ಜಾಗ್ವಾರ್ ಕಾರಿಗಿಂತಲೂ ಕತ್ತೆ ಲೇಸು ಅಂತೆ!
ದೇಶದ ಪ್ರತಿಷ್ಠಿತ ಕಾರು ಸಂಸ್ಥೆಗೆ ಭಾರಿ ಮುಖಭಂಗವನ್ನುಂಟುಮಾಡುವ ಘಟನೆಯೊಂದರಲ್ಲಿ ಐಷಾರಾಮಿ ಜಾಗ್ವಾರ್ ಕಾರನ್ನು ಕತ್ತೆಗಿಂತಲೂ ಕೀಳು ಮಟ್ಟದಲ್ಲಿ ಚಿತ್ರಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ.
ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಜಾಗ್ವಾರ್ ಭಾರತದಲ್ಲಿ ಪ್ರೀಮಿಯಂ ಕಾರುಗಳನ್ನು ವಿತರಿಸುತ್ತಿದೆ. ಆದರೆ ಐಷಾರಾಮಿ ಜಾಗ್ವಾರ್ ಕಾರು ಖರೀದಿಸಿರುವ ಗ್ರಾಹಕರೊಬ್ಬರು ಸಂಸ್ಥೆಯ ಮೇಲೆ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದ್ದು, ತಮ್ಮ ಅಸಂತೃಪ್ತಿಯನ್ನು ಕತ್ತೆಯ ಮೂಲಕ ಹೊರಗೆಡವಿದ್ದಾರೆ.

ಜಾಗತಿಕವಾಗಿ ಅತಿ ಹೆಚ್ಚು ಹೆಸರು ಮಾಡಿರುವ ಕಾರು ಸಂಸ್ಥೆಗಳಲ್ಲಿ ಜಾಗ್ವಾರ್ ಕೂಡಾ ಒಂದಾಗಿದೆ. ಅಲ್ಲದೆ ಉತ್ತಮ ಗ್ರಾಹಕ ವಲಯವನ್ನು ಜಾಗ್ವಾರ್ ಕಾಯ್ದುಕೊಂಡು ಬಂದಿದೆ.

ಅದರೆ ಅಹಮಾದಾಬಾದ್‌ನಲ್ಲಿರುವ ಕಾರ್ಗೊ ಮೋಟಾರ್ಸ್ ಜಾಗ್ವಾರ್ ಲ್ಯಾಂಡ್ ರೋವರ್ ಶೋ ರೂಂ ಕಳಪೆ ಸೇವೆಯಿಂದ ಬೆಸತ್ತಿರುವ ಉದ್ಯಮಿ ರಾಹುಲ್ ಠಾಕ್ರೆಂ (38) ತಮ್ಮ ಕಾರಿನ ಮುಂಭಾಗದಲ್ಲಿ, 'ಬೋಗಸ್ ಕಾರು' 'ಬೋಗಸ್ ಕಂಪನಿ' ಮತ್ತು 'ಬೋಗಸ್ ಸರ್ವಿಸ್' ಎಂದು ಪೋಸ್ಟರ್ ಅಂಟಿಸಿದ್ದಾರೆ.

ಇಲ್ಲಿಗೂ ನಿಲ್ಲದ ಉದ್ಯಮಿಯ ಕೋಪ 50 ಲಕ್ಷ ರು.ಗಳ ಕಾರುಗಿಂತಲೂ ಕತ್ತೆ ಎಷ್ಟೋ ಲೇಸು ಎಂದಿದ್ದಾರೆ. ಮಾತು ಮುಂದುವರಿಸಿದ ಅವರು ಜಾಗ್ವಾರ್‌ಗಿಂತಲೂ ಆರು ಸೀಟುಗಳ ಆಟೋ ರಿಕ್ಷಾ ಖರೀದಿಸುವುದು ಹೆಚ್ಚು ಸೂಕ್ತ ಎಂದಿದ್ದಾರೆ.

ಅಷ್ಟೇ ಯಾಕೆ ಇಡೀ ನಗರದಲ್ಲಿ ಜಾಗ್ವಾರ್ ಕಾರನ್ನು ಕತ್ತೆ ಸವಾರಿ ಮಾಡಿಸಿದ್ದಾರೆ. ಅಲ್ಲದೆ ನನ್ನಿಂದ ಸಮಸ್ಯೆಗಳ ಪಟ್ಟಿ ಮಾಡುವುದೇ ಕಷ್ಟವಾಗಿಬಿಟ್ಟಿದೆ ಎಂದಿದ್ದಾರೆ.

ತಮ್ಮ ಬೆಲೆಬಾಳುವ ಕಾರಿನಲ್ಲಿ ಅನೇಕ ಬಾರಿ ಸಮಸ್ಯೆಯಿಂದಾಗಿ ಹಲವು ಬಾರಿ ವಿತರಕರನ್ನು ಸಂಪರ್ಕಿಸಿದ್ದರು. ಆದರೆ ಒಂದು ಬಗೆ ಹರಿದ ತಕ್ಷಣ ಮಗದೊಂದು ಸಮಸ್ಯೆ ಉದ್ಭವಿಸುತ್ತಿತ್ತು ಎಂದು ವಿವರಿಸಿದ್ದಾರೆ.

ಸಾಮಾನ್ಯವಾಗಿ ಕತ್ತೆಗಳು ಹೆಚ್ಚು ವಿಶ್ವಾಸಾರ್ಹವೆನಿಸಿದೆ. ಇದಕ್ಕಾಗಿ ಕತ್ತೆಯಿಂದಲೇ ನಗರ ಪ್ರದಕ್ಷಿಣೆ ಹಾಕಿದ್ದೇನೆ. ನನ್ನ ಕಾರಿನಲ್ಲಿ ಅನೇಕ ಸಮಸ್ಯೆಗಳಿವೆ. ಆರಂಭದಲ್ಲಿ ಲೈಟ್ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಬಂಪರ್ ಬಿದ್ದು ಹೋಯಿತು ಹೀಗೆ ತಮ್ಮ ಸಮಸ್ಯೆಗಳ ಪಟ್ಟಿಯನ್ನು ಉದ್ಯಮಿ ವಿವರಿಸುತ್ತಾರೆ.


Click it and Unblock the Notifications








