ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ಓಡಿಸಿದ ಧೋನಿ: ಇದರ ವಿಶೇಷತೆಗಳೇನು ಗೊತ್ತಾ?
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರಿಗೆ ಮೋಟಾರ್‌ಸೈಕಲ್ ಮತ್ತು ಕಾರುಗಳೆಂದರೆ ತುಂಬಾ ಇಷ್ಟ. ಅವರ ರಾಂಚಿ ಮನೆಯಲ್ಲಿ ಅವುಗಳ ದೊಡ್ಡ ಸಂಗ್ರಹವಿರುವುದು ಎಲ್ಲರಿಗೂ ತಿಳಿದಿದೆ. ಕೆಲವೊಮ್ಮೆ ಅವರು ರಸ್ತೆಯಲ್ಲಿ ಬೈಕ್ ಓಡಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಎಂ.ಎಸ್ ಧೋನಿ ವಿದಾಯ ಹೇಳಿದರೂ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಅವರು ಎಲೆಕ್ಟ್ರಿಕ್ ಬೈಸಿಕಲ್ ಚಲಾಯಿಸಿರುವ ವಿಡಿಯೋವೊಂದು ಇನ್ಸ್ಟಾಗ್ರಾಮ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಳೆದ 2 ದಿನದಲ್ಲಿ 1.7 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಹಾಗೂ 1.60 ಲಕ್ಷಕ್ಕೂ ಅಧಿಕ ಲೈಕ್ ಪಡೆದುಕೊಂಡಿದೆ.

ಎಂ.ಎಸ್ ಧೋನಿ ಅವರು ಓಡಿಸಿರುವ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಸಿಕಲ್ ಡೂಡಲ್ ವಿ3 (Doodle V3) ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಇದು ಸುಮಾರು ರೂ.53,000 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಸಿಕಲ್ ಅನ್ನು ಮಡಚಬಹುದಾಗಿರಿವುರಿಂದ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಜೊತೆಗೆ ಪೆಡಲ್ ಉಪಯೋಗಿಸುವ ಮೂಲಕವೂ ತುಳಿಯಬಹುದು.
ಈ ಡೂಡಲ್ ವಿ3 ಎಲೆಕ್ಟ್ರಿಕ್ ಬೈಸಿಕಲ್ 12.75 ಎಹೆಚ್ (Ah) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 60 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ. ಜೊತೆಗೆ ಗಂಟೆಗೆ 25 ಕಿ.ಮೀ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಪಡೆಯಲಿದೆ. 7-ಸ್ಪೀಡ್ ಶಿಮಾನೊ ಗೇರ್ ಸಿಸ್ಟಮ್, ಎಲ್‌ಸಿಡಿ ಡಿಸ್ಪ್ಲೇ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೋದ ವರ್ಷ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಗೂ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರು, ಧೋನಿ ಅವರ ರಾಂಚಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಧೋನಿ ಅವರ ಬೈಕ್ ಹಾಗೂ ಕಾರು ಕಲೆಕ್ಷನ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದ ವೆಂಕಟೇಶ್ ಪ್ರಸಾದ್ ಅವರು, 'ಇದು ನೋಡಲು ಬೈಕ್ ಶೋರೂಂನಂತೆ ಕಾಣುತ್ತಿದೆ. ಈ ರೀತಿ ಮಾಡಲು ಕ್ರೇಜ್ ಬೇಕು' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಎಂ.ಎಸ್ ಧೋನಿ ಅವರ ಗ್ಯಾರೇಜ್ ನಲ್ಲಿ ಕವಾಸಕಿ ನಿಂಜಾ ಹೆಚ್2, ಡುಕಾಟಿ 1098, ಯಮಹಾ ರಾಜದೂತ್ ಸೇರಿದಂತೆ ಹಲವು ಬೈಕ್‌ಗಳ ದೊಡ್ಡ ಸಂಗ್ರಹವೇ ಇದೆ. ಐಷಾರಾಮಿ ಹಾಗೂ ವಿಂಟೇಜ್ ಕಾರುಗಳನ್ನು ಅವರು ಹೊಂದಿದ್ದು, ಫೆರಾರಿ 599 ಜಿಟಿಒ, ಜೀಪ್ ಗ್ರ್ಯಾಂಡ್ ಚೆರೋಕೀ, ಪಾಂಟಿಯಾಕ್ ಫೈರ್ಬರ್ಡ್, ನಿಸ್ಸಾನ್ ಜೊಂಗಾ, ಹಮ್ಮರ್ ಸೇರಿದಂತೆ ವಿವಿಧ ಕಾರುಗಳಿವೆ.
ಧೋನಿ ಅವರು, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ, 5 ವರ್ಷ ಕಳೆಯುತ್ತ ಬಂದಿದ್ದು, ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಮುನ್ನೆಡೆಸುವ ಅವಕಾಶವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಧೋನಿ 212 ಐಪಿಎಲ್ ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದು, 128ರಲ್ಲಿ ಗೆಲುವಿನ ದಡವನ್ನು ಮುಟ್ಟಿಸಿದ್ದು, 82 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications