ಧ್ರುವ್ ಹೆಲಿಕಾಪ್ಟರ್‌ನಲ್ಲಿ ಪಾಕ್ ನೆಲೆಯ ಮೇಲೆ ಮಿಂಚಿನ ವೇಗದಲ್ಲಿ ಸರ್ಜಿಕಲ್ ದಾಳಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ನುಗ್ಗಿ ಭಯೋತ್ಪಾದನೆ ನೆಲೆಗಳ ಮೇಲೆ ಭಾರತೀಯ ಸೇನೆಯು ನಡೆಸಿರುವ ವ್ಯವಸ್ಥಿತವಾದ ಸರ್ಜಿಕಲ್ ದಾಳಿಯು ಇಡೀ ವಿಶ್ವದ ಗಮನ ಸೆಳೆದಿದೆ. ಭಯೋತ್ಪಾದಕರ ಗುಂಪು ಭಾರತದೊಳಗೆ ನುಸುಳಲು ಸಜ್ಜಾಗಿದೆಯೆಂಬ ನಿಖರ ಮಾಹಿತಿಯ ಬೆನ್ನಲ್ಲೇ ರಾತ್ರೋರಾತ್ರಿ ಶಿಪ್ರ ಗತಿಯ ಸರ್ಜಿಕಲ್ ದಾಳಿಯನ್ನು ಭಾರತೀಯ ಸೇನೆ ನಡೆಸಿತ್ತು.
ಗಡಿ ನಿಯಂತ್ರಣ ರೇಖೆ ದಾಟಿ ಭಾರತವು ಸರ್ಜಿಕಲ್ ದಾಳಿ ನಡೆಸಲು ಇದೇ ಮೊದಲ ಬಾರಿಗೆ ಕ್ಷಣ ಮಾತ್ರದಲ್ಲಿ ಕಾರ್ಯಚರಣೆ ನಡೆಸಬಲ್ಲ ಧ್ರುವ್ ಹಗುರ ಭಾರದ ಯುದ್ಧ ಹೆಲಿಕಾಪ್ಟರ್ ನ್ನು ಬಳಕೆ ಮಾಡಿತ್ತು ಎಂಬುದು ತಿಳಿದು ಬಂದಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ಕೇಂದ್ರಗಳಲ್ಲಿ ಭಾರತೀಯ ಸೇನೆ ನಡೆಸಿರುವ ದಾಳಿಯಲ್ಲಿ 40ರಿಂದ 50 ಉಗ್ರರನ್ನು ಹತ್ಯೆಗೈಯಲಾಗಿದೆ. ಅಲ್ಲದೆ ಭಯೋತ್ಪಾದನೆ ನೆಲೆಯ ಮೇಲೆ ಹೆಚ್ಚಿನ ಹಾನಿಯನ್ನುಂಟು ಮಾಡಲಾಗಿದೆ.

ಸೆಪ್ಟೆಂಬರ್ 28 ಮಧ್ಯ ರಾತ್ರಿ ನಡೆಸಿರುವ ಸರ್ಜಿಕಲ್ ದಾಳಿಯ ವೇಳೆ 150 ಕಮಾಂಡೋಗಳನ್ನು ಐದು ತಂಡಗಳಾಗಿ ವಿಂಗಡಿಸಿ ದಾಳಿ ನಡೆಸಲಾಗಿತ್ತು. ಪರಿಣಾಮ ಗಡಿ ನಿಯಂತ್ರಣ ರೇಖೆಯಾಚೆಗೆ ಏಳು ಉಗ್ರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿತ್ತು.

ದಾಳಿಗಾಗಿ ಪ್ರಪಂಚದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಆಗಲೇ ತನ್ನ ಸಾಮರ್ಥ್ಯವನ್ನು ಮೆರೆದಿರುವ ಧ್ರುವ್ ಹೆಲಿಕಾಪ್ಟರನ್ನು ಭಾರತೀಯ ಸೇನೆ ಬಳಕೆ ಮಾಡಿತ್ತು. ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮೆಟೆಡ್ (ಎಚ್ ಎಎಲ್) ನಿರ್ಮಿಸುತ್ತಿದೆ.

