ವಂದೇ ಭಾರತ್ ಸ್ಲೀಪರ್, ಸೂಪರ್ ಆಪ್.. ರೈಲ್ವೆಯಿಂದ ಬಿಗ್ ಪ್ಲ್ಯಾನ್: ನೀವು ತಿಳಿಯಬೇಕಾದ ವಿಚಾರಗಳಿವು!
ಭಾರತೀಯ ರೈಲ್ವೆ (Indian Railway) ಇಲಾಖೆಯು 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆ ನಂತರ, 100 ದಿನಗಳಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಕುರಿತ ಕಾರ್ಯತಂತ್ರವನ್ನು ರೂಪಿಸಿದೆ. ರೈಲ್ವೆಯನ್ನು ಆಧುನೀಕರಣಗೊಳಿಸುವುದರೊಂದಿಗೆ ಹಲವು ಪ್ರಯಾಣಿಕ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಭರದಿಂದ ಸಿದ್ಧತೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಟಿಕೆಟ್ ರದ್ದತಿಯ ಹಣವನ್ನು 24 ಗಂಟೆಗಳೊಳಗೆ ಮರುಪಾವತಿಯನ್ನು ಮಾಡಲು ತಯಾರಿಯನ್ನು ನಡೆಸುತ್ತಿದೆ. ಸದ್ಯ, ಇದೇ ಪ್ರಕ್ರಿಯೆ ಮೂರು ದಿನಗಳಿಂದ ಒಂದು ವಾರದವರೆಗೆ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲೇ 'ಸೂಪರ್ ಆಪ್' ಕೂಡ ಪರಿಚಯಿಸಲಿದ್ದು, ಸುಲಭವಾಗಿ ಟಿಕೆಟ್ ಬುಕ್ಕಿಂಗ್, ಕ್ಯಾನ್ಸೆಲ್ (ರದ್ದತಿ), ಲೈವ್ ಟ್ರೈನ್ ಟ್ರ್ಯಾಕಿಂಗ್ & ಪುಡ್ (ಆಹಾರ) ಆರ್ಡರ್ ಮಾಡಬಹುದಾಗಿದೆ.

ಹೊಸ ಕೇಂದ್ರ ಸರ್ಕಾರದ 100 ದಿನಗಳ ಕಾರ್ಯಸೂಚಿಯ ಭಾಗವಾಗಿ ರೈಲ್ವೆ ಇಲಾಖೆಯು ಪಿಎಂ ರೈಲ್ ಯಾತ್ರಿ ಬಿಮಾ ಯೋಜನೆ (PM Rail Yatri Bima Yojana) ಹೆಸರಿನ ವಿಮಾ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಅತ್ಯಾಧುನಿಕ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ರೈಲ್ವೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ ರೂ.10 ರಿಂದ ರೂ.12 ಲಕ್ಷ ಕೋಟಿ ಹಣವನ್ನು ಹೂಡಿಕೆ ಮಾಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ನೂತನ ವಂದೇ ಭಾರತ್ ರೈಲುಗಳನ್ನು ಕೂಡ ಲೋಕಾರ್ಪಣೆಗೊಳಿಸಲು ರೈಲ್ವೆ ಇಲಾಖೆಯು ನಿರ್ಧರಿಸಿದೆ ಎಂದು ಗೊತ್ತಾಗಿದೆ. 100 ಕಿಲೋಮೀಟರ್‌ನೊಳಗಿನ ಮಾರ್ಗದಲ್ಲಿ ವಂದೇ ಮೆಟ್ರೋ (Vande Metro), 550 ಕಿಲೋಮೀಟರ್‌ಗಿಂತ ದೂರದ ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ (Vande Bharat Sleeper) ಹಾಗೂ 100 ರಿಂದ 550 ಕಿಲೋಮೀಟರ್‌ನೊಳಗೆ ಮತ್ತಷ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ (ಚೇರ್ ಕಾರ್) ರೈಲುಗಳನ್ನು ಬಿಡಲಿದೆ.
ಅಹಮದಾಬಾದ್-ಮುಂಬೈ ನಡುವೆ 'ಬುಲೆಟ್ ರೈಲು' ಏಪ್ರಿಲ್ 2029ರಿಂದ ಕಾರ್ಯಾಚರಣೆಯನ್ನು ನಡೆಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದ್ದು, ದೇಶದ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿಯು 3 ಹೆಚ್ಚುವರಿ ಬುಲೆಟ್ ರೈಲು ಯೋಜನೆಗೆ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಕೂಡ ತೀರ್ಮಾನಿಸಿದೆ. ಖಾಸಗಿ ಸಹಭಾಗಿತ್ವದೊಂದಿಗೆ 1,300ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಯೋಜನೆಯನ್ನು ರೂಪಿಸಿದೆ ಎಂದು ತಿಳಿದುಬಂದಿದೆ.
ನೂತನ ರೈಲು ನಿಲ್ದಾಣಗಳು ಶಾಪಿಂಗ್ ಮಾಲ್, ವಿಮಾನ ನಿಲ್ದಾಣಕ್ಕೆ ಸೆಡ್ಡು ಹೊಡೆಯುವನಂತಹ ವೇಟಿಂಗ್ ಲಾಂಜ್‌ನ್ನು ಹೊಂದಿರಲಿವೆ. ದೆಹಲಿ-ಮೀರತ್ ನಡುವೆ ಕಾರ್ಯಚರಣೆ ನಡೆಸುವ ರಾಪಿಡ್ ರೈಲುಗಳನ್ನು ಅಗತ್ಯವಿರುವ ವಿವಿಧ ಮಾರ್ಗದಲ್ಲಿಯು ವಿಸ್ತರಿಸಲು ಕಾರ್ಯಸೂಚಿಯನ್ನು ರಚಿಸಿದೆ ಎಂದು ವರದಿಯಾಗಿದೆ. ಶುಕ್ರವಾರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಚಿವಾಲಯಗಳು ಹೊಸ ಸರ್ಕಾರದ ಆಡಳಿತ ಶುರುವಾದ ಬಳಿಕ, ತಮ್ಮ 100 ದಿನಗಳ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡಿದ್ದವು.
ಮುಂಬರುವ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆ ಬಗ್ಗೆ ಮಾತನಾಡುವುದಾದರೆ, ಇವು ರಾಜಧಾನಿ ಎಕ್ಸ್‌ಪ್ರೆಸ್ ಗಳಿಗೆ ಪರ್ಯಾಯವಾಗಲಿವೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಸಹಯೋಗದಲ್ಲಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಕ ಘಟಕದಲ್ಲಿ ಈ ರೈಲನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಒಟ್ಟು 16 ಕೋಚ್ ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








