ಐತಿಹಾಸಿಕ ಕ್ಷಣ; ಭಾರತೀಯ ವಾಯುಸೇನೆಗೆ 'ತೇಜಸ್' ಬಲ
ಕಳೆದ 33 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ 'ತೇಜಸ್' ಹಗುರ ಯುದ್ಧ ವಿಮಾನವು ಕೊನೆಗೂ ಭಾರತೀಯ ವಾಯು ಸೇನೆಯನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಬೆಂಗಳೂರು ತಳಹದಿಯ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದೊಂದಿಗೆ ತೇಜಸ್ ಹಗುರ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಅನೇಕ ತಾಂತ್ರಿಕ ದೋಷಗಳು ಮತ್ತು ಕಾರಣಾಂತರಗಳಿಂದಾಗಿ ಎಚ್‌ಎಎಲ್ ತೇಜಸ್ ಹಗುರ ಯುದ್ಧ ವಿಮಾನದ ಕಾಮಗಾರಿಯು ವಿಳಂಬವಾಗಿತ್ತು. ಈಗ ನಿರಂತರ ಸಂಶೋಧನೆಯ ಬಳಿಕ ತೇಜಸ್ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಸಿಂಗಲ್ ಎಂಜಿನ್ ನಿಯಂತ್ರಿತ ಬಹು ಪಾತ್ರಧಾರಿ ವಿಶ್ವದ ಅತಿ ಕಿರಿಯ ಮತ್ತು ಲಘು ಗಾತ್ರದ ಸೂಪರ್ ಸೋನಿಕ್ ಫೈಟರ್ ಜೆಟ್ ಇದಾಗಿದೆ.

ಬೆಂಗಳೂರಿನಲ್ಲಿ ಎಚ್‌ಎಎಲ್ ಕೇಂದ್ರಿಕರಿಸಿ ಕಾರ್ಯಾಚರಣೆ ನಡೆಸಲಿರುವ ತೇಜಸ್ ವಾಯುದಳವು "ಫ್ಲೈಯಿಂಗ್ ಡ್ರಾಗರ್ಸ್" (45 ಸ್ಕ್ವಾರ್ಡನ್) ಎಂದು ಗುರುತಿಸಿಕೊಳ್ಳಲಿದೆ.

ಸ್ವದೇಶಿ ನಿರ್ಮಿತವಾದರೂ ಈಗಲೂ ಅನೇಕ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಲಾಗಿದೆ. ಉದಾಹರಣೆಗೆ ತೇಜಸ್ ಹೃದಯವೇ ಆಗಿರುವ ಜಿಇ ಎಂಜಿನನ್ನು ಆಮದು ಮಾಡಲಾಗಿದೆ.

ಕೊನೆಗೂ 33 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಬಿದ್ದಂತಾಗಿದೆ. ಫ್ಲೈಯಿಂಗ್ ಡ್ರಾಗರ್ಸ್ ವಾಯುತಂಡವು ತೇಜಸ್ ಎಸ್‌ಪಿ-1 ಮತ್ತು ಎಸ್‌ಪಿ-2 ಆವೃತ್ತಿಗಳನ್ನು ನಿರ್ವಹಿಸಲಿದ್ದಾರೆ. ಅಲ್ಲದೆ 2018-2020ರ ವೇಳೆಯಾಗುವಾಗ ವಾಯುದಳವು ಪೂರ್ಣ ಪ್ರಮಾಣಕ್ಕೆ ತಲುಪಲಿದೆ.

ಪ್ರಸಕ್ತ ಆರ್ಥಿಕ ಸಾಲಿನೊಳಗೆ ಮತ್ತಷ್ಟು ಆರು ತೇಜಸ್ ಲಘು ಯುದ್ಧ ವಿಮಾನಗಳನ್ನು ಫ್ಲೈಯಿಂಗ್ ಡ್ರಾಗರ್ಸ್ ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಚುರುಕುಗೊಳಿಸಲಾಗಿದೆ.

ಗ್ರೂಪ್ ಕ್ಯಾಪ್ಟನ್ ಎಂ ರಂಗಚಾರಿ ಎಂಬವರು ಫೈಯಿಂಗ್ ಡ್ರಾಗರ್ಸ್ ವಾಯುತಂಡದ ಮೊದಲ ಕಮಾಡಿಂಗ್ ಆಫೀಸರ್ ಎನಿಸಿಕೊಳ್ಳಲಿದ್ದಾರೆ. ಅವರ ಕೆಳಗಡೆ ಆರಂಭದಲ್ಲಿ ಏಳು ಅಧಿಕಾರಿಗಳು, 42 ಏರ್ ವ್ಯಾರಿಯರ್ಸ್ ಮತ್ತು 20ರಷ್ಟು ನಾನ್ ಕಮಿಷನ್ಡ್ ಆಫೀಸರ್ಸ್ ಗಳು ಇರಲಿದ್ದಾರೆ.

ಡಾ. ಕೋಟಾ ಹರಿನಾರಯಣ ಎಂಬವರು ತೇಜಸ್ ಲಘು ಯುದ್ಧ ವಿಮಾನದ ಪಿತಾಮಹ ಎಂದೆನಿಸಿಕೊಂಡಿದ್ದಾರೆ. ಕೊನೆಗೂ ದಶಕಗಳ ಕಾಲದ ಕಠಿಣ ಪ್ರಯತ್ನಕ್ಕೆ ಫಲ ತಂದಿರುವುದು ಸಂತೋಷವೆನಿಸುತ್ತದೆ ಎಂದವರು ತಿಳಿಸಿದ್ದಾರೆ.

ಏರೋನಾಟಿಕಲ್ಸ್ ಅಭಿವೃದ್ಧಿ ಏಜೆನ್ಸಿ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜಂಟಿ ಜೊತೆಗಾರಿಕೆಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಹಳೆಯದಾದ ಮಿಗ್-21 ಮತ್ತು ಮಿಗ್-23 ಯುದ್ಧ ವಿಮಾನಗಳ ಸ್ಥಾನವನ್ನು ತುಂಬಲಿದೆ.

ಇಸ್ರೇಲ್ ನಿರ್ಮಿತ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಮತ್ತು ಹೆಲ್ಮೆಟ್ ಮೌಂಟೆಡ್ ಡಿಸ್‌ಪ್ಲೇ ಸೈಟ್ (ಎಚ್ಎಂಡಿ) ತೇಜಸ್ ಹಗುರ ಯುದ್ಧ ವಿಮಾನದ ಪ್ರಮುಖ ವೈಶಿಷ್ಟ್ಯವಾಗಿದೆ.

ಅನೇಕ ದಶಕಗಳ ಅಭಿವೃದ್ಧಿಗಳ ಬಳಿಕ ಸೀಮಿತ 120 ತೇಜಸ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಯನ್ನು ಸೇರ್ಪಡೆಗೊಳ್ಳಲಿದೆ. ಇದು ವಾಯುಸೇನೆ ಜೊತೆಗೆ ಭಾರತೀಯ ನಾವಿಕೆ ಪಡೆಯ ಸೇವೆಗೆ ಲಭ್ಯವಾಗಲಿದೆ.

"ತೇಜಸ್" ಎಂಬ ಸಂಸ್ಕೃತ ಪದವನ್ನು 2003ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಾಲ್ ಬಿಹಾರಿ ವಾಜಪೇಯಿ ಸೂಚಿಸಿದ್ದರು. ಇದರರ್ಥ "ಪ್ರಕಾಶಮಾನವಾದ' ಎಂಬುದಾಗಿದೆ.

ಸಿಂಗಲ್ ಸೀಟು, ಸಿಂಗಲ್ ಜೆಟ್ ಎಂಜಿನ್ ಹಾಗೂ ಬಹು ಪಾತ್ರಧಾರಿ ತೇಜಸ್ ವಿಮಾನಕ್ಕೆ ಬಾಲವಿರುವುದಿಲ್ಲ.

ತಾಂತ್ರಿಕತೆಗಳು
- ಸಿಬ್ಬಂದಿ: 1
- ಉದ್ದ: 13.20 ಮೀಟರ್
- ರೆಕ್ಕೆ ಅಗಲ: 8.20 ಮೀಟರ್
- ಎತ್ತರ: 4.40 ಮೀಟರ್
- ಭಾರ: 9.500 ಕೆ.ಜಿ
- ಗರಿಷ್ಠ ವೇಗ: 2205km/h
- ವ್ಯಾಪ್ತಿ: 3000 ಕೀ.ಮೀ.


Click it and Unblock the Notifications