ಜರ್ಮನಿಯ ವ್ಯೋಮಸೇನೆ ತಯಾರಕ ಎಬಿಬಿ (Messerschmitt-Bölkow-Blohm) ನೆರವಿನಿಂದ ಅಭಿವೃದ್ಧಿಪಡಿಸಲಾಗಿರುವ ಧ್ರುವ್ ಹೆಲಿಕಾಪ್ಟರ್ 1992ನೇ ಇಸವಿಯಲ್ಲಿ ತನ್ನ ಮೊದಲ ಹಾರಾಟವನ್ನು ನಡೆಸಿತ್ತು.

ನಾಗರಿಕ ಅಗತ್ಯಗಳಿಗಾಗಿ ನಿರ್ಮಿಸಲಾಗಿರುವ ಎಚ್ ಎಎಲ್ ಧ್ರುವ್ ಹೆಲಿಕಾಪ್ಟರ್, ಯುದ್ಧ ಜೊತೆಗೆ ದುರಂತ ಪೀಡಿತ ಪ್ರದೇಶಗಳಿಗೆ ವೈದ್ಯಕೀಯ ನೆರವು ಒದಗಿಸುವುದು, ಶೀಘ್ರ ಕಾರ್ಯಾಚರಣೆ ಇನ್ನಿತರ ಯೋಜನೆಗಳಿಗಾಗಿ ಬಳಕೆ ಮಾಡಲಾಗುತ್ತಿದೆ.

ಕಳೆದ ವರ್ಷ ನೇಪಾಳದಲ್ಲಿ ಭೂಕಂಪ ಸಂಭವಿಸಿದಾಗಲೂ ಈ ಪರ್ವತ ರಾಷ್ಟ್ರಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಭಾರತೀಯ ಸೇನೆಯು ಧ್ರುವ್ ವಿಮಾನವನ್ನು ರವಾನಿಸಿತ್ತು. ತನ್ಮೂಲಕ ವಿಶ್ವದ ಅತ್ಯುನ್ನತ ಎವರೆಸ್ಟ್ ಪರ್ವತ ಶಿಖರದಲ್ಲಿ ಸ್ನೇಹ ದೂತಕನಾಗಿ ಸೇವೆ ಸಲ್ಲಿಸಿತ್ತು.

ಅತಿ ಎತ್ತರದ ವಾಯು ವಲಯದಲ್ಲಿ ಕಾರ್ಯಾಚರಣೆ ನಡೆಸುವ ಶಕ್ತಿಯಿಂದಾಗಿಯೇ ಇದಕ್ಕೆ ಧ್ರುವ್ ಎಂಬ ಹೆಸರಿಡಲಾಗಿದೆ.

ಇದು ಭೂ ತಲದಿಂದ 5,753 (18,875 ಅಡಿ) ಎತ್ತರದಲ್ಲಿ ಸ್ಥಿತಗೊಂಡಿರುವ ಪ್ರಪಂಚದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುತ್ತದೆ.

ಮಿಲಿಟರಿ, ನಾಗರಿಕ ಹೊರತಾಗಿ ಸಾರಿಗೆ, ರಕ್ಷಣೆ, ಕಡಲಾಚೆಯ ಕಾರ್ಯಚಾರಣೆ, ಗಾಳಿ ಅಂಬುಲೆನ್ಸ್ ಹಾಗೂ ಇನ್ನಿತರ ಪ್ರಮುಖ ಕಾರ್ಯಾಚರಣೆಗಳಲ್ಲಿ ಧ್ರುವ್ ನಿರತವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಕೆಳಗಡೆಯೂ ಕೆಲಸ ನಿರ್ವಹಿಸಿರುವ ಧ್ರುವ್ ಹೆಲಿಕಾಪ್ಟರ್, ಉತ್ತರಾಖಂಡದಲ್ಲಿ ಸಂಭವಿಸಿದ ಪ್ರಳಯ ಪರಿಸ್ಥಿತಿಯಲ್ಲೂ ತನ್ನ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

2004 ಸುನಾಮಿ, 2011 ಸಿಕ್ಕಿಂ ಭೂಕಂಪ, 2010 ಲೇಹ್ ಪ್ರಳಯ, 2013 ಉತ್ತರ ಭಾರತ ಪ್ರಳಯ (ಉತ್ತರಾಖಂಡ), 2014 ಜಮ್ಮು ಮತ್ತು ಕಾಶ್ಮೀರ ಈಗ ನೇಪಾಳ ಪ್ರಬಲ ಭೂಕಂಪದಲ್ಲೂ ಅಕ್ಷರಶ: ಧ್ರುವ ತಾರೆಯಂತೆ ಶೋಭಿಸಿರುವ ಧ್ರುವ್ ಹೆಲಿಕಾಪ್ಟರ್ ತನ್ನ ಸೇವೆಯನ್ನು ಸಲ್ಲಿಸಿದೆ.

ಭಾರತೀಯ ಸೇನೆ, ವಾಯು ಸೇನೆ ಜೊತೆಗೆ ನೌಕಾದಳ, ಕರಾವಳಿ ಕಾವಲು ಪಡೆ, ಗಡಿ ಭದ್ರತಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಧ್ರುವ್ ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಳ್ಳುತ್ತಿದೆ.

ಗಂಟೆಗೆ 295 ಕೀ.ಮೀ.ಗಿಂತಲೂ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಧ್ರುವ್ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸುತ್ತದೆ.

ಸಂಪೂರ್ಣವಾಗಿ ದೇಶೀಯ ವಿನ್ಯಾಸಿತ ಧ್ರುವ್ ಹೆಲಿಕಾಪ್ಟರ್ ಅನ್ನು ಮುಂದುವರಿದ ಹಗುರ ಹೆಲಿಕಾಪ್ಟರ್ (Advanced Light Helicopter) ತಂತ್ರಗಾರಿಕೆಯಲ್ಲಿ ರಚಿಸಲಾಗಿದ್ದು, ಟ್ವಿನ್ ಎಂಜಿನ್, ಬಹು ಕ್ರಿಯಾತ್ಮಕತೆ ಹಾಗೂ ಬಹು ಮಿಷನ್ ಗಳ ಗುರಿಯನ್ನು ಹೊಂದಿದೆ.

5.5 ಟನ್ ಭಾರ ವಿಭಾಗದಲ್ಲಿ ಗುರುತಿಸಿಕೊಂಡಿರುವ ಧ್ರುವ್ ಹೆಲಿಕಾಪ್ಟರ್, ಎಂಕೆ I, ಎಂಕೆ II, ಎಂಕೆ III ಮತ್ತು ಎಂಕೆ IV(Mk I, MK II, MK III & Mk IV) ವೆರಿಯಂಟ್ ಗಳನ್ನು ಹೊಂದಿದೆ.

15.9 ಮೀಟರ್ ಉದ್ದ, 13.2 ಮೀಟರ್ ಅಗಲ ಹಾಗೂ 4.98 ಮೀಟರ್ ಎತ್ತರವನ್ನು ಹೊಂದಿರುವ ಧ್ರುವ್ ಹೆಲಿಕಾಪ್ಟರ್ 640 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಪಾತ್ರ
ಮಿಲಿಟರಿ,
ನಾಗರಿಕ ವಿಐಪಿ ಪಯಣ,
ತುರ್ತು ಪರಿಹಾರ ಕಾರ್ಯಾಚರಣೆ,
ತುರ್ತು ಸೇನಾ ನೆಲೆ ಸ್ಥಾಪನೆ,
ಶೋಧನೆ,
ತರಬೇತಿ

ಶ್..! ಎಚ್ಚರ, ವಿಶ್ವದ 10 ಪ್ರಾಣಾಂತಿಕ ಕದನ ಹೆಲಿಕಾಪ್ಟರ್ ಗಳು ಮುಂದಕ್ಕೆ ಓದಿ


Click it and Unblock the Notifications








