನಲ್ ದೂರು ದಾಖಲಾಗಿರುವುದು ಕಂಡುಬಂದಿದೆ. ಇದರಿಂದಾಗಿ ಮಾಲಿಕರಿಗೆ ತಮ್ಮ ಕಾರುಗಳನ್ನು ಹಿಂತಿರುಗಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಸದ್ಯ ಈ ಎಲ್ಲ ಐಷಾರಾಮಿ ಕಾರುಗಳು ಸ್ಥಳೀಯ ಆಡಳಿತ ವರ್ಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ.

ಕೆಲವು ಕಾರುಗಳನ್ನು ಹರಾಜು ನಡೆಸಲಾದರೂ ಭಾರಿ ಸಂಖ್ಯೆಯಲ್ಲಿ ಕಾರುಗಳು ಎರಡು ವರ್ಷಗಳಿಂದ ಇಲ್ಲೇ ಬಿಕೋ ಎನ್ನುತ್ತಿರುವುದರಿಂದ ಮಾರಾಟ ಮಾಡುವ ಸ್ಥಿತಿಯಲ್ಲಿಲ್ಲ.

ಮತ್ತಷ್ಟು ಕಾರುಗಳ ಗುರುತು ಪತ್ರಗಳು ಸರಿಯಾಗಿಲ್ಲ. ಹಾಗೂ ಇನ್ನು ಕೆಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದೆ ಎಂದು ಆಡಳಿತ ವರ್ಗವು ತಿಳಿಸುತ್ತದೆ.

ಭಾರತದಲ್ಲೂ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿದ ಅನೇಕ ಕಾರು, ಬೈಕ್ ಗಳು ನೆನೆಗುದಿಗೆ ಬಿದ್ದಿರುವ ದೃಶ್ಯಗಳನ್ನು ನೀವು ಕಾಣಬಹುದಾಗಿದೆ.

ಆದರೆ ಐಷಾರಾಮಿ ಕಾರುಗಳಿಗೆ ಇಂತಹ ದುಸ್ಥಿತಿ ಎದುರಾಗಿರುವುದು ಖೇದಕರ ಸಂಗತಿಯಾಗಿದೆ.

ಒಟ್ಟಿನಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಐಷಾರಾಮಿ ಕಾರುಗಳ ಪರಿಸ್ಥಿತಿಯೂ ಸಾಮಾನ್ಯ ಕಾರುಗಳಿಗಿಂತ ಭಿನ್ನವಾಗಿಲ್ಲ ಎಂಬುದನ್ನಿಲ್ಲಿ ಗಮನಿಸಬಹುದಾಗಿದೆ.


Click it and Unblock the Notifications








