2014ರಲ್ಲಿ ಲೈಸೆನ್ಸ್ ಪಡೆದಿದ್ದರು!, ಗೇರ್ ಬದಲಾಯಿಸುವುದು ಗೊತ್ತಿಲ್ಲ, ಅಪಘಾತ ಮಾಡಿದರು: ಪೊಲೀಸ್ ಬೇರೆ?
ದೇಶದಲ್ಲಿ ಚಾಲನಾ ಪರವಾನಿಗೆ (driving license) ಪಡೆಯುವುದು ಸವಾಲಿನ ಕೆಲಸವಾಗಿದೆ. ಇದಕ್ಕಾಗಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿ (RTO) ನಡೆಸುವ ನಿರ್ದಿಷ್ಟ ಪರೀಕ್ಷೆಯನ್ನು ಉತ್ತಿರ್ಣರಾಗಬೇಕು. ಆದರೆ, ಹಲವರಿಗೆ ವಾಹನಗಳನ್ನು ಸರಿಯಾಗಿ ಓಡಿಸಲು ಬರದಿದ್ದರೂ ಮಧ್ಯವರ್ತಿಗಳ ನೆರವಿನಿಂದ ಹಣ ನೀಡಿ, ಡ್ರೈವಿಂಗ್ ಲೈಸೆನ್ಸ್ ಪಡೆಯುತ್ತಾರೆ.
ಅಂತಹವರೂ ಕಾರು/ ಬೈಕ್ ಓಡಿಸಿಕೊಂಡು ರಸ್ತೆಗೆ ಬಂದಾಗ ಕೆಲವೊಮ್ಮೆ ಅಪಘಾತಕ್ಕೂ ಕಾರಣರಾಗಿ, ಬೇರೆಯವರು ಅಥವಾ ತಮಗೆ ಹಾನಿ ಮಾಡಿಕೊಳ್ಳಬಹುದು. ಉತ್ತರ ಪ್ರದೇಶದಲ್ಲಿಯೂ ಆ ರೀತಿಯ ಘಟನೆ ನಡೆದಿದ್ದು, ನಿಖಿಲ್ ರಾಣಾ ಎಂಬುವವರೂ ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹ್ಯುಂಡೈ ಕ್ರೆಟಾ (Hyundai Creta) ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು, ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ (Volkswagen Virtus) ಸೆಡಾನ್‌ಗೆ ಡಿಕ್ಕಿಯೊಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬ್ಲಾಗರ್ ನಿಖಿಲ್ ರಾಣಾ ಅವರನ್ನು ಫಾಲೋ ಮಾಡುವ ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಮಾಲೀಕರೊಬ್ಬರು ಇಮೇಲ್ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾರೆ. ಆದರೆ, ಅಪಘಾತ ನಡೆದ ನಿಖರವಾದ ಸ್ಥಳದ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ. ವರ್ಟಸ್ ಸೆಡಾನ್‌ನನ್ನು ಯು-ಟರ್ನ್ ತೆಗೆದುಕೊಳ್ಳುತ್ತಿರುವಾಗ ಮಹಿಳೆಯೊಬ್ಬರು, ಹ್ಯುಂಡೈ ಕ್ರೆಟಾ ಚಲಾಯಿಸಿಕೊಂಡು ಬಂದು ಗುದ್ದಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಖರೀದಿಸಿದ್ದ ವರ್ಟಸ್ ಕಾರಿಗೆ ಡ್ಯಾಮೇಜ್ ಆಗಿದೆ.
ಫೋಕ್ಸ್‌ವ್ಯಾಗನ್ ವರ್ಟಸ್ ಮಾಲೀಕ ಕಾರಿನಿಂದ ಇಳಿದು ನೋಡಿದಾಗ ಕ್ಷಣಕಾಲ ಆಶ್ಚರ್ಯಚಕಿತರಾಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಮಹಿಳೆ, ರಿವರ್ಸ್ ತೆಗೆದುಕೊಳ್ಳಲು ಗೇರ್ ಬದಲಾಯಿಸಲೂ ತಿಳಿಯದೇ ತಿಣುಕಾಡುತ್ತಿದ್ದರು. ವಿಡಿಯೋದಲ್ಲಿ ಆ ಮಹಿಳೆಯ ಪಕ್ಕದಲ್ಲಿ ಮತ್ತೊಬ್ಬ ವ್ಯಕ್ತಿ ಕುಳಿತುಕೊಂಡಿರುವುದನ್ನು ನೋಡಬಹುದು. ಆತ ಗೇರ್ ಚೇಂಜ್ ಮಾಡಲು ಸಹಾಯ ಮಾಡಿದ್ದಾರೆ. ಆದರೂ ಮಹಿಳೆಗೆ ರಿವರ್ಸ್ ತೆಗೆಯಲು ಸಾಧ್ಯವಾಗಿಲ್ಲ.

ಕಡೆಯದಾಗಿ, ಡ್ರೈವರ್ ಸೀಟಿನಲ್ಲಿ ಕುಳಿತ ಆ ವ್ಯಕ್ತಿ ಕಾರನ್ನು ರಿವರ್ಸ್ ತೆಗೆದುಕೊಂಡಿದ್ದಾರೆ. ಕ್ರೆಟಾದ ಹಿಂದಿನ ವಿಂಡ್‌ಸ್ಕ್ರೀನ್‌ನಲ್ಲಿ 'ಎಲ್' ಬ್ಯಾಡ್ಜ್ ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ, ಆ ಮಹಿಳೆಯೂ 2014ರಲ್ಲಿಯೇ ಚಾಲನಾ ಪರವಾನಗಿಯನ್ನು ಪಡೆದಿದ್ದಾರೆ ಎಂಬುದು ತಿಳಿದುಬಂದಿದೆ. ಗೇರ್ ಬದಲಾಯಿಸುವುದು ಕೂಡ ತಿಳಿಯದವರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಚಾಲನಾ ಪರವಾನಗಿಯನ್ನು ಹೇಗೆ ಕೊಟ್ಟಿದ್ದಾರೆ? ಎಂಬ ಪ್ರಶ್ನೆಗಳು ಏಳುತ್ತವೆ.
'ಕಾರನ್ನು ಚಾಲನೆ ಮಾಡುತ್ತಿದ್ದ ಮಹಿಳೆ, ತಾನು ಪೋಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ' ಎಂದು ಫೋಕ್ಸ್‌ವ್ಯಾಗನ್ ವರ್ಟಸ್ ಮಾಲೀಕರು ತಮ್ಮ ಇ-ಮೇಲ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನು, ಯಾರೇ ಆಗಲಿ ಡ್ರೈವಿಂಗ್ ಅನ್ನು ಸಂಪೂರ್ಣಕಾಗಿ ಕಲಿಯುವ ಮುನ್ನ ರಸ್ತೆಗೆ ಬರುವ ಪ್ರಯತ್ನ ಮಾಡಬಾರದು. ಆಗೊಮ್ಮೆ ಮಾಡಿದರೆ ಬೇರೆಯವರೂ ಅಥವಾ ತಮಗೆ ಅಪಾಯವಾಗಬಹುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಸಾಮಾನ್ಯ ಜನರಿಂದ ಹಿಡಿದು ಸಮಾಜದ ಉನ್ನತ ಸ್ಥಾನದಲ್ಲಿರುವವರೂ ವಾಹನ ಓಡಿಸುವುದನ್ನು ಕಲಿಯುವಾಗ ಡ್ರೈವಿಂಗ್ ಸ್ಕೂಲ್ ಮೈದಾನ ಅಥವಾ ಇನ್ನಿತರೇ ಖಾಸಗಿ ಮೈದಾನವನ್ನು ಬಳಕೆ ಮಾಡಬೇಕು. ಅದು ಬಿಟ್ಟು ಏಕಾಏಕಿ ರಸ್ತೆಗೆ ಬರಬಾರದು. ಜೊತೆಗೆ ಸಂಬಂಧಪಟ್ಟ ಸರ್ಕಾರಗಳು, ಕೂಡಲೇ ಎಚ್ಚೆತ್ತುಕೊಂಡು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications