ಹಾರ್ನ್ ಮಾಡಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಡಿಕ್ಕಿ ಹೊಡೆದ ಕಿರಾತಕರು: ಬೆಂಗಳೂರಿನಲ್ಲಿ ಮೈಜುಮ್ಮೆನ್ನಿಸುವ ವಿಡಿಯೋ ವೈರಲ್
ರೋಡ್ ರೇಜ್ ಎನ್ನುವುದು ಜಾಗತಿಕವಾಗಿ ನೆಲೆಯೂರಿರುವಂತಹ ಸಮಸ್ಯೆ ಎಂದರೆ ತಪ್ಪಾಗಲಾರದು. ಯಾಕೆಂದರೆ, ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ರಸ್ತೆಗಳಲ್ಲೂ ಈ ರೀತಿಯ ರೋಡ್ ರೇಜ್/ರಸ್ತೆ ಗಲಾಟೆ ಪ್ರಕರಣಗಳನ್ನು ನಾವು ನೋಡಬಹುದಾಗಿದೆ. ಈ ಪ್ರಕರಣಗಳು ನಮ್ಮಲ್ಲೂ ದಾಖಲಾಗುತ್ತಿದ್ದು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಈ ರೀತಿಯ ಪ್ರಕರಣವೊಂದು ದಾಖಲಾಗಿದೆ.
ಬೆಂಗಳೂರಿನಲ್ಲಿ ಹ್ಯುಂಡೈ ವೆನ್ಯೂ ಮತ್ತು ಮೂರು ದ್ವಿಚಕ್ರ ವಾಹನಗಳ ನಡುವೆ ಈ ರೋಡ್ ರೇಜ್ (Road Rage) ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ಇದೇ ರೀತಿಯ ಘಟನೆಯ ಸಂಪೂರ್ಣ ವಿಡಿಯೋ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ರಸ್ತೆ ಗಲಾಟೆಯು ವರ್ತೂರು ಸಮೀಪ ಹೊಸದಾಗಿ ನಿರ್ಮಿಸಿರುವ ಡಿಎಸ್‌ಆರ್ ರಿವೇರಾ ಬಳಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಮೂರು ಯುವಕರು ವೆನ್ಯೂ ಕಾರಿನ ಮಾಲೀಕರ ಬಳಿ ಗಲಾಟೆ ಮಾಡುತ್ತಿರುವುದು ರೆಕಾರ್ಡ್ ಆಗಿದ್ದು, ಇದು ಪೊಲೀಸರ ಕಾರ್ಯಾಚರಣೆಗೆ ನೆರವಾಗಿದೆ.
ಈ ಮೂರು ಬೈಕ್‌ಗಳ ಸವಾರರು ರಸ್ತೆಯಲ್ಲಿ ಚಲಿಸುತ್ತಿದ್ದಾಗ ವೆನ್ಯೂ ಓಡಿಸುತ್ತಿದ್ದ ಚಾಲಕ ಸೈಡ್ ನೀಡಲು ಹಾರ್ನ್ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಬೈಕ್ ಸವಾರನೊಬ್ಬ ಕಾರಿಗೆ ಅಡ್ಡವಾಗಿ ಚಲಿಸಲು ಆರಂಭಿಸಿದ್ದಾನೆ. ಜೊತೆಗೆ ಮತ್ತೊಬ್ಬ ಬೈಕ್ ಸವಾರನೂ ಸಹ ಇದಕ್ಕೆ ಸಾಥ್ ನೀಡಿದ್ದಾನೆ. ಇದರಿಂದ ಕಾರು ಮುಂದೆ ವೇಗವಾಗಿ ಚಲಿಸಲು ಸಾಧ್ಯವಾಗದೇ ನಿಧಾನವಾಗಿ ಚಲಿಸಿದ್ದಾನೆ.

ಕೊಂಚ ದೂರ ಚಲಿಸಿದ ನಂತರ ಬೈಕ್ ಸವಾರನೊಬ್ಬ ರೋಡ್ ಮಧ್ಯದಲ್ಲೇ ನಿಲ್ಲಿಸಿ ಕಾರು ಚಾಲಕನ ಬಳಿ ಗಲಾಟೆಗೆ ಆಗಮಿಸಿದ್ದಾನೆ. ಇದಕ್ಕೆ ಮತ್ತೆ ಇಬ್ಬರು ಸವಾರರೂ ಸಹ ಕೈ ಜೋಡಿಸಿದ್ದಾರೆ ಎಂಬುದು ವಿಡಿಯೋದಿಂದ ತಿಳಿದು ಬರುತ್ತದೆ. ಇನ್ನು ಮತ್ತೊಬ್ಬ ಸವಾರ ಇದೇ ಸಂಧರ್ಭದಲ್ಲಿ ತನ್ನ ಸ್ಕೂಟರ್ ತೆಗೆದುಕೊಂಡು ಕಾರ್‌ಗೆ ಡಿಕ್ಕಿಯೂ ಹೊಡೆದಿದ್ದಾನೆ.
ಅಪಾಯದ ಮುನ್ಸೂಚನೆ ಅರಿತ ಕಾರ್ ಚಾಲಕ ಕೂಡಲೇ ತನ್ನ ಕಾರನ್ನು ರಿವರ್ಸ್ ಗೇರ್‌ಗೆ ಹಾಕಿ ಹಿಮ್ಮುಖವಾಗಿ ಚಲಿಸಿದ್ದಾನೆ. ಹೀಗೆ ರೊಡ್ ಡಿವೈಡರ್ ತಲುಪಿದ ಕೂಡಲೇ ಆತ ಕಾರನ್ನು ರಸ್ತೆಯ ಇನ್ನೊಂದು ಕಡೆಗೆ ಚಲಿಸಿ ಆಗುವ ಅನಾಹುತದಿಂದ ಪಾರಾಗಿದ್ದಾರೆ. ಇನ್ನು ಈ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸಂಪೂರ್ಣ ವಿಡಿಯೋ ಸೆರೆಯಾಗಿದೆ.
ಇನ್ನು ಕಾರಿನಲ್ಲಿ ಸೆರೆಯಾದ ವಿಡಿಯೋ ಆಧರಿಸಿ ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಪಾಲ್ಗೊಂಡ ಮೂವರನ್ನು ಸಹ ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್ ತಮ್ಮ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications