ಸಾಧನೆಗೆ ಗೌರವ: ಆನಂದ್ ಮಹೀಂದ್ರಾರಿಂದ 'ಥಾರ್' ಗಿಫ್ಟ್ ಪಡೆದ ಕ್ರಿಕೆಟಿಗರಿವರು
ಭಾರತದ ಪ್ರಸಿದ್ಧ ಉದ್ಯಮಿ, ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), ವಿವಿಧ ಕ್ಷೇತ್ರದ ಸಾಧಕರಿಗೆ ತಮ್ಮ ಕಂಪನಿಯ ವಾಹನಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸುತ್ತಿರುತ್ತಾರೆ. ಅದರಲ್ಲೂ ಟೀಂ ಇಂಡಿಯಾ ಯುವ ಕ್ರಿಕೆಟಿಗರಿಗೆ ಥಾರ್ (Thar) ಎಸ್‌ಯುವಿಯನ್ನು ಕೊಟ್ಟು ಪ್ರೋತ್ಸಾಹಿಸಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ತಂದೆ ನೌಶಾದ್ ಖಾನ್ ಅವರಿಗೆ 'ಥಾರ್' ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕಳೆದ ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಸರ್ಫರಾಜ್ ಅರ್ಧಶತಕವನ್ನು ಭಾರಿಸಿದ್ದರು. ಅನಿಲ್ ಕುಂಬ್ಳೆ ಸರ್ಫರಾಜ್‍ಗೆ ಟೆಸ್ಟ್ ಕ್ಯಾಪ್ ನೀಡಿದ ಬಳಿಕ, ಅವರ ತಂದೆ ನೌಶಾದ್ ಭಾವುಕರಾಗಿದ್ದರು. ಆ ವಿಡಿಯೋ ವೈರಲ್ ಆಗಿತ್ತು.

ಆಸ್ಟ್ರೇಲಿಯಾ ವಿರುದ್ಧ ನಡೆದ 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ (Shubman Gill) ಅವರಿಗೆ ಥಾರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶುಭ್‌ಮನ್ ಉತ್ತಮವಾದ ರನ್ ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ನೆರವಾಗಿದ್ದರು. 2-1 ಅಂತರದಲ್ಲಿ ಸರಣಿಯನ್ನು ವಶಪಡಿಕೊಳ್ಳಲಾಗಿತ್ತು.
ಇದೇ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಶುಭ್‌ಮನ್ ಗಿಲ್ ಜೊತೆಯಲ್ಲಿ ಟೀಂ ಇಂಡಿಯಾ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ (Mohammed Siraj) ಗರಿಷ್ಠ ವಿಕೆಟ್ ಪಡೆದು ಅದ್ಬುತ ಆಟಗಾರನಾಗಿ ಹೊರಹೊಮ್ಮಿದ್ದರು. ಅವರಿಗೆ ಕಪ್ಪು ಬಣ್ಣದ ಥಾರ್ (Thar) ಕಾರನ್ನು ಗಿಫ್ಟ್ ನೀಡಲಾಗಿತ್ತು. ಸಿರಾಜ್ ಕುಟುಂಬದೊಂದಿಗೆ ಈ ಎಸ್‌ಯುವಿಯನ್ನು ವಿತರಣೆ ಪಡೆದಿದ್ದರು. ಆನಂದ್ ಮಹೀಂದ್ರಾ ಅವರಿಗೂ ಧನ್ಯವಾದವನ್ನು ಅರ್ಪಿಸಿದ್ದರು.

ಟೀಮ್ ಇಂಡಿಯಾ ವೇಗದ ಬೌಲರ್ ಶಾರ್ದೂಲ್ ಠಾಕೂರ್ (Shardul Thakur) ಅವರು ಕೂಡ 'ಮಹೀಂದ್ರಾ ಥಾರ್' ಕಾರನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಉತ್ತಮ ಲಯದಲ್ಲಿರುವ ಶಾರ್ದೂಲ್ ಠಾಕೂರ್, ಈಚೆಗೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಮುಂಬೈ ಪರವಾಗಿ ಭರ್ಜರಿ ಪ್ರದರ್ಶನ ನೀಡಿ, ಅಸ್ಸಾಂ ವಿರುದ್ಧ10 ವಿಕೆಟ್‌ಗಳನ್ನು ಕಬಳಿಸಿದ್ದರು.
2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದ ಗೆಲುವಿಗಾಗಿ ಟಿ.ನಟರಾಜನ್ ಅವರು ಸಾಕಷ್ಟು ಶ್ರಮಿಸಿದ್ದರು. ಅವರಿಗೆ ಕೆಂಪು ಬಣ್ಣದ ಥಾರ್ ಎಸ್‌ಯುವಿಯನ್ನು ಗಿಫ್ಟ್ ನೀಡಲಾಗಿತ್ತು. ತಮ್ಮ ಕುಟುಂಬದೊಂದಿಗೆ ಈ ಕಾರನ್ನು ವಿತರಣೆ ಪಡೆದಿದ್ದರು. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಹೀಂದ್ರಾ ಥಾರ್ ಎಸ್‌ಯುವಿ, ರೂ.11.25 ಲಕ್ಷದಿಂದ ರೂ.17.20 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ.

ಈ ಥಾರ್, 3-ಡೋರ್ ಆಯ್ಕೆಯಲ್ಲಿ ಎಎಕ್ಸ್ (ಒ), ಎಲ್ಎಕ್ಸ್ ರೂಪಾಂತರ ಸೇರಿದಂತೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. 1.5-ಲೀಟರ್ ಡೀಸೆಲ್, 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 6-ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಒಳಗೊಂಡಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications