3,000 Trains: ಹೊಸದಾಗಿ 3,000 ರೈಲುಗಳ ಸಂಚಾರ?, ವೇಟಿಂಗ್ ಎಂಬ ಮಾತೇ ಇಲ್ಲ..!
ದೇಶದ ಜನರಿಗೆ ಸಿಹಿಸುದ್ದಿ ನೀಡಲು ಭಾರತೀಯ ರೈಲ್ವೆ (Indian Railways) ಮುಂದಾಗಿದೆ. ಟಿಕೆಟ್‌ಗಾಗಿ ಕಾಯುವ ಪರಿಪಾಠವನ್ನು ತೊಡೆದುಹಾಕಲು ಯೋಜಿಸುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಇನ್ನೂ 3,000 ಪ್ಯಾಸೆಂಜರ್ ರೈಲುಗಳನ್ನು (Passenger trains) ಬಿಡಲು ಯೋಜಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತೀಯ ರೈಲ್ವೆ ದೀಪಾವಳಿ ಮತ್ತು ಛತ್ ಪೂಜೆಯ ಭಾಗವಾಗಿ 2,423 ವಿಶೇಷ ರೈಲುಗಳನ್ನು ಓಡಿಸಿದೆ. ಅದರ ಹೊರತಾಗಿಯೂ ಬಿಹಾರ (Bihar) ಮತ್ತು ಉತ್ತರ ಪ್ರದೇಶಕ್ಕೆ (Uttar Pradesh) ಹೋಗುವ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ರೈಲು ಕೋಚ್‌ಗಳ ಸಮೀಪಕ್ಕೂ ಬರಲು ಪ್ರಯಾಣಿಕರು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಯ್ದಿರಿಸುವ ಟಿಕೆಟ್‌ಗಾಗಿ ಸುದೀರ್ಘ ವೇಟಿಂಗ್ ಲಿಸ್ಟ್ ಹಾಗೂ ಸಾಮಾನ್ಯ ಟಿಕೆಟ್‌ಗಳಿಗಾಗಿ ನಿಲ್ದಾಣದಲ್ಲಿ ಜನರು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.

2027ರ ಹೊತ್ತಿಗೆ ಈಗಿರುವ ರೈಲುಗಳೊಂದಿಗೆ ಹೆಚ್ಚುವರಿಯಾಗಿ ಸುಮಾರು 3,000 ಹೊಸ ರೈಲುಗಳನ್ನು ಬಿಡಲು ರೈಲ್ವೆ ಯೋಜಿಸಿದೆ. ಆ ರೀತಿಯಾಗಿ ಎಲ್ಲವು ಅಂದುಕೊಂಡಂತೆ ನಡೆದರೆ, ಪ್ರತಿಯೊಬ್ಬ ಪ್ರಯಾಣಿಕನಿಗೂ ದೃಢೀಕೃತ ಟಿಕೆಟ್ (Confirmed Ticket) ಸಿಗುತ್ತದೆ. ವೇಟಿಂಗ್ ಲಿಸ್ಟ್ ಎನ್ನುವುದೇ ಇರುವುದಿಲ್ಲವೆಂದು ಭಾರತೀಯ ರೈಲ್ವೆ ಮೂಲಗಳಿಂದ ಗೊತ್ತಾಗಿದೆ ಎಂದು ಖಾಸಗಿ ಸುದ್ದಿ ವಾಹಿನಿ 'ಇಂಡಿಯಾ ಟುಡೇ' ವರದಿ ಮಾಡಿದೆ.
ಕೋವಿಡ್‌ಗೂ ಮೊದಲು ದೇಶಾದ್ಯಂತ ಪ್ರತಿದಿನ 10,186 ಪ್ಯಾಸೆಂಜರ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಸದ್ಯ, ಆ ಸಂಖ್ಯೆ 10,747ಕ್ಕೆ ಹೆಚ್ಚಳವಾಗಿದೆ. ಭಾರತೀಯ ರೈಲ್ವೆ ಮೂಲಗಳ ಪ್ರಕಾರ, ರೈಲುಗಳ ಸಂಖ್ಯೆಯನ್ನು ದಿನವೊಂದಕ್ಕೆ 13,0000ಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಮುಂಬರುವ ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆಯು 800 ಕೋಟಿಯಿಂದ 1,000 ಕೋಟಿಗೆ ಅಧಿಕಗೊಳ್ಳುವ ನೀರಿಕ್ಷೆಯಿದೆ.

ಭಾರತೀಯ ರೈಲ್ವೆ ತನ್ನ ಪ್ಯಾಸೆಂಜರ್ ರೈಲಿನ ಕೋಚ್ ಸಿಸ್ಟಮ್ ಅನ್ನು ನವೀಕರಿಸಲು ಯೋಜಿಸುತ್ತಿದೆ ಎಂದು ಸಹ ಮೂಲಗಳಿಗೆ ತಿಳುದುಬಂದಿದೆ. ಹೊಸ ಕಾನ್ಫಿಗರೇಶನ್ ಹೊಂದಿರುವ 22 ಕೋಚ್‌ಗಳ ಟೈನ್ ಸೆಟ್ ಪರಿಚಯಿಸಲು ಯೋಜಿಸಿಸುತ್ತಿದೆ. ಅಲ್ಲದೆ, ಮುಂದಿನ ವರ್ಷ ಸುಮಾರು 500 ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳನ್ನು ಪ್ರಾರಂಭಿಸಲು ಕೂಡ ರೈಲ್ವೆ ಇಲಾಖೆ ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜನರಲ್ ಮ್ಯಾನೇಜರ್ ಬಿ.ಜಿ.ಮಲ್ಯ, 'ಮುಂದಿನ ವರ್ಷ, ಐಸಿಎಫ್ ಘಟಕವು 500 - 550 ವಂದೇ ಭಾರತ್ ರೈಲು ತಯಾರಿಸುವ ಗುರಿಯನ್ನು ಹಾಕಿಕೊಂಡಿದೆ. ಈ ವರ್ಷ ಒಟ್ಟು 75 ವಂದೇ ಭಾರತ್ ರೈಲುಗಳನ್ನು ಉತ್ಪಾದಿಸಲು ಸಿದ್ಧತೆ ನಡೆಸಲಾಗಿದ್ದು, ಅದರಲ್ಲಿ 8-ಕಾರ್ ಗಳ 63 ಹಾಗೂ 16 ಕಾರ್ ಗಳ 12 ರೈಲುಗಳಿವೆ' ಎಂದು ಹೇಳಿದ್ದರು.

ಇನ್ನು, ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರೈಲ್ವೆ ಇಲಾಖೆಯ ಪಾತ್ರ ದೊಡ್ಡದಿದ್ದು, ಮುಂಬರುವ ದಿನಗಳಲ್ಲಿ ಹೊಸ ರೈಲುಗಳನ್ನು ಬಿಡಲು ಯೋಜಿಸಿರುವುದರಿಂದ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ದೊಡ್ಡಮಟ್ಟದದಲ್ಲಿ ಅನುಕೂಲವಾಗಲಿದೆ. ಕಾಯ್ದಿರಿಸುವ ಟಿಕೆಟ್‌ಗಾಗಿ ಸುದೀರ್ಘ ವೇಟಿಂಗ್ ಲಿಸ್ಟ್ ಹಾಗೂ ಸಾಮಾನ್ಯ ಟಿಕೆಟ್‌ಗಳಿಗಾಗಿ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು ತಪುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications