ISRO... ಏನೀ ವೇಗ! ಮತ್ತೊಂದು ರಾಕೆಟ್ ಉಡಾವಣೆಗೆ ಸಜ್ಜು... ಇದು ದೇಶದ ಮಹತ್ವದ ಯೋಜನೆ
ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನ್ ಯಾನ್ ಕಾರ್ಯಕ್ರಮವನ್ನು ಪರೀಕ್ಷಿಸಲು ಇಸ್ರೋ ಮುಂದಿನ ಅಕ್ಟೋಬರ್‌ನಲ್ಲಿ ರಾಕೆಟ್ ಉಡಾವಣೆ ಮಾಡಲು ನಿರ್ಧರಿಸಿದೆ. ಇದು ಇಸ್ರೋದ (ISRO) ಮಹತ್ವದ ಯೋಜನೆಯಾಗಿದ್ದು, ಮೊದಲ ಹಂತದ ಪ್ರಯೋಗದ ಭಾಗವಾಗಿ ಮುಂದಿನ ತಿಂಗಳು ರಾಕೆಟ್ ಆಕಶದತ್ತ ಮುನ್ನುಗ್ಗಲಿದೆ ಎಂದು ಮೂಲಗಳು ತಿಳಿಸಿವೆ.
ಮಾನವರನ್ನು ಕಳುಹಿಸುವ ಯೋಜನೆಯು ವಿಫಲವಾಗದಂತೆ ನೋಡಿಕೊಳ್ಳಲು ಕೆಲ ಪ್ರಯೋಗಗಳನ್ನು ಕಂಡಿತ ಮಾಡಬೇಕಿದೆ. ಇದಕ್ಕಾಗಿ ಮೊದಲು ಎರಡು ಮಾನವರಹಿತ ಪರೀಕ್ಷಾ ಉಡಾವಣೆಗಳನ್ನು ನಡೆಸಲು ಇಸ್ರೋ ಯೋಜಿಸಿದೆ. ಅಕ್ಟೋಬರ್‌ನಲ್ಲಿ ಮೊದಲ ಪ್ರಯೋಗ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರಯೋಗಗಳು ಹೇಗಿರಲಿವೆ ಎಂಬುದನ್ನು ಈ ಕೆಳಗೆ ನೋಡೋಣ.

ಒಂದರ ಮೇಲೊಂದು ಎಂಬಂತೆ ಇಸ್ರೋ ವಿರಾಮವಿಲ್ಲದೆ ತನ್ನ ಯೋಜನೆಗಳನ್ನು ಮುನ್ನೆಲೆಗೆ ತರುತ್ತಿದೆ. ಇದೀಗ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಮೊದಲ ಪರೀಕ್ಷೆಯಲ್ಲಿ, ರಾಕೆಟ್‌ಗಳನ್ನು ಮಾತ್ರ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಬಳಿಕ ಅವು ಸುರಕ್ಷಿತವಾಗಿ ಭೂಮಿಗೆ ಮರಳುತ್ತವೆಯೇ ಎಂದು ಪರೀಕ್ಷಿಸಲಾಗುತ್ತದೆ.
ಈ ಪರೀಕ್ಷೆಯಲ್ಲಿ ಮಾನವರಿಗೆ ಬೇಕಾದ ಎಲ್ಲಾ ತರಹದ ಉಪಕರಣಗಳಿರುತ್ತವೆ. ಈ ಪ್ರಯೋಗದಲ್ಲಿ ಅವು ಸುರಕ್ಷಿತವಾಗಿ ಭೂಮಿಗೆ ಮರಳುತ್ತಾರೆಯೇ ಎಂದು ಪರೀಕ್ಷಿಸಿ ನಂತರ ಮಾನವ ತರಹದ ರೋಬೋಟ್‌ಗಳನ್ನು ಕಳುಹಿಸಲಾಗುತ್ತದೆ. ಈ ಎರಡು ಪ್ರಯೋಗಳಲ್ಲಿ ಮೊದಲನೇಯದನ್ನು ಇಸ್ರೋ ಮುಂದಿನ ತಿಂಗಳು ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆದರೆ 2024 ರಲ್ಲಿ ಎರಡನೇ ಹಂತದ ಪರೀಕ್ಷೆ ಮತ್ತು 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಖಚಿತವೆಂದೇ ಹೇಳಬಹುದು. ಯೋಜನೆಯ ಪ್ರಕಾರ, ಭೂಮಿಯಿಂದ ಸುಮಾರು 400 ಕಿ.ಮೀ ಎತ್ತರಕ್ಕೆ ಹೋಗಿ, ಮೂರು ದಿನಗಳ ಕಾಲ ಸಂಶೋಧನೆ ನಡೆಸಿ ನಂತರ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗುವುದು ಇಸ್ರೋದ ಮುಖ್ಯ ಉದ್ದೇಶವಾಗಿದೆ.
ಮನುಷ್ಯರು ಬಾಹ್ಯಾಕಾಶಕ್ಕೆ ಹೋದಾಗ ಸುರಕ್ಷಿತವಾಗಿರುವುದು ಸಾಮಾನ್ಯ ವಿಷಯವಲ್ಲ. ಇದಕ್ಕಾಗಿ ಈಗಿರುವ ರಾಕೆಟ್ ವಿನ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ರಾಕೆಟ್ ಉಡಾವಣೆ ವೇಳೆ ಯಾವುದೇ ಸಮಸ್ಯೆ ಎದುರಾದರೆ ತಕ್ಷಣವೇ ಪಾರಾಗಲು ಪ್ರತ್ಯೇಕ ಎಸ್ಕೇಪ್ ಕ್ಯಾಪ್ಸೂಲ್ ನೀಡಲಾಗಿದೆ. ಅಲ್ಲದೆ, ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿರುವಾಗ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ.

ನಿಜಕ್ಕೆ ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಯಶಸ್ವಿಯ ನಂತರ ವಿಶ್ವ ಬಾಹ್ಯಾಕಾಶ ವಿಜ್ಞಾನಿಗಳ ದೃಷ್ಟಿಯೆಲ್ಲಾ ಇಸ್ರೋ ಮೇಲಿದೆ. ಏಕೆಂದರೆ ಈ ಗಗನ್ ಯಾನ್ ಯೋಜನೆಯಲ್ಲಿ ಭಾರತವು ಯಶಸ್ಸನ್ನು ಸಾಧಿಸಿದರೆ, ಇಸ್ರೋ ವಿಶ್ವದ ಇತರ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಂತೆ ವಿಶ್ವದ ಅತ್ಯುತ್ತಮ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಲಿದೆ. ಹಾಗಾಗಿಯೇ ಈ ಯೋಜನೆಗಾಗಿ ಕೇಂದ್ರ ಸರ್ಕಾರ ಸುಮಾರು 9000 ಕೋಟಿ ರೂ. ವೆಚ್ಚಿಸಲು ಸಿದ್ಧವಾಗಿದೆ.
ಇಸ್ರೋ ಆಟ ಈಗಷ್ಟೇ ಶುರುವಾಗಿದೆ: ಚಂದ್ರಯಾನ-3 ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕಾಗಿ ಪರೀಕ್ಷೆ ನಡೆಯುತ್ತಿದೆ. ಪ್ರಸ್ತುತ ಮಲಗಿರುವ ಲ್ಯಾಂಡರ್ ಮತ್ತು ರೋವರ್ ಶೀಘ್ರದಲ್ಲೇ ಎಚ್ಚರಗೊಂಡು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರೀಕ್ಷೆಯಿದೆ. ಈ ಮಧ್ಯೆ ಆದಿತ್ಯ L1 ಬಾಹ್ಯಾಕಾಶ ನೌಕೆಯು ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿದೆ.

ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿ ಸಂಚರಿಸಲಿದ್ದು, ಸೂರ್ಯನನ್ನು ಅಧ್ಯಯನ ಮಾಡಿ ದತ್ತಾಂಶವನ್ನು ಭೂಮಿಗೆ ಕಳುಹಿಸಲಿದೆ. ಈ ಪ್ರವಾಸವನ್ನು ಸುಮಾರು 4 ತಿಂಗಳಿನಿಂದ ಯೋಜಿಸಲಾಗಿದೆ. ಈ ನೌಕೆಯು ಮುಂದಿನ ಜನವರಿ ವೇಳೆಗೆ ಎಲ್ 1 ಕಕ್ಷೆಯನ್ನು ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ತನ್ನ ಪರಿಶೋಧನಾ ಕಾರ್ಯವನ್ನು ಪ್ರಾರಂಭಿಸುತ್ತದೆ. ಇವುಗಳ ಜೊತೆಗೆ ಗಗನ್ ಯಾನ್ ಕೂಡ ಯಶಸ್ವಿಯಾಗಲಿ ಎಂಬುದು ಡ್ರೈವ್‌ಸ್ಪಾರ್ಕ್ ಆಶಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications