ನೀವು ಲೆಕ್ಕಹಾಕಿದ್ದಕ್ಕಿಂತ ಕಮ್ಮಿ ಖರ್ಚು.. ಸೋಲಾರ್ ಕಾರಾಗಿ 'ಮಾರುತಿ': ಜೀವನಪೂರ್ತಿ ಓಡಾಟ ಉಚಿತ
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಕಾರುಗಳ ಸ್ಥಾನವನ್ನು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳು ಆವರಿಸಿಕೊಳ್ಳುತ್ತಿವೆ. ಆದರೆ, ಇವುಗಳ ನಿರ್ವಹಣೆಗೆ ಇಂತಿಷ್ಟು ವೆಚ್ಚವನ್ನು ಮಾಡಬೇಕು. ಜೊತೆಗೆ ನಗರ ಪ್ರದೇಶದ ಕೆಲವಡೆ ಬಿಟ್ಟರೇ, ಹಳ್ಳಿಗಾಡಿನಲ್ಲಿ ಚಾರ್ಜಿಂಗ್ ಕೇಂದ್ರಗಳೇ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ತಂಡವೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಸದ್ಯ, ಲಭ್ಯವಿರುವ ಇಂಧನ ಚಾಲಿತ ಕಾರುಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಿ, ಯಶಸ್ಸು ಕಂಡಿರುವ ಎಷ್ಟೋ ಸಾಧಕರ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ, ತೆಲಂಗಾಣದ ಹೈದರಾಬಾದ್‌ನ ಶಾ ಆಲಂ ಖಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಅಂತಿಮ ವರ್ಷದ ಮೆಕಾನಿಕಲ್ ಪದವಿ ವ್ಯಾಸಂಗ ಮಾಡುತ್ತಿರುವ ಐವರು ವಿದ್ಯಾರ್ಥಿಗಳು, ರಸ್ತೆಬದಿಯಲ್ಲಿ ಕೆಟ್ಟು ನಿಂತಿದ್ದ ಹತ್ತು ವರ್ಷಗಳ ಹಳೆಯ ಮಾರುತಿ 800 ಅನ್ನು ಸೋಲಾರ್ ಪವರ್ ಚಾಲಿತ ಕಾರಾಗಿ ಮಾಡಿಫೈ ಮಾಡಿದ್ದಾರೆ.

ಕೆಟ್ಟು ಮೂಲೆ ಸೇರಿದ್ದ ಈ ಮಾರುತಿ 800ನ್ನು ಸೋಲಾರ್ ಕಾರಾಗಿ ಪರಿವರ್ತಿಸಲು ವಿದ್ಯಾರ್ಥಿಗಳು ತುಂಬಾ ಕಷ್ಟಪಟ್ಟಿದ್ದಾರೆ. ಅಂತಿಮವಾಗಿ ತಮ್ಮ ಪ್ರಯತ್ನದಲ್ಲಿ ಸಫಲತೆಯನ್ನು ಕಂಡಿದ್ದಾರೆ. ಈ ಕಾರಿನಲ್ಲಿ ಬಳಕೆ ಮಾಡಿರುವ ಬ್ಯಾಟರಿಗೆ ಸಾಮಾನ್ಯವಾಗಿ ರೂ.1.5 ಲಕ್ಷ ವೆಚ್ಚವಾಗುತ್ತದೆ. ಆದರೆ, ವಿದ್ಯಾರ್ಥಿಗಳು ತಾವೇ ಅಸ್ಸೆಂಬಲ್ ಮಾಡಿದ್ದರಿಂದ ಸರಿ ಸುಮಾರು ರೂ.80,000 ಉಳಿತಾಯವಾಗಿದೆ. ಅಲ್ಲದೆ, ಮಾರುತಿ 800ನ್ನು ಸಂಪೂರ್ಣ ಸೋಲಾರ್ ಕಾರಾಗಿ ಪರಿವರ್ತಿಸಲು ಕೇವಲ ರೂ.2 ಲಕ್ಷ ವ್ಯಯಿಸಿದ್ದಾರೆ.
ವಿದ್ಯಾರ್ಥಿಗಳು ಮಾಡಿಫೈ ಮಾಡಿರುವ ಮಾರುತಿ 800 ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಕಾರಿನ ರೂಫ್ ಮೇಲೆ ಅಳವಡಿಸಿರುವ ಸೋಲಾರ್ ಪ್ಯಾನ್ ಬ್ಯಾಟರಿಗೆ ಪವರ್ ವರ್ಗಾಯಿಸುತ್ತದೆ. 60 ರಿಂದ 70 km ಕಿಲೋಮೀಟರ್ ಕ್ರಮಸಲಿದ್ದು, ಗಂಟೆಗೆ 80 km ವೇಗದಲ್ಲಿ ಚಲಿಸಲಿದೆ. ಈ ಕಾರಿನಲ್ಲಿ ವಿದ್ಯಾರ್ಥಿಗಳು BLDC ಮೋಟಾರ್ ಹಾಗೂ 80 amp 48V ಬ್ಯಾಟರಿಯನ್ನು ಉಪಯೋಗಿಸಿದ್ದಾರೆ.
