Hero Splendor: ಅಪ್ಪ-ಮಗನ ಸಾಹಸಕ್ಕೆ ಮೆಚ್ಚಿ 13 ಲಕ್ಷ ಮೌಲ್ಯದ ಬೈಕ್ ಉಡುಗೊರೆ ಕೊಟ್ಟ ಹೀರೋ
ಮಂಗಳೂರು ಮೂಲದ ತಂದೆ-ಮಗ ಜೋಡಿಯಾಗಿ ಹೀರೋ ಕಂಪನಿಯ ಮನಗೆದ್ದು 13 ಲಕ್ಷ ಮೌಲ್ಯದ ಲಿಮಿಟೆಡ್ ಎಡಿಷನ್ ಸೂಪರ್‌ಬೈಕ್ ಅನ್ನು ಕಂಪನಿಯಿಂದ ಉಡುಗೊರೆಯಾಗಿ ಪಡೆದಿದ್ದಾರೆ. ಇವರಿಬ್ಬರು ಸುಧೀರ್ಘ ಸವಾರಿ ಮಾಡಿ ಬೈಕಿಂಗ್ ಸಮುದಾಯವನ್ನು ಆಕರ್ಷಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಸಾಹಸದಿಂದ ಬ್ರ್ಯಾಂಡ್‌ಗೆ ಭರ್ಜರಿ ಜನಪ್ರಿಯತೆ ಕೂಡ ಸಿಕ್ಕಿದೆ. ಹೀರೋ ಜನಪ್ರಿಯತೆ ಗಳಿಸುತ್ತಿದ್ದಂತೆ ಇದನ್ನು ಗಮನಿಸಿ, ಹೀರೋ ಸೆಂಟೆನಿಯಲ್ ಎಡಿಷನ್ ಸೂಪರ್‌ಬೈಕ್ ಅನ್ನು ಉಡುಗೊರೆಯಾಗಿ ನೀಡಿ ಅವರನ್ನು ಗೌರವಿಸಿದೆ. ಅಷ್ಟಕ್ಕೂ ಅವರು ಮಾಡಿದ ಸಾಹಸವಾದ್ರು ಏನು?
25 ವರ್ಷದ ಹಳೆಯ ಹೀರೋ ಸ್ಪ್ಲೆಂಡರ್ (Hero Splendor) ನಲ್ಲಿ ಪ್ರಜ್ವಲ್ ಶೆಣೈ ಮತ್ತು ಅವರ ತಂದೆ ಮಂಗಳೂರಿನಿಂದ ಲಡಾಖ್‌ಗೆ ಸವಾರಿ ಮಾಡಿ ಬೈಕಿಂಗ್ ಸಮುದಾಯವನ್ನು ಆಕರ್ಷಿಸಿದ್ದಾರೆ. ಅವರ ಪ್ರಯಾಣವು ಹೀರೋ ಬ್ರ್ಯಾಂಡ್‌ಗೆ ನಿಷ್ಠೆಯನ್ನು ಪ್ರದರ್ಶಿಸಿದ್ದು, ಸ್ಪ್ಲೆಂಡರ್ ಮೋಟಾರ್‌ಸೈಕಲ್‌ನ ನಿರಂತರ ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಿದೆ. ಇದು ಬ್ರಾಂಡ್‌ನ ಮನಗೆದ್ದಿದ್ದು, ರೂ. 13 ಲಕ್ಷ ಮೌಲ್ಯದ ಹೀರೋ ಸೆಂಟೆನಿಯಲ್ ಎಡಿಷನ್ ಅನ್ನು ಉಡುಗೊರೆಯಾಗಿ ನೀಡಿದೆ.

ಸಾಮಾನ್ಯವಾಗಿ ಜನರು ತಮ್ಮ ದುಬಾರಿ ಮತ್ತು ಪವರ್‌ಫುಲ್ ಅಡ್ವೆಂಚರ್ ಬೈಕುಗಳಲ್ಲಿ ಪರ್ವತಗಳಿಗೆ ಬೈಕ್ ಸವಾರಿ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ 25 ವರ್ಷ ಹಳೆಯ ಹೀರೋ ಸ್ಪ್ಲೆಂಡರ್ ಮೋಟಾರ್‌ಸೈಕಲ್ ಅನ್ನು ಸವಾರಿ ಮಾಡುವ ಮೂಲಕ ಈ ಇಬ್ಬರು ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇದು ಭಾರತದಲ್ಲಿ ಸ್ಪ್ಲೆಂಡರ್ ಬೈಕ್‌ಗೆ ಖರ್ಚಿಲ್ಲದೆ ಉಚಿತವಾಗಿ ಪ್ರಭಾವಿತ ಜಾಹಿರಾತು ಮಾಡಿಕೊಟ್ಟಂತಾಗಿದೆ.
ಹೀರೋ ಸ್ಪ್ಲೆಂಡರ್ ದೇಶಿಯ ಮಾರುಕಟ್ಟೆಯಲ್ಲಿ ಐಕಾನಿಕ್ ಮೋಟಾರ್ ಸೈಕಲ್ ಆಗಿದ್ದು, ಇದು ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಭಾರತೀಯ ಮೋಟಾರ್ ಸೈಕಲ್ ಆಗಿದೆ. ಸ್ಪ್ಲೆಂಡರ್ ಸುಮಾರು 30 ವರ್ಷಗಳಿಂದ ಇದೆ, ಇದು ಅನೇಕ ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಬೈಕ್ ಆಗಿದೆ.

ಹೀರೋ ಸೆಂಟೆನಿಯಲ್ ಎಡಿಷನ್ ವಿಶೇಷತೆಗಳು
ಈ ಸೆಂಟೆನಿಯಲ್ ಆವೃತ್ತಿಯು ಕರಿಜ್ಮಾ XMR ಮಾದರಿಯನ್ನು ಆಧರಿಸಿ ವಿಶೇಷವಾಗಿ ರಚಿಸಲಾದ ಮೋಟಾರ್‌ಸೈಕಲ್ ಆಗಿದೆ. ಈ ಬೈಕ್‌ನ ಕೇವಲ 100 ಯುನಿಟ್ ವಾಹನಗಳನ್ನು ಮಾತ್ರ ಉತ್ಪಾದಿಸಲಾಯಿತು. ಸುಮಾರು 75 ದತ್ತಿ ಉದ್ದೇಶಗಳಿಗಾಗಿ ಹಣವನ್ನು ಸಂಗ್ರಹಿಸಲು ಹರಾಜಿನಲ್ಲಿ ಇಡಲಾಗಿದೆ. ಉಳಿದ 25 ವಾಹನಗಳನ್ನು ಉದ್ಯೋಗಿಗಳು ಮತ್ತು ಗ್ರಾಹಕರಿಗೆ ಸ್ಪರ್ಧೆಗಳ ಮೂಲಕ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ಇತ್ತೀಚೆಗೆ ಉಡುಗೊರೆಯಾಗಿ ಪಡೆದ ಈ 25 ವಾಹನಗಳಲ್ಲಿ ಇದು ಒಂದಾಗಿದೆ. ಸೂಪರ್‌ಬೈಕ್‌ನ ವಿತರಣೆ ಹೀರೋ ಶೋ ರೂಂನಲ್ಲಿ ನಡೆಯಿತು. ಅಲ್ಲಿ ಪ್ರಜ್ವಲ್ ಮತ್ತು ಅವರ ತಂದೆ ತಮ್ಮ ಹಳೆಯ ಸ್ಪ್ಲೆಂಡರ್‌ನಲ್ಲಿ ಆಗಮಿಸಿದ್ದರು. ಪ್ರಜ್ವಲ್ ಮತ್ತು ಅವರ ಕುಟುಂಬವು ಬೈಕ್ ಅನ್ನು ನೋಡಿದಾಗ ಭಾವುಕರಾಗುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು.
ಈ ಮೋಟಾರ್‌ಸೈಕಲ್ ಕಾರ್ಬನ್ ಫೈಬರ್ ಬಾಡಿ ಪ್ಯಾನೆಲ್‌ಗಳು, ಅಕ್ರಾಪೋವಿಕ್ ಎಕ್ಸಾಸ್ಟ್, ಹೈಡ್ರೋಫಾರ್ಮ್ಡ್ ಟ್ಯೂಬ್ ಹ್ಯಾಂಡಲ್‌ಬಾರ್, ಮೈಲ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್, 43 ಎಂಎಂ ಅಡ್ಜಸ್ಟಬಲ್ ಯುಎಸ್‌ಡಿ ಫೋರ್ಕ್‌ಗಳು ಮತ್ತು ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಗ್ಯಾಸ್-ಚಾರ್ಜ್ಡ್ ಮೊನೊಶಾಕ್‌ನಂತಹ ಪ್ರೀಮಿಯಂ ಪಾರ್ಟ್‌ಗಳನ್ನು ಒಳಗೊಂಡಿದೆ.
ಇದು ಕರಿಜ್ಮಾ XMR ನಂತೆಯೇ ಅದೇ 210cc, ಸಿಂಗಲ್ - ಸಿಲಿಂಡರ್ ಎಂಜಿನ್ ಹೊಂದಿದ್ದರೂ, ಇದು ಹಗುರವಾಗಿದ್ದು ಹೈ - ಪರ್ಫಾಮೆನ್ಸ್‌ಗಾಗಿ ಟ್ಯೂನ್ ಮಾಡಿರಬಹುದು ಎನ್ನಲಾಗಿದೆ. ವಿವರವಾಗಿ ಹೇಳುವುದಾದ್ರೆ, ಈ ಬೈಕ್ ಕರಿಜ್ಮಾ XMR ಅನ್ನು ಆಧರಿಸಿದೆ ಆದರೆ ಸಾಮಾನ್ಯ XMR ಗಿಂತ ಸುಮಾರು 5.5 ಕೆಜಿ ಹಗುರವಾಗಿದೆ. ಅಪ್ಪ-ಮಗನ ಈ ಅದ್ಬುತ ಉಡುಗೊರೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








