ದೇಶವನ್ನು ಮಾಲಿನ್ಯ ಮುಕ್ತಗೊಳಿಸುವ ಕೇಂದ್ರದ ಸ್ಕ್ರಾಪಿಂಗ್ ನೀತಿಗೆ ಸಹಕರಿಸಿದ ಜನ: ಸರ್ವೇಯಲ್ಲಿ ಬಹಿರಂಗ
ಭಾರತದಲ್ಲಿ ಹಳೆಯ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 10-15 ವರ್ಷ ಮೇಲ್ಪಟ್ಟ ವಾಹನಗಳು ಫಿಟ್ ಆಗಿರುವುದಿಲ್ಲ, ಬದಲಾಗಿ ಇವುಗಳು ಅಧಿಕ ಕಾರ್ಬನ್ ಹೊರಸೂಸುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಳೆಯ ವಾಹನಗಳ ಸ್ಕ್ರಾಪಿಂಗ್ ನೀತಿಯನ್ನು ತಂದಿದೆ.

ಆದರೆ ಭಾರತದಲ್ಲಿ ಹಳೆಯ ವಾಹನಗಳನ್ನು ರಸ್ತೆಗಳಿಂದ ನಿರ್ಮೂಲಿಸಲು ಜಾರಿಗೆ ತಂದಿರುವ ಈ ವೆಹಿಕಲ್ ಸ್ಕ್ರಾಪಿಂಗ್ ನೀತಿಯನ್ನು ಜಾರಿಗೊಳಿಸುವಲ್ಲಿ ಅನೇಕ ಸವಾಲುಗಳನ್ನು ಕೇಂದ್ರ ಸರ್ಕಾರ ಎದುರಿಸುತ್ತಿದೆ. ವಾಹನ ಗ್ರಾಹಕರ ಮೇಲಿನ ಹೊಸ ಸಮೀಕ್ಷೆಯಿಂದ ತಿಳಿದುಬಂದಿರುವುದೇನಂದರೆ, ಗ್ರಾಹಕರು ಹಳೆಯ ವಾಹನಗಳನ್ನು ವಯಸ್ಸಿನ ಆಧಾರದ ಮೇಲೆ ಸ್ಕ್ರಾಪ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ವರದಿಯ ಪ್ರಕಾರ 10,543 ಚಾಲಕರ ಈ ಸಮೀಕ್ಷೆಯಲ್ಲಿ, ಶೇ 57 ರಷ್ಟು ಜನರು ಕೇಂದ್ರ ಸರ್ಕಾರದ ವಾಹನ ಜಂಕ್ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ವಾಹನವನ್ನು ಅದರ ವಯಸ್ಸಿನ ಆಧಾರದ ಮೇಲೆ ಸ್ಕ್ರಾಪ್ ಮಾಡಲು ಘೋಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ವಾಹನ ಹಳೆಯದಾಗಿದ್ದು, ಫಿನ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣವಾದರೆ, ಅದನ್ನು ಸ್ಕ್ರಾಪ್ ಎಂದು ಘೋಷಿಸಬಾರದೆಂಬುದು ಜನರ ನಿಲುವು.

ಉಳಿದಂತೆ ಶೇ 43 ರಷ್ಟು ಜನರು ಹಳೆಯ ವಾಹನಗಳನ್ನು ಓಡಿಸಲು ದುಬಾರಿಯಾಗಿರುವುದರಿಂದ ಅವುಗಳನ್ನು ಸ್ಕ್ರಾಪ್ ಮಾಡಲು ಮುಂದಾಗಿರುವುದಾಗಿ ತಿಳಿದುಬಂದಿದೆ. ಸರ್ಕಾರವು ಹಳೆಯ ವಾಹನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದು, ಏಪ್ರಿಲ್ 1, 2022 ರಿಂದ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ಮರು-ನೋಂದಣಿ ಶುಲ್ಕವೂ ಎಂಟು ಪಟ್ಟು ದುಬಾರಿಯಾಗಿದೆ. ಅಲ್ಲದೇ ಆಟೋ ಫಿಟ್‌ನೆಸ್ ಪರೀಕ್ಷೆ (ಪಿಯುಸಿ) ಶುಲ್ಕವನ್ನೂ ಹೆಚ್ಚಿಸಲಾಗಿದೆ.

2070 ರ ವೇಳೆಗೆ ಭಾರತವನ್ನು ಇಂಗಾಲ ಮುಕ್ತವನ್ನಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅದೇ ಸಮಯದಲ್ಲಿ, ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವಲ್ಲಿ ಜನರಲ್ಲಿ ಉತ್ಸಾಹದ ಕೊರತೆಯು ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಅಡಚಣೆಯಾಗಿ ಪರಿಣಮಿಸಿದೆ. ಭಾರತದಲ್ಲಿ ವಾಹನಗಳಿಂದ ಹೊರಸೂಸುವ ಇಂಗಾಲವನ್ನು ಕಡಿಮೆ ಮಾಡಲು, ಹಳೆಯ ವಾಹನಗಳನ್ನು ಹಂತಹಂತವಾಗಿ ಸ್ಕ್ರಾಪ್ ಮಾಡುವುದು ಬಹಳ ಮುಖ್ಯ.

ಪ್ರಸ್ತುತ, ಇಂಗಾಲದ ಹೊರಸೂಸುವಿಕೆ ಮುಕ್ತ ಸಾರಿಗೆ ಮಾಡಲು ಎರಡು ರೀತಿಯ ಅಡೆತಡೆಗಳನ್ನು ಎದುರಿಸುತ್ತಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಜನರನ್ನು ಪ್ರೇರೇಪಿಸುವುದು ಮೊದಲ ಸವಾಲಾಗಿದ್ದರೆ, ಎರಡನೆಯದು ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ದೇಶಾದ್ಯಂತ ವ್ಯವಸ್ಥಿತ ರೀತಿಯಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಮೂಲಸೌಕರ್ಯವನ್ನು ಸಿದ್ಧಪಡಿಸುವುದು.

ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ದುಬಾರಿ ಬೆಲೆಯಿಂದಾಗಿ ಜನರೂ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಕಾರುಗಳ ಬೆಲೆ ಇಳಿಕೆಗೆ ಚರ್ಚೆ ನಡೆಸುತ್ತಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರಿನಲ್ಲಿ ಅತಿ ದುಬಾರಿ ವಸ್ತುವಾದ ಬ್ಯಾರಿ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ. ಒಂದು ವೇಳೆ ಬೆಲೆ ಇಳಿಕೆಯಾದಲ್ಲಿ ಯಾವೆಲ್ಲ ಬದಲಾವಣೆಗಳಾಗಲಿವೆ ಕಾದು ನೋಡಬೇಕು.

ಮಾರುತಿ ಕೂಡ ಆಕ್ಷೇಪ
ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವ ನಿರ್ಧಾರದ ಬಗ್ಗೆ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸಹ ಸರ್ಕಾರದೊಂದಿಗೆ ಸರ್ವಾನುಮತವನ್ನು ಹೊಂದಿಲ್ಲ. ಈ ಕುರಿತು ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ (MSIL) ಅಧ್ಯಕ್ಷ ಆರ್‌ಸಿ ಭಾರ್ಗವ, ವಾಹನವು ಕಾರ್ಬನ್ ಹೊರಸೂಸುವಿಕೆಯ ಮಾನದಂಡಗಳನ್ನು ಉಲ್ಲಂಘಿಸದಿದ್ದರೆ ಅದನ್ನು ಸ್ಕ್ರಾಪ್ ಮಾಡುವ ನಿರ್ಧಾರ ತರ್ಕಬದ್ಧವಲ್ಲ ಎಂದಿದ್ದಾರೆ.

ಒಂದು ವೇಳೆ ವಾಹನ ಮಾಲೀಕರು ಹಳೆಯ ವಾಹನದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯದಿದ್ದರೆ, ಅದನ್ನು ಸ್ಕ್ರಾಪ್ ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ವಾಹನಗಳನ್ನು ನಿರ್ಮೂಲಿಸುವ ನಿರ್ಧಾರ ಜನರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಬಹುದು. ಅಲ್ಲದೇ ಸ್ಕ್ರಾಪಿಂಗ್ ಮಾಡಿದರು ಹೊಸ ವಾಹನಗಳನ್ನು ಕೊಳ್ಳಲು ಮಧ್ಯಮ ವರ್ಗ ಹಾಗೂ ಬಡವರಿಗೆ ಹಣದ ಕೊರತೆ ಎದುರಾಗಲಿದೆ.

ಕೇಂದ್ರ ಸಾರಿಗೆ ಇಲಾಖೆಯ ವರದಿಯ ಪ್ರಕಾರ, ದೇಶಾದ್ಯಂತ 20 ವರ್ಷಕ್ಕಿಂತ ಹಳೆಯದಾದ 51 ಲಕ್ಷ ಲಘು ಮೋಟಾರು ವಾಹನಗಳು, 15 ವರ್ಷಕ್ಕಿಂತ ಹಳೆಯದಾದ 34 ಲಕ್ಷ ವಾಹನಗಳು, 15 ವರ್ಷಕ್ಕಿಂತ ಹಳೆಯದಾದ ಸುಮಾರು 17 ಲಕ್ಷ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು ಫಿಟ್‌ನೆಸ್ ಪ್ರಮಾಣಪತ್ರಗಳಿಲ್ಲದೆ ಸಂಚರಿಸುತ್ತಿವೆ.

ಅದೇ ಸಮಯದಲ್ಲಿ, 2025 ರ ವೇಳೆಗೆ ಹಳೆಯ ವಾಹನಗಳ ಸಂಖ್ಯೆ 2 ಕೋಟಿಗೆ ಏರುತ್ತದೆ. ಅಂತಹ ವಾಹನಗಳು ಪರಿಸರಕ್ಕೆ ಭಾರಿ ಹಾನಿಯನ್ನುಂಟುಮಾಡುತ್ತವೆ. ಹಳೆಯ ವಾಹನಗಳನ್ನು ನಿಭಾಯಿಸಲು, ದೇಶಾದ್ಯಂತ ಕಂಪನಿಗಳು ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಸ್ಥಾಪಿಸಲು ಸರ್ಕಾರದಿಂದ ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದ ದೇಶಕ್ಕೆ 10,000 ಕೋಟಿ ರೂಪಾಯಿ ಹೂಡಿಕೆಯಾಗಲಿದೆ.

ಇತ್ತೀಚೆಗೆ, ಮಾರುತಿ ಸುಜುಕಿ ಟೊಯೊಟಾ ಸುಶೋ ಕಾರ್ಪ್‌ನ ಸಹಭಾಗಿತ್ವದಲ್ಲಿ $ 440 ಮಿಲಿಯನ್ ಹೂಡಿಕೆಯೊಂದಿಗೆ ಸ್ಕ್ರ್ಯಾಪಿಂಗ್ ಘಟಕವನ್ನು ಸ್ಥಾಪಿಸಿದೆ, ಅಲ್ಲಿ ಪ್ರತಿ ವರ್ಷ 24,000 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ. ಇದಲ್ಲದೆ, ಮಹಾರಾಷ್ಟ್ರದ ಪುಣೆಯಲ್ಲಿ ಪ್ರತಿ ವರ್ಷ 40,000 ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯವಿರುವ ನಾಲ್ಕು ಸ್ಕ್ರ್ಯಾಪಿಂಗ್ ಘಟಕಗಳನ್ನು ಮಹೀಂದ್ರಾ ಸ್ಥಾಪಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ದೇಶದಲ್ಲಿ 20 ವರ್ಷಕ್ಕೂ ಹಳೆಯ ವಾಹನಗಳು ಇನ್ನೂ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಇವು ಕೆಲವರಿಗೆ ಜೀವನಾಧಾರವಾಗಿರಬಹುದು, ಅವುಗಳಿಂದಲೇ ದಿನ ದೂಡುತ್ತಿರಬಹುದು ಆದರೆ ಇವು ಹೆಚ್ಚು ಕಾರ್ಬನ್ ಹೊರಸೂಸುವುದರಿಂದ ಪರಿಸರಕ್ಕೆ ಹೆಚ್ಚು ಹಾನಿ ಮಾಡುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಹಾಗಾಗಿ ಜನರು ಕೂಡ ಇಂತಹ ವಾಹನಗಳನ್ನು ಸ್ಕ್ರಾಪ್ ಮಾಡುವುದು ಉತ್ತಮ. ತಾವಾಗಿಯೇ ವಾಹನ ಸ್ಕ್ರಾಪ್ ಮಾಡಲು ಮುಂದಾಗುವ ಗ್ರಾಹಕರಿಗೆ ರಿಯಾಯಿತಿ ಬೆಲೆಯಲ್ಲಿ ವಾಹನಗಳನ್ನು ನೀಡಲು ಸರ್ಕಾರ ವಾಹನ ತಯಾರಕರಿಗೆ ಸೂಚಿಸಿದೆ.


Click it and Unblock the Notifications