ಕಾಲೇಜಿನಲ್ಲಿ ಓದಬೇಕಾದರೆಯೇ ವಿದ್ಯಾರ್ಥಿಗಳು ಮಾಡಿರುವ ಈ ಸಾಧನೆಯನ್ನು ಅವರ ಪೋಷಕರು ಹಾಗೂ ಪ್ರಾಧ್ಯಾಪಕರು ಮೆಚ್ಚಿಕೊಂಡಿದ್ದಾರೆ. ಇನ್ನು, ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳು ಗಗನಕ್ಕೇರಿದ್ದು, ವಾಹನಗಳ ನಿರ್ವಹಣಾ ವೆಚ್ಚವು ಅದರ ಬಳಕೆದಾರರ ಜೇಬು ಸುಡುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡಿದ್ದು, ಸರ್ಕಾರವು ಇವುಗಳನ್ನು ಕೊಂಡುಕೊಳ್ಳುವಂತೆ ಜನರನ್ನು ಪ್ರೇರಿಪಿಸುತ್ತಿದೆ.
ಆದರೆ, ಏನೇ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದರೂ, ಚಾರ್ಜಿಂಗ್ ಎನ್ನುವುದು ದೊಡ್ಡ ಸಮಸ್ಯೆಯಾಗಿದೆ. ಈಗಾಗಲೂ ಪ್ರಮುಖ ನಗರಗಳಲ್ಲಿ ಅಗತ್ಯಕ್ಕೆ ತಕಷ್ಟು ಚಾರ್ಜಿಂಗ್ ಕೇಂದ್ರಗಳೇ ಇಲ್ಲ. ಒಂದೊಮ್ಮೆ ನಿಮ್ಮ ಎಲೆಕ್ಟ್ರಿಕ್ ವಾಹನದಲ್ಲಿ ಲಾಂಗ್ ಡ್ರೈವ್ ಗೆ ಹೋದರೆ ದೇವರೇ ಗತಿ.. ಈ ನಿಟ್ಟಿನಲ್ಲಿ ನೂತನ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯತ್ತ ಹಲವು ಕಂಪನಿಗಳು ಮಹತ್ವದ ಹೆಜ್ಜೆ ಇಟ್ಟಿವೆ. ಇದು ಸಹಕಾರವಾಗಲು ವರ್ಷಗಳೇ ಬೇಕು.
ಚಾರ್ಜಿಂಗ್ ಸಮಸ್ಯೆ ಒಂದು ಕಡೆ ಆದ್ರೆ, ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆಗೆ ಕೊಂಚವಾದರೂ ವೆಚ್ಚ ಮಾಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ವಿವಿಧ ಕಂಪನಿಗಳು ಸೋಲಾರ್ ಚಾಲಿತ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದೀಗ, ಹೈದರಾಬಾದ್‌ನ ಐವರು ವಿದ್ಯಾರ್ಥಿಗಳು ಕೆಟ್ಟು ನಿಂತಿದ್ದ ಹಳೆಯ ಮಾರುತಿ 800ನ್ನು ಸೋಲಾರ್ ಕಾರಾಗಿ ಮಾಡುವ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಮುಂದೊಂದು ದಿನ ಸೋಲಾರ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆ ಬಿಡುಗಡೆಯಾದರೇ ಗ್ರಾಹಕರು ಇದನ್ನೇ ತಮ್ಮ ಆಯ್ಕೆಯಾಗಿ ಆರಿಸಿಕೊಳ್ಳಬಹುದು. ಏಕೆಂದರೆ, ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ನಿರ್ವಹಣಾ ವೆಚ್ಚವಾಗಿ ಹಣ ವ್ಯಯಿಸಬೇಕು. ಆದರೆ, ಸೋಲಾರ್ ಕಾರುಗಳನ್ನು ಒಮ್ಮೆ ದುಡ್ಡು ಕೊಟ್ಟು ಖರೀದಿಸಿದರೆ, ಯಾವುದೇ ಖರ್ಚಿಲ್ಲದೇ ಜೀವನ ಪೂರ್ತಿ ಉಚಿತವಾಗಿ ಓಡಾಡಬಹುದು.


Click it and Unblock the Notifications