ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಹೆಲಿಕಾಫ್ಟರ್... ಅಲ್ಲಲ್ಲಾ ಹೆಲಿಕಾಫ್ಟರ್‌ನಿಂದಲೇ ಟ್ರಾಫಿಕ್!
ಬೆಂಗಳೂರು ತನ್ನ ಟ್ರಾಫಿಕ್ ದಟ್ಟಣೆಗೆ ಹೆಸರುವಾಸಿಯಾಗಿದೆ, ಡಚ್ ಕಂಪನಿಯೊಂದು 2022 ರಲ್ಲಿ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕೂಡ ಶ್ರೇಯಾಂಕ ನೀಡಿದೆ. ಇದೀಗ ಇದೇ ಟ್ರಾಫಿಕ್ ಮಧ್ಯೆ ಹೆಲಿಕಾಫ್ಟರ್ ಸಿಲುಕಿರುವ ದೃಷ್ಯಕಂಡುಬಂದಿದೆ. ಆದ್ರೆ ನಿಜಕ್ಕೆ ಹೆಲಿಕಾಫ್ಟರ್ ನಿಂತಿದ್ದರಿಂದಲೇ ಅಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಈ ದೃಶ್ಯವನ್ನು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ವಾಹನ ಸವಾರರು ಫೋಟೋ ತೆಗೆದು ಎಕ್ಸ್‌ನಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ. ಫೋಟೋವನ್ನು ಗಮನಿಸಿದರೆ ಬೆಂಗಳೂರಿನ ಪೂರ್ವದಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಚೇರಿಯ ಬಳಿ ಹೆಲಿಕಾಫ್ಟರ್ ನಿಂತಿರುವುದನ್ನು ತೋರಿಸುತ್ತಿದೆ. ಆದರೆ ಹೆಲಿಕಾಫ್ಟರ್ ಏಕೆ ರಸ್ತ ಮಧ್ಯೆ ನಿಂತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಈ ದೃಷ್ಯವು ನೋಡುಗರಿಗೆ ಬಹಳಷ್ಟು ಮನರಂಜನೆ ನೀಡುತ್ತಿದೆ. ಸಾಮಾನ್ಯವಾಗಿ ಆಕಾಶದಲ್ಲಿ ಕಾಣುವ ಹೆಲಿಕಾಫ್ಟರ್ ಧಿಡೀರ್ ಎಂದು ರಸ್ತೆ ಮಧ್ಯೆ ಕಾಣಿಸಿಕೊಂಡರೆ ಅದು ಅಚ್ಚರಿಯೇ ಅಲ್ಲವೇ? ಇಲ್ಲೂ ಕೂಡ ಹಾಗೆ ಹಾಗಿದ್ದು ಕುತೂಹಲ ಹೆಚ್ಚಾಗಿ ವಾಹನ ಸವಾರರರು ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಮಧ್ಯೆ ಟ್ರಾಫಿಕ್‌ನಲ್ಲಿ ಹೆಲಿಕಾಫ್ಟರ್ ಎಂದು ಶೀರ್ಷಿಕೆ ನೀಡಿ ವೈರಲ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗೆ ಉಲ್ಲಾಸದ ಕಮೆಂಟ್‌ಗಳನ್ನು ಹಾಕಿದ್ದಾರೆ. ಕೆಲಸಕ್ಕೆ ಹೊರಟಿದ್ದ ಸವಾರನೊಬ್ಬ "ಇಂದು ನನ್ನ ಬಾಸ್‌ಗೆ ಹಕ್ಕಿಯೊಂದು ರಸ್ತೆ ದಾಟುತ್ತಿದೆ, ಆದ್ದರಿಂದ ನಾನು ಆಫೀಸ್‌ಗೆ ಇಂದು ತಡವಾಗಿ ಬಂದಿದ್ದೇನೆ" ಎಂದೆಲ್ಲಾ ತಮಾಷೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ಕ್ಷಣಗಳನ್ನು 'ಪೀಕ್ ಬೆಂಗಳೂರು' ಎಂದು ಟ್ಯಾಗ್ ಮಾಡುತ್ತಿದ್ದಾರೆ.
ನಮ್ಮಲ್ಲಿನ ಹಲವರಿಗೆ ತಿಳಿಯದ ಸಂಗತಿಯೆಂದರೆ ದೇಶದಲ್ಲಿ ಬೆಂಗಳೂರನ್ನು ಮೀರಿಸುವ ಟ್ರಾಫಿಕ್ ಸಿಟಿಗಳು ತುಂಬಾ ಇವೆ. ಅವುಗಳಲ್ಲಿ ಮೊದಲನೆಯದು ದೆಹಲಿ, ಇಲ್ಲಿನ ಟ್ರಾಫಿಕ್ ಜಾಮ್ ಅನ್ನು ಒಮ್ಮೆ ನೋಡಿದ್ರೆ ಎಂಥವರೂ ಬೆಂಗಳೂರೇ ಪರವಾಗಿಲ್ಲ ಎನ್ನುತ್ತೀರ. ಹಾಗೆಯೇ ಕೊಲ್ಕತ್ತಾ ಹಾಗೂ ಮುಂಬೈ ನಗರಗಳು ಕೂಡ ಟ್ರಾಫಿಕ್ ವಿಷಯದಲ್ಲಿ ವಿಶ್ವ ಮಟ್ಟದಲ್ಲಿ ಈಗ ಗುರ್ತಿಸಿಕೊಂಡಿವೆ.
ವಿಶ್ವದ ಅತಿದೊಡ್ಡ ಟ್ರಾಫಿಕ್ ನಗರಗಳು: ಇತ್ತೀಚೆಗೆ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಟ್ವಿಟರ್‌ನಲ್ಲಿ ವಿಶ್ವದಾದ್ಯಂತದ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೆಟ್ಟ ಸಂಚಾರ ವ್ಯವಸ್ಥೆಯಿಂದ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ನಗರಗಳಲ್ಲಿ ಲಾಸ್ ಏಂಜಲೀಸ್, ಸ್ಯಾನ್ ಜೋಸ್, ಕೊಲಂಬೊ, ಢಾಕಾ, ದೆಹಲಿ, ಶಾರ್ಜಾ, ಕೋಲ್ಕತ್ತಾ, ಗ್ವಾಟೆಮಾಲಾ ಸಿಟಿ ಮತ್ತು ಮುಂಬೈನಂತಹ ನಗರಗಳು ಸೇರಿವೆ.

ಮೊದಲೇ ಹೇಳಿದಂತೆ ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ನ ವರದಿಯ ಪ್ರಕಾರ, ಲಾಗೋಸ್ ವಿಶ್ವದ ಅತ್ಯಂತ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೇ, ಕ್ಯಾಲಿಫೋರ್ನಿಯಾ ರಾಜ್ಯದ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್ ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ಎರಡನೇ ಸಿಟಿಯಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಶ್ರೀಲಂಕಾ ರಾಜಧಾನಿ ಕೊಲಂಬೊ ನಾಲ್ಕನೇ ಸ್ಥಾನದಲ್ಲಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಐದನೇ ಸ್ಥಾನ ಹಾಗೂ ಭಾರತದ ರಾಜಧಾನಿ ದೆಹಲಿ ಆರನೇ ಸ್ಥಾನದಲ್ಲಿದೆ. ಕೋಲ್ಕತ್ತಾ ಎಂಟನೇ ಸ್ಥಾನ ಮತ್ತು ಮುಂಬೈ ಹತ್ತನೇ ಸ್ಥಾನದಲ್ಲಿದೆ. ಸುದೀರ್ಘ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿರುವ ಬೆಂಗಳೂರು ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿದೆ.

ಪ್ರಪಂಚದಾದ್ಯಂತದ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗುತ್ತಿದೆ, ಪ್ರಾಥಮಿಕವಾಗಿ ನಡೆಯುತ್ತಿರುವ ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹಲವು ಪಟ್ಟು ಹೆಚ್ಚಾಗಲಿದೆ ಎಂದು ವರದಿಗಳು ಹೇಳುತ್ತಿವೆ. ಇತ್ತೀಚಿನ ವರದಿಯ ಪ್ರಕಾರ, ಹಳೆಯ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರಗಳು ಅತ್ಯಧಿಕ ಮಟ್ಟದ ಸಂಚಾರ ದಟ್ಟಣೆಯನ್ನು ಹೊಂದಿವೆ.


Click it and Unblock the Notifications