ದೇಶ ತೊರೆಯದ ಪರಿಸ್ಥಿತಿ... ತಾಯಿಯ ಚಿತಾಭಷ್ಮದೊಂದಿಗೆ ದುಬೈನಲ್ಲಿ 4 ವರ್ಷ ಕಾರಿನಲ್ಲೇ ಜೀವನ... ಕೊನೆಗೂ ಮುಕ್ತಿ!
ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಇಂದು ಕೋಟಿಗೆ ಬಾಳಿದವರು ನಾಳೆ ಬಿಕ್ಷುಕರಾಗಬಹುದು. ಹಾಗೆಯೇ ಇಂದು ಕಷ್ಟ ಅನುಭವಿಸಿದವರಿಗೆ ನಾಳೆ ಸುಖ ಸಿಗಬಹುದು. ಈ ಎರಡೂ ನೀತಿ ಪಾಠಗಳನ್ನು ಹಲವರು ತಮ್ಮ ಜೀವನದಲ್ಲಿ ಕಂಡಿರುತ್ತೀರಿ. ಹಾಗೆಯೇ ಇಲ್ಲೊಬ್ಬರು ಮಹಿಳೆಗೆ ಸತತ ನಾಲ್ಕು ವರ್ಷಗಳ ಬಳಿಕ ನರಕದಿಂದ ವಿಮುಕ್ತಿ ದೊರಕಿದೆ.
ದುಬೈನಲ್ಲಿ ಕಳೆದ ನಾಲ್ಕು ವರ್ಷಗಳಿಂದ ತನ್ನ ಹೋಂಡಾ ಸಿಟಿ ಕಾರಿನಲ್ಲಿ ಎರಡು ನಾಯಿಗಳೊಂದಿಗೆ ವಾಸಿಸುತ್ತಿರುವ ಪ್ರಿಯಾ ಎಂಬ ಭಾರತೀಯ ಮಹಿಳೆಯ ಕಥೆ ಇದಾಗಿದ್ದು, ಬಹಳ ರೋಚಕವಾಗಿದೆ. ನಾಲ್ಕು ವರ್ಷಗಳ ಹಿಂದೆ ಇವರ ಕುರಿತು ಯೂಟ್ಯೂಬ್ ಚಾನಲ್ ವೊಂದರಲ್ಲಿ ತೋರಿಸಲಾಗಿತ್ತು. ಅಂದಿನಿಂದ ಪ್ರಿಯಾ ಯಾರಾದರು ಸಹಾಕ್ಕೆ ಬರುವ ನಿರೀಕ್ಷೆಯಲ್ಲಿದ್ದರು. ಕೊನೆಗೂ ನಾಲ್ಕು ವರ್ಷಗಳ ಹೋರಾಟದ ನಂತರ ಪ್ರಿಯಾ ತನಗೆ ಬೇಕಾದ ಎಲ್ಲಾ ಸಹಾಯವನ್ನು ಪಡೆದಿರುವ ಕುರಿತು ವರದಿಯಾಗಿದೆ.

ಈ ಕುರಿತ ವಿಡಿಯೋವನ್ನು ಈ ಹಿಂದೆ ಪ್ರಚಾರ ಮಾಡಿದ್ದ ಅದೇ ಎಡಿಟೋರಿಯಲ್ ಯೂಟ್ಯೂಬ್ ಚಾನಲ್ ಹಂಚಿಕೊಂಡಿದೆ. ಪ್ರಿಯಾ ಕುರಿತು ವಿಡಿಯೋ ಹೊರಬರುತ್ತಿದ್ದಂತೆ ಈ ಯೂಟ್ಯೂಬ್ ಚಾನಲ್‌ಗೆ ಹಲವರು ಪ್ರತಿಕ್ರಿಯಿಸಿದ್ದರು. ಆದರೆ ಆಕೆಗೆ ಸಹಾಯ ಮಾಡಿದ್ದು ಮಾತ್ರ ದುಬೈನಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಜಸ್ಬೀರ್ ಬಸ್ಸಿ. ಸತತ ನಾಲ್ಕು ವರ್ಷಗಳ ಕಾಲ ಕೈಲಾದ ಕೆಲಸ ಮಾಡಿಕೊಂಡು ಕಾರಿನಲ್ಲಿ ಉಳಿದುಕೊಂಡಿದ್ದ ಪ್ರಿಯಾಗೆ ನರಕದಿಂದ ಸ್ವರ್ಗಕ್ಕೆ ಕಾಲಿಟ್ಟಂತಾಗಿದೆ.
ವಿಸಾ ಅವಧಿ ಮುಗಿದಿತ್ತು:
ಪ್ರಿಯಾ ಸುಮಾರು 40 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಆಕೆಯ ಪೋಷಕರು ಅಲ್ಲಿ ಯಶಸ್ವಿ ವ್ಯಾಪಾರವನ್ನು ಹೊಂದಿದ್ದರು. ಪ್ರಿಯಾ ಅವರದ್ದು ಒಂದು ಮಟ್ಟಕ್ಕೆ ಶ್ರೀಮಂತ ಕುಟುಂಬವೇ ಆದರೆ ಒಂದರ ಮೇಲೊಂದು ಕಷ್ಟಗಳು ಜೀವನದಲ್ಲಿ ಅಪ್ಪಳಿಸಿದರೆ ನಾವು ಬೀದಿಗೆ ಬರುತ್ತೇವೆ ಎಂಬುದಕ್ಕೆ ಇವರೇ ಉದಾಹರಣೆಯಾಗಿದ್ದಾರೆ. ವಿದೇಶದಲ್ಲಿ ವಾಸಿಸುವ ಇತರ ಜನರಂತೆ ಆರಾಮದಾಯಕ ಮನೆಯಲ್ಲಿ ವಾಸಿಸುತ್ತಿದ್ದರು. ತಂದೆ ಮರಣ, ತಾಯಿ ಅನಾರೋಗ್ಯಕ್ಕೆ ಒಳಗಾಗಿ ವರ್ಷಗಳ ಕಾಲ ಹಾಸಿಗೆ ಹಿಡಿದಾಗ ಎಲ್ಲವೂ ತಲೆಕೆಳಗಾದವು.
ಪ್ರಿಯಾ ತನ್ನ ತಾಯಿಯ ಚಿಕಿತ್ಸೆಗಾಗಿ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗಿತ್ತು. ಜೊತೆಗೆ ಇದೇ ಸಂದರ್ಭದಲ್ಲಿ ಕುಟುಂಬವು ವ್ಯವಹಾರದಲ್ಲಿ ನಷ್ಟವನ್ನು ಎದುರಿಸಿತು, ಇದು ಆರ್ಥಿಕ ಅಸ್ಥಿರತೆಗೆ ಕಾರಣವಾಯಿತು. ಕೆಲವು ವರ್ಷಗಳ ಹಿಂದೆ, ಪ್ರಿಯಾಳ ತಾಯಿ ಕೂಡ ನಿಧನರಾದರು. ಸದ್ಯ ಅವರಿಗೆ ದೇಶ ತೊರೆಯಲು ಆಗದಿದ್ದ ಕಾರಣ ತಾಯಿಯ ಚಿತಾಭಸ್ಮವನ್ನು ಕಾರಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಎಲ್ಲವೂ ಸರಿಹೋದ ಮೇಲೆ ಪವಿತ್ರ ನದಿಗೆ ತಾಯಿಯ ಚಿತಾಭಸ್ಮವನ್ನು ಬಿಡಲು ಕಾಯುತ್ತಿದ್ದಾರೆ.
ಸದ್ಯ ಪ್ರಿಯಾ ಕಾರಿನಲ್ಲಿ ಎರಡು ನಾಯಿಗಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಜೀವನ ಸಾಗಿಸಲು ಸೇವಕಿಯಾಗಿ ಕೆಲಸ ಮಾಡುತ್ತಿದ್ದು, ಕೇವಲ 500 Dhs ಹಣವನ್ನು ಪಡೆಯುತ್ತಿದ್ದದ್ದಾಗಿ ಈ ಹಿಂದೆ ಬಿಡುಗಡೆಯಾಗಿದ್ದ ವಿಡಿಯೋದಲ್ಲಿ ಹೇಳಲಾಗಿತ್ತು. ಕೊನೆಗೂ ಪ್ರಿಯಾ ತನಗೆ ಬೇಕಾದ ಸಹಾಯವನ್ನು ಪಡೆದಿರುವುದಕ್ಕೆ ಪಂಜಾಬ್‌ನ ಉದ್ಯಮಿ ಮತ್ತು ದುಬೈನ ಕಾರ್ ಫೇರ್ ಗ್ರೂಪ್‌ನ ಎಂಡಿ ಜಸ್ಬೀರ್ ಬಸ್ಸಿ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ. ಜೊತೆಗೆ ಬಸ್ಸಿ ಅವರ ಕಂಪನಿಯಲ್ಲಿ ಕೆಲಸ ಕೂಡ ನೀಡಲಾಗಿದೆ.
ವಿಡಿಯೋ ನೋಡಿ ಸಹಾಯ:
ಎಡಿಟೋರಿಯಲ್ ಅವರು ಪ್ರಕಟಿಸಿದ ವೀಡಿಯೊವನ್ನು ನೋಡಿ ಜಸ್ಬೀರ್ ಬಸ್ಸಿ ಪ್ರಿಯಾ ಅವರ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು. ನಂತರ ಆಕೆಯನ್ನು ತಮ್ಮ ಕಂಪನಿಯ ಕಚೇರಿಗೆ ಆಹ್ವಾನಿಸಿ, ಪ್ರಿಯಾ ಅವರ ಎಲ್ಲಾ ಹಣಕಾಸಿನ ಹೊಣೆಗಾರಿಕೆಗಳನ್ನು ಸರಿದೂಗಿಸಲು ಚೆಕ್ ನೀಡಿದ್ದಾರೆ. ಜಸ್ಬೀರ್ ಹಣಕಾಸಿನ ನೆರವು ನೀಡುವುದರ ಜೊತೆಗೆ ಪ್ರಿಯಾ ಮೂರು ಪದವಿಗಳನ್ನು ಪಡೆದಿರುವುದನ್ನು ತಿಳಿದು ಆಕೆಗೆ ತಮ್ಮ ಸಂಸ್ಥೆಯಲ್ಲೇ ಕೆಲಸವನ್ನೂ ನೀಡಿರುವುದು ವಿಶೇಷ.
ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದ ಹೋಂಡಾ ಸಿಟಿಯನ್ನು ಮಾರಾಟ ಮಾಡಲು ಅಥವಾ ನವೀಕರಿಸಲು ಪ್ರಿಯಾಗೆ ಇಷ್ಟವಿಲ್ಲವಂತೆ. ಆಕೆಯ ತಾಯಿ ತನ್ನ ಕೊನೆಯ ದಿನಗಳನ್ನು ಅದೇ ಕಾರಿನಲ್ಲಿ ಕಳೆದ ಕಾರಣ ಕಾರು ಆಕೆಯ ಜೀವನದಲ್ಲಿ ಭಾವನಾತ್ಮಕ ಮೌಲ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಸಣ್ಣ ವಯಸ್ಸಿನಲ್ಲೇ ಜೀವನದಲ್ಲಿ ಶ್ರೀಮಂತಿಕೆ ನೋಡಿ ಅಷ್ಟೇ ಬೇಗ ಜೀವನದ ಅತಿ ಕಟ್ಟ ದಿನಗಳನ್ನು ಎದುರಿಸಿದ ಪ್ರಿಯಾ ಅವರ ಜೀವನ ಹಲವರಿಗೆ ಮಾದರಿಯಾಗಿದೆ.


Click it and Unblock the Notifications