ಹ್ಯುಂಡೈ i10 ಚಾಲಕನಿಗೆ ಗ್ರಹಚಾರ ಬಿಡಿಸಿದ ಅಂಕಲ್: ನಡು ರಸ್ತೆಯಲ್ಲಿ ಬಸ್ಕಿ, ಆಗಿದ್ದೇನು?
ವಿಶ್ವದಲ್ಲಿ ಅತಿಹೆಚ್ಚು ಅಪಘಾತಗಳು ನಡೆಯುವ ದೇಶಗಳಲ್ಲಿ ಭಾರತವು ಒಂದು. ದುಡುಕಿನ ಚಾಲನೆ, ನಿಯಮಗಳ ಉಲ್ಲಂಘನೆ, ರಸ್ತೆಗಳಲ್ಲಿ ಸ್ಟಂಟ್ ಮಾಡುವುದರಿಂದಲೇ ಹೆಚ್ಚು ಅಪಘಾತಗಳು ವರದಿಯಾಗುತ್ತವೆ. ಕೆಲವೊಮ್ಮೆ ಬೇರೊಬ್ಬರ ತಪ್ಪಿನಿಂದಾಗಿ ನಾವು ಕೂಡ ದಂಡ ಕಟ್ಟುವಂತಾಗುತ್ತದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಹಲವರು ಡ್ಯಾಷ್ ಕ್ಯಾಮ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಈಗ ನಾವು ಹೇಳುತ್ತಿರುವ ಘಟನೆಯಲ್ಲೂ ಕಾರೊಂದರ ಡ್ಯಾಷ್ ಕ್ಯಾಮ್, ಎದುರುಗಡೆ ಬರುತ್ತಿದ್ದ ಹ್ಯುಂಡೈ ಗ್ರಾಂಡ್ i10 ಚಾಲಕನ ತಪ್ಪನ್ನು ಸೆರೆಹಿಡಿದೆ. ಇದಕ್ಕೆ ಪ್ರತಿಯಾಗಿ ಹ್ಯುಂಡೈ i10 ಚಾಲಕನನ್ನು ಬೆನ್ನಟ್ಟಿ ವಿಭಿನ್ನ ರೀತಿಯಲ್ಲಿ ಬುದ್ದಿ ಹೇಳಲಾಗಿದೆ. ಹೌದು.. ತಿರುವಿನಲ್ಲಿ ಎದುರು ಬರುತ್ತಿದ್ದ ಕಾರು ಹಾರ್ನ್ ಮಾಡಿದರೂ ನಿಧಾನಗೊಳ್ಳದೇ ಮುನ್ನುಗ್ಗಿ ಟ್ರಕ್ ಅನ್ನು ಓವರ್‌ಟೇಕ್ ಮಾಡಲಾಗಿದೆ. ಇದಕ್ಕೆ ಸಂಬಂದಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ ನಡೆದಿದ್ದು, ಇದೇ ರಸ್ತೆ ಮೂಲಕ ಪ್ರಯಾಣಿಸುತ್ತಿದ್ದ ಪ್ರಸೇನ್ಜಿತ್ ಎಂಬುವರ ಕಾರಿನ ಡ್ಯಾಷ್ ಕ್ಯಾಮ್‌ನಲ್ಲಿ ದೃಶ್ಯಗಳು ಸೆರೆಯಾಗಿವೆ.

ಪ್ರಸೇನ್ಜಿತ್ ಅವರ ಕಾರು ಏಕಪಥದ ಕಿರಿದಾದ ರಸ್ತೆಯ ಮೂಲಕ (ಬಹುಶಃ ಹಳ್ಳಿಯಾಗಿರಬಹುದು) ಹಾದುಹೋಗುವುದನ್ನು ವೀಡಿಯೊದಲ್ಲಿ ನೋಡಬಹುದು. ಅವರ ಪ್ರಕಾರ ಗಂಟೆಗೆ 60 ಕಿ.ಮೀ ವೇಗದಲ್ಲಿ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ ಮುಂದಿನ ದಾರಿ ಕಾಣದಂತಹ ತಿರುವು ಸಮೀಪಿಸುತ್ತಿದ್ದಂತೆ, ಪ್ರಸೇನ್ಜಿತ್ ಮುಂದೆ ಬರುವ ವಾಹನವನ್ನು ಎಚ್ಚರಿಸಲು ಹಾರ್ನ್ ಮಾಡಿದ್ದಾರೆ. ಕಾರು ತಿರುವಿಗೆ ಹತ್ತಿರವಾಗುತ್ತಿದ್ದಂತೆ ನಿಧಾನವಾಗಿ ಲಾರಿ ಬಂದಿದೆ.
ಇದೇ ವೇಳೆ ತಿರುವಿನಲ್ಲಿ ಇದ್ದಕ್ಕಿದ್ದಂತೆ ಹ್ಯುಂಡೈ i10 ಕಾರು ಲಾರಿಯನ್ನು ಓವರ್ ಟೇಕ್ ಮಾಡಲು ಮುಂದಾಗಿದೆ. ಕೂಡಲೇ ಎಚ್ಚೆತ್ತು ಪ್ರಸೇನ್ಜಿತ್ ತಮ್ಮ ಕಾರನ್ನು ನಿಧಾನಗೊಳಿಸಿ ಅಪಘಾತವನ್ನು ತಪ್ಪಿಸಿದ್ದಾರೆ. ಹ್ಯುಂಡೈ i10 ಡ್ರೈವರ್ ನಿಧಾನಗೊಳಿಸದೇ ಹೊರಟುಬಿಟ್ಟಿದ್ದಾನೆ. ಬಳಿಕ ಎರಡೂ ಕಾರುಗಳು ತಮ್ಮ ದಾರಿಯಲ್ಲಿ ಮುಂದುವರಿಯುತ್ತವೆ. ಘಟನೆ ಇಲ್ಲಿಗೆ ಕೊನೆಗೊಳ್ಳುತ್ತದೆ ಎಂದುಕೊಂಡರೆ ತಪ್ಪು.

ಘಟನೆಯ ಬಳಿಕ ಪ್ರಸೇನ್ಜಿತ್ ಎಷ್ಟು ಕೋಪಗೊಂಡರೆಂದರೆ, ತಮ್ಮ ಕಾರನ್ನು ಹಿಂದಿರುಗಿಸಿ ಅವನಿಗೆ ಪಾಠ ಕಲಿಸಲು ಹ್ಯುಂಡೈ ಗ್ರ್ಯಾಂಡ್ i10 ಅನ್ನು ಬೆನ್ನಟ್ಟಿದ್ದಾರೆ. ಕೊನೆಗೂ ಅವನನ್ನು ಜಂಕ್ಷನ್‌ವೊಂದರಲ್ಲಿ ನಿರ್ಬಂಧಿಸಿ ವಾಹನದಿಂದ ಕೆಳಗಿಳಿಸಿ ಚಾಲಕನಿಗೆ ಬುದ್ಧಿ ಕಲಿಸಿದ್ದಾರೆ. ಈ ವೇಳೆ ಗ್ರ್ಯಾಂಡ್ ಐ 10 ಚಾಲಕನಿಗೆ ಅವನ ತಪ್ಪಿನ ಅರಿವಾದಂತಿದೆ. ತಾನು ತೊಂದರೆಯಲ್ಲಿರುವುದು ತಿಳಿದು ಪ್ರಸೇನ್ಜಿತ್ ಜೊತೆಗೆ ವಾಗ್ವಾದಕ್ಕೆ ಇಳಿಯದೇ ಆತ ಹೇಳಿದಂತೆ ಕೇಳಿದ್ದಾನೆ. ಅವನ ನಡವಳಿಕೆಗೆ ಶಿಕ್ಷೆಯಾಗಿ ಕೆಳಗೆ ಕುಳಿತುಕೊಳ್ಳಲು ಹೇಳಿ ಬಸ್ಕಿ ಹೊಡೆಸಿದ್ದಾರೆ. ಈ ವೇಳೆ ಗ್ರ್ಯಾಂಡ್ ಐ 10 ಚಾಲಕ ಪ್ರಸೇನ್ಜಿತ್ ಅವರ ಬಳಿ ಕ್ಷಮೆಯಾಚಿಸಿದ್ದಾನೆ.
ಇದೇ ವೇಳೆ ಸ್ಥಳೀಯರು ಜಮಾಯಿಸಿದ್ದರಾದರೂ, ಅವರಿಗೆ ಘಟನೆಯ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಗ್ರ್ಯಾಂಡ್ ಐ 10 ಚಾಲಕ ತಿರುವಿನಲ್ಲಿ ಓವರ್ ಟೇಕ್ ಮಾಡಿ ತಪ್ಪು ಮಾಡಿದ್ದಾನಾದರೂ, ಪ್ರಸೇನ್ಜಿತ್ ಹೀಗೆ ರಸ್ತೆಯಲ್ಲಿ ಬಸ್ಕಿ ಹೊಡೆಸುವುದು ಅಥವಾ ಜಗಳಕ್ಕಿಳಿಯುವುದು ತಪ್ಪು. ಇದು ಕೆಲವೊಮ್ಮೆ ದೊಡ್ಡ ಅನಾಹುತಗಳಿಗೆ ಕಾರಣವಾಗಬಹುದು. ಚಾಲಕ ಪ್ರಸೇನ್ಜಿತ್ ಹೇಳಿದ ಹಾಗೆ ಕೇಳಿದ್ದಕ್ಕೆ ಯಾವುದೇ ಜಗಳವಾಗಿಲ್ಲ. ಆದರೆ ಚಾಲಕ ಪಾಲಿಸದಿದ್ದರೆ, ಸಮಸ್ಯೆ ಉಲ್ಬಣಗೊಳ್ಳುತ್ತಿತ್ತು.
ಇಂತಹ ಸಂದರ್ಭದಲ್ಲಿ ಮಾಡಬೇಕಾದ ಸರಿಯಾದ ಕೆಲಸವೆಂದರೆ ಚಾಲಕನ ವಿರುದ್ಧ ಪೊಲೀಸರಿಗೆ ದೂರು ನೀಡುವುದು. ಇದರಿಂದ ಅವರು ಅಗತ್ಯ ಕ್ರಮ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಇತರರನ್ನು ಶಿಕ್ಷಿಸುವ ಅಥವಾ ದೈಹಿಕವಾಗಿ ಹಲ್ಲೆ ಮಾಡುವ ಹಕ್ಕು ನಮಗಿರುವುದಿಲ್ಲ. ಒಂದು ವೇಳೆ ತಪ್ಪು ಅವರದಿದ್ದು, ನಾವು ಹಲ್ಲೆ ಮಾಡಿದ್ರೆ ನಮ್ಮ ಮೇಲೂ ಕೇಸ್ ದಾಖಲಾಗುತ್ತದೆ ಎಂಬುದನ್ನು ಮರೆಯಬಾರದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








