ಭಾರತದ ಅತಿ ಉದ್ದದ ಸಮುದ್ರ ಸೇತುವೆ ಉದ್ಘಾಟನೆ: ಪ್ರಯಾಣದ ಅವಧಿ 2 ಗಂಟೆಯಿಂದ 20 ನಿಮಿಷಕ್ಕೆ ಇಳಿಕೆ!
ಭಾರತದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ - Mumbai Trans Harbour Link) ಶುಕ್ರವಾರ (ಜ.12) ಉದ್ಘಾಟನೆಗೊಂಡಿದೆ. ಮುಂಬೈನಲ್ಲಿ ರೂ.17,840 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ.
2016ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದರು. ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನೀಡಿರುವ ಕೊಡುಗೆ ಗೌರವಾರ್ಥ ಈ ಸೇತುವೆಗೆ ಅಟಲ್ ಸೇತು (Atal Setu) ಎಂಬ ಹೆಸರನ್ನು ಇಡಲಾಗಿದೆ. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆ (India Longest Sea Bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಅಟಲ್ ಸೇತು), ಸೆವ್ರಿ ಹಾಗೂ ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಸ್ತುತವಿರುವ ಪ್ರಯಾಣದ ಅವಧಿಯೂ 2 ಗಂಟೆಯಿಂದ 15-20 ನಿಮಿಷಕ್ಕೆ ಇಳಿಕೆಯಾಗಲಿದೆ. ಜೊತೆಗೆ ಮಹಾರಾಷ್ಟ್ರದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇಗೂ (Mumbai - Pune Expressway) ಕೊಂಡಿಯಾಗಿದೆ.
ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Mumbai International Airport) ಹಾಗೂ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವೇಗವಾದ ಸಂಪರ್ಕವನ್ನು ಒದಗಿಸುತ್ತದೆ. ಮುಂಬೈನಿಂದ ಗೋವಾ ಸೇರಿದಂತೆ ಇತರೆಡೆಗೆ ಪ್ರಯಾಣಿಸುವವರಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಸೇತುವೆ 21.8 ಕಿಲೋಮೀಟರ್ ಉದ್ದವಿದ್ದು, 6 ಪಥದ ರಸ್ತೆಯನ್ನು ಹೊಂದಿದೆ. ಸಮುದ್ರದ ಮೇಲೆ 16.50 ಕಿ.ಮೀ ನೆಲದ ಮೇಲೆ 5.50 ಕಿ.ಮೀ ಸೇತುವೆಯನ್ನು ನಿರ್ಮಿಸಲಾಗಿದೆ.

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಅಟಲ್ ಸೇತು) ಮೇಲೆ ಸಂಚರಿಸುವ ವಾಹನಗಳಿಗೆ ವೇಗ ಮಿತಿಯನ್ನು ಕೂಡ ನಿಗದಿಪಡಿಸಲಾಗಿದೆ. ಈ ಸೇತುವೆ ಮೇಲೆ ಕಾರು, ಟ್ಯಾಕ್ಸಿ, ಲೈಟ್ ಮೋಟಾರ್ ವೆಹಿಕಲ್, ಮಿನಿ ಬಸ್, 2 ಆಕ್ಸಲ್ ಬಸ್‌ಗಳು ಗಂಟೆಗೆ ಗರಿಷ್ಠ 100 ಕಿ.ಮೀ ವೇಗದಲ್ಲಿ ಸಂಚಾರಿಸಬಹುದು. ಸೇತುವೆ ಆರಂಭ ಮತ್ತು ಕೊನೆಯಲ್ಲಿ ವಾಹನಗಳ ವೇಗ ಮಿತಿಯನ್ನು ಗಂಟೆಗೆ 40 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ.
ಈ ಸೇತುವೆಯ ಮೇಲೆ ಅಪಘಾತವನ್ನು ತಪ್ಪಿಸಲು ಬೈಕ್, ಸ್ಕೂಟರ್, ಆಟೋ ರಿಕ್ಷಾ, ಟ್ರ್ಯಾಕ್ಟರ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಪ್ರತಿ ದಿನ 70,000ಕ್ಕೂ ಹೆಚ್ಚು ವಾಹನಗಳು ಓಡಾಟ ನಡೆಸುವ ಸಾಧ್ಯತೆಯಿದೆ. ಒಂದೊಮ್ಮೆ ಸೇತುವೆಯಲ್ಲಿ ವಾಹನಗಳು ಕೆಟ್ಟು ನಿಂತಾಗ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾವನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕಾರುಗಳಿಗೆ ರೂ.250, ಮಿನಿ ಬಸ್‌ಗಳಿಗೆ ರೂ.560, ಬಸ್/ 2-ಆಕ್ಸಲ್ ಟ್ರಕ್‌ಗಳಿಗೆ ರೂ.1180, 3-ಆಕ್ಸಲ್ ಟ್ರಕ್‌ಗಳಿಗೆ ರೂ.1290, 4-6 ಆಕ್ಸಲ್ ವೆಹಿಕಲ್ ಗಳಿಗೆ ರೂ.1850 ಟೋಲ್ ಶುಲ್ಕ ವಿಧಿಸಲು ನಿರ್ಧಾರ ಮಾಡಲಾಗಿದೆ. ಮೊದಲಿಗೆ ಮಹಾರಾಷ್ಟ ಮಹಾನಗರ ಪ್ರದೇಶಾಭಿವೃದ್ದಿ ಪ್ರಾಧಿಕಾರ ಕಾರುಗಳಿಗೆ ರೂ.500 ಟೋಲ್ ಸಂಗ್ರಹಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications