ಕಾಶ್ಮೀರದಲ್ಲಿ ದೇಶದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ
ದೇಶದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗಕ್ಕೆ ಕಾಶ್ಮೀರದಲ್ಲಿ ವಿದ್ಯುಕ್ತ ಚಾಲನೆ ದೊರಕಿದೆ. ಕಳೆದ ವಾರವಷ್ಟೇ ಬಾನಿಹಲ್-ಖಾಝಿಗಂದ್ ರೈಲ್ವೇ ಮಾರ್ಗಕ್ಕೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಚಾಲನೆ ನೀಡಿದ್ದರು.
ಇದು ದೇಶದ ಅತಿ ಉದ್ದದ ಹಾಗೂ ಏಷ್ಯಾದ ಎರಡನೇ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗವಾಗಿದೆ. 11 ಕೀ.ಮೀ. ದೂರದ ಈ ರೈಲ್ವೇ ಮಾರ್ಗ ಜಮ್ಮು ಕಾಶ್ಮೀರದಲ್ಲಿ ಹಾದು ಹೋಗುತ್ತಿದೆ. ಇದು ಚಳಿಗಾಲದಲ್ಲಿ ಈ ಪ್ರದೇಶದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರಲಿದೆ.
ಕಳೆದ ಏಳು ವರ್ಷಗಳಷ್ಟು ಕಾಲ 1300 ಕಾರ್ಮಿಕರು ಹಾಗೂ 150 ಎಂಜಿನಿಯರ್‌ಗಳ ಅವಿರತ ಪ್ರಯತ್ನದ ಫಲವಾಗಿ ಜೂನ್ 26ರಂದು ನೂತನ ರೈಲ್ವೇ ಮಾರ್ಗ ಲೋಕರ್ಪಣೆಯಾಗಿದೆ. ನಿಮ್ಮ ಮಾಹಿತಿಗಾಗಿ 2005 ನವೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು.

ನ್ಯೂ ಆಸ್ಟ್ರೀಯನ್ ಟನಲಿಂಗ್ ವಿಧಾನದಲ್ಲಿ (ಎನ್‌ಎಟಿಎಂ) ನೂತನ ಸೂರಂಗ ಮಾರ್ಗ ನಿರ್ಮಿಸಲಾಗಿದೆ. ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಸುರಂಗ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ (ಎಚ್‌ಸಿಸಿ) ಪ್ರಕಾರ ಇದು ಭಾರತದ ಅತಿ ಉದ್ದದ ಹಾಗೂ ಏಷ್ಯಾದ ಎರಡನೇ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗವಾಗಿದೆ. ಅಂದ ಹಾಗೆ ಏಷ್ಯಾದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ ಚೀನಾದಲ್ಲಿದೆ.

ಕೆಲಸದ ಅವಧಿಯಲ್ಲಿ ಯೋಜನಾ ತಂಡ ಬೆಡ್ಡ ಗುಡ್ಡಗಳ ಅನಿರೀಕ್ಷಿತ ಭೂವಿಜ್ಞಾನ ಹಾಗೂ ಅಸಮಂಜಸತೆಯಿಂದಾಗಿ ಹಲವಾರು ತಾಂತ್ರಿಕ ತೊಂದರೆಗಳನ್ನು ಎದುರಿಸಬೇಕಾಯಿತು.

ಇವೆಲ್ಲದರ ನಡುವೆಯೂ ಯಾವುದೇ ಅಪಯಕಾರಿ ಘಟನೆ ಇಲ್ಲದೆ ಹೊಸ ಸೂರಂಗ ಮಾರ್ಗ ತೆರೆಯುವಲ್ಲಿ ಯೋಜನಾ ತಂಡ ಯಶಸ್ವಿಯಾಗಿದೆ.

ಸುರಂಗ ಮಾರ್ಗ ಸಂಪೂರ್ಣವಾಗಿ ಜಲನಿರೋಧಕ ಮತ್ತು ಸುರಂಗದ ಉದ್ದಕ್ಕೂ ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸಿರಲಾಗಿರುತ್ತದೆ.

ಸುರಂಗ ಅಸ್ತಿತ್ವದಲ್ಲಿರುವ ಜವಾಹರ್ ರಸ್ತೆ ಟನಲ್ ಕೆಳಗಿನ ಸುಮಾರು 440 ಮೀಟರ್ ಕೆಳಗಡೆ ಹಾದು ಹೋಗುತ್ತಿದೆ.

ಕಾಶ್ಮೀರದಲ್ಲಿ ದೇಶದ ಅತಿ ಉದ್ದದ ರೈಲ್ವೇ ಸುರಂಗ ಮಾರ್ಗ



Click it and Unblock the Notifications