ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ?
ದೇಶದಲ್ಲಿ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ. ಇಂಧನ ಹಾಗೂ ಕೆಲವು ಆಹಾರ ಪದಾರ್ಥಗಳ ಮೇಲೆ ತೆರಿಗೆ ಕಡಿತ ಮಾಡಲು ಚಿಂತನೆ ನಡೆಸುತ್ತಿದ್ದು, ಇದರಿಂದ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.
ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಆಧಾರಿತ ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಜನವರಿಯಲ್ಲಿ 3 ತಿಂಗಳ ಗರಿಷ್ಠ ಮಟ್ಟವನ್ನು (6.52%) ತಲುಪಿದ್ದು, ಬೆಲೆ ಏರಿಕೆಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ರಾಯಿಟರ್ಸ್‌ನ ವರದಿಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶಿಫಾರಸ್ಸಿನಂತೆ ಮೆಕ್ಕೆಜೋಳ ಮತ್ತು ಇಂಧನ (ಪೆಟ್ರೋಲ್ ಹಾಗೂ ಡಿಸೇಲ್) ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಆದರೆ, ಫೆಬ್ರವರಿ ತಿಂಗಳ ಸಿಪಿಐ ಅಂಕಿಅಂಶಗಳು ಬಿಡುಗಡೆಯಾದ ನಂತರವಷ್ಟೇ ಈ ಬಗ್ಗೆ ಅಂತಿಮ ತೀರ್ಮಾನಗಳು ಹೊರಬೀಳಲಿವೆ.

ಜನವರಿಯಲ್ಲಿ ಹೆಚ್ಚಳವಾಗಿರುವ ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಅಂಕಿಅಂಶಗಳನ್ನು ಗಮನಿಸಿದಾಗ ಏಪ್ರಿಲ್ ತಿಂಗಳಲ್ಲಿ ಅಗತ್ಯ ವಸ್ತು ದರವು ಮತ್ತಷ್ಟು ಏರಿಕೆಯಾಗಲಿದೆ ಎಂದು ಆತಂಕ ಶುರುವಾಗಿದೆ. ಕಳೆದ ವರ್ಷದ ಅಕ್ಟೋಬರ್ ಬಳಿಕ, ಇದೇ ಮೊದಲ ಬಾರಿಗೆ ಆರ್‌ಬಿಐ, ಅಂದಾಜಿಗಿಂತ (ಶೇಕಡ 6%) ಹೆಚ್ಚಿನ ಪ್ರಮಾಣದಲ್ಲಿ ಚಿಲ್ಲರೆ ಹಣದುಬ್ಬರ ಏರಿದೆ. ಕೇಂದ್ರ ಅಂಕಿಅಂಶ & ಯೋಜನಾ ಅನುಷ್ಠಾನ ಸಚಿವಾಲಯ ಈ ವಾರ, ಹಣದುಬ್ಬರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಬಿಡುಗಡೆ ಮಾಡಿತ್ತು. ಅದರ ಅನ್ವಯ ಹಾಲು, ಧಾನ್ಯಗಳು, ಮೆಕ್ಕೆಜೋಳ, ಸೋಯಾ ಎಣ್ಣೆ ಹಾಗೂ ಇಂಧನ ದರಗಳು ಹೆಚ್ಚಾಗಿಯೇ ಇದೆ.
ಈ ನಿಟ್ಟಿನಲ್ಲಿ ಮಧ್ಯಮ ವರ್ಗದ ಜನರಿಗೆ ಕೊಂಚ ಮಟ್ಟಿಗೆ ನಿರಾಳವಾಗಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ವಿದೇಶದಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳುತ್ತಿದ್ದು, ಅದಕ್ಕೆ ಶೇಕಡ 60% ಸುಂಕ ವಿಧಿಸುತ್ತಿದೆ. ಅದನ್ನು ಇಳಿಸಲು ಯೋಜಿಸಿದೆ. ಜೊತೆಗೆ ವಾಹನ ಸವಾರರ ದಿನನಿತ್ಯದ ಅಗತ್ಯತೆಯಾದ ಪೆಟ್ರೋಲ್, ಡಿಸೇಲ್ ದರವನ್ನು ಇಳಿಸಲು ಇಂಧನ ಆಮದಿನ ಮೇಲೆ ತೆರಿಗೆ ಕಡಿತಗೊಳಿಸಿ, ಅದರ ನೇರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲಿದೆಯಂತೆ. ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕಚ್ಚಾ ತೈಲದ ದರ ಸ್ಥಿರವಾಗಿದೆ. ಆದರೆ, ಇದರ ಲಾಭವನ್ನು ತೈಲ ಮಾರಾಟ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸದೇ ಹಿಂದಿನ ನಷ್ಟವನ್ನು ಸರಿದೂಗಿಸಿಕೊಳ್ಳುತ್ತಿವೆ.
ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಜಾಗತಿಕ ಆರ್ಥಿಕ ಹಿನ್ನಡೆ ಹಾಗೂ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮವಾಗಿ ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳಲ್ಲಿಯೇ ಗರಿಷ್ಠ ಮಟ್ಟವನ್ನು (ಶೇಕಡ 7.8%) ತಲುಪಿತ್ತು. ಅಲ್ಲದೆ, ಸಗಟು ಹಣದುಬ್ಬರ ಪ್ರಮಾಣ ಶೇಕಡ 15% ಹೆಚ್ಚಿತ್ತು. ಇದನ್ನು ಕಡಿಮೆಗೊಳಿಸುವ ಪ್ರಯತ್ನವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಿನಿಂದ ರೆಪೋ ದರವನ್ನು ಹೆಚ್ಚಿಕೊಂಡೇ ಬಂದಿದೆ. ಸಾಲದ ಮೇಲಿನ ಬಡ್ಡಿ ದರವನ್ನು ಏರಿಸುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದೆ.
ಇಷ್ಟೇಅಲ್ಲದೆ, ಕೇಂದ್ರ ಸರ್ಕಾರ ಕೂಡ ಜನಸಾಮಾನ್ಯರ ಭಾರವನ್ನು ಇಳಿಸಲು ಒಂದು ಲೀಟರ್ ಪೆಟ್ರೋಲ್ ಮೇಲೆ ರೂ.8 ಹಾಗೂ ಒಂದು ಲೀಟರ್ ಡೀಸೆಲ್ ಮೇಲೆ ರೂ.6 ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಸದ್ಯ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.101.94 ಇದ್ದು, 1 ಲೀಟರ್ ಡೀಸೆಲ್ ದರ ರೂ.87.89 ದಾಖಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.96.72 ಆಗಿದ್ದು, ಲೀಟರ್ ಡೀಸೆಲ್ ದರ ರೂ.89.62 ಇದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.106.31 ಇದ್ದು, ಒಂದು ಲೀಟರ್ ಡೀಸೆಲ್ ದರ ರೂ.94.27 ದಾಖಲಾಗಿದೆ.
ಚಿಲ್ಲರೆ ಹಣದುಬ್ಬರದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಮತ್ತೊಮ್ಮೆ ರೆಪೋ ದರ ಏರಿಕೆ ಮಾಡಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಕೆಲವರು ಇದನ್ನು ವಿರೋಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಆಫ್ ಬರೋಡಾದ ಆರ್ಥಿಕ ತಜ್ಞ ಮದನ್ ಸಬ್ನವಿಸ್, 'ಮುಂಬರುವ ತಿಂಗಳಲ್ಲೂ ಚಿಲ್ಲರೆ ಹಣದುಬ್ಬರ (ಶೇಕಡ 6%ಕ್ಕಿಂತ ಜಾಸ್ತಿ) ಏರಿಕೆಯಾದರೆ, ಆರ್‌ಬಿಐ ರೆಪೋ ದರ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಬಹುದು. ಆ ಸಾಧ್ಯತೆ ತುಂಬಾ ಕಡಿಮೆ. ಹಣದುಬ್ಬರ ಕಡಿಮೆ ಮಾಡಲು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ತೆರಿಗೆ ಇಳಿಕೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಗಣಿಸಬಹುದು' ಎಂದು ಹೇಳಿದ್ದಾರೆ.
ಈಗಾಗಲೇ ದೇಶದಲ್ಲಿ ಅಗತ್ಯ ವಸ್ತು ಬೆಲೆ ಹಲವು ಪಟ್ಟು ಹೆಚ್ಚಳವಾಗಿದ್ದು, ಹಣದುಬ್ಬರವನ್ನು ನಿಯಂತ್ರಣ ಮಾಡಲು ತೆರಿಗೆ ಕಡಿತಗೊಳಿಸುವ ಮೂಲಕ ಮಧ್ಯಮ ವರ್ಗದ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಪೆಟ್ರೋಲ್, ಡೀಸೆಲ್ ದರಗಳು ಇಳಿಕೆಯಾಗುವ ಮೂಲಕ ಶೀಘ್ರದಲ್ಲೇ ಸಿಹಿಸುದ್ದಿ ಸಿಗಬಹುದು ಎಂದು ವಾಹನ ಸವಾರರು ನೀರಿಕ್ಷೆ ಮಾಡುತ್ತಿದ್ದಾರೆ. ಆ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ.


Click it and Unblock the Notifications