ವಿಕ್ರಾಂತ್ ರೋಣ ಬೆಡಗಿಗೆ ಎಲೆಕ್ಟ್ರಿಕ್ ಕಾರೆಂದ್ರೆ ಪ್ರೀತಿ.. ಐಷಾರಾಮಿ BMW i7 ಖರೀದಿ, ಇಷ್ಟೊಂದು ರೇಟಾ?
ಶ್ರೀಲಂಕಾ ಮೂಲದ ಬಾಲಿವುಡ್ ನಟಿ, ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) ಅನೇಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸುದೀಪ್ ನಟನೆಯ ಕನ್ನಡದ ವಿಕ್ರಾಂತ್ ರೋಣ ಚಿತ್ರದ 'ರಾರಾ ರಕ್ಕಮ್ಮ..' ಹಾಡಿಗೂ ಹೆಜ್ಜೆ ಹಾಕುವ ಮೂಲಕ ಇಲ್ಲಿಯು ಚಿರಪರಿಚಿತರಾಗಿದ್ದಾರೆ.
ನಟನೆಯ ಹೊರತಾಗಿ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ತನ್ನ ಫಿಟ್‌ನೆಸ್ ಹಾಗೂ ದುಬಾರಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುವ ಮೂಲಕವು ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ, ಜಾಕ್ವೆಲಿನ್ ಹೊಚ್ಚ ಹೊಸ ಬಿಎಂಡಬ್ಲ್ಯೂ ಐ7 (BMW i7) ಎಲೆಕ್ಟ್ರಿಕ್ ಸೆಡಾನ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ಕಾರು, ಬರೋಬ್ಬರಿ 2 ಕೋಟಿ ರೂಪಾಯಿ ಬೆಲೆಯನ್ನು ಹೊಂದಿದೆ. ಇತ್ತೀಚೆಗೆ, ಜಾಕ್ವೆಲಿನ್ ಫೆರ್ನಾಂಡಿಸ್ ಇದೇ ಕಾರಿನಲ್ಲಿ ಕಾಣಿಸಿಕೊಂಡಿದ್ದರು.

'ಐ7' ಎಲೆಕ್ಟ್ರಿಕ್ ಸೆಡಾನ್, ದೇಶೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯೂ ಕಂಪನಿ ಮಾರಾಟ ಮಾಡುವ ಪ್ರಮುಖ ಕಾರುಗಳಲ್ಲಿ ಒಂದಾಗಿದೆ. 101.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಎರಡು ಎಲೆಕ್ಟ್ರಿಕ್ ಮೋಟಾರ್ ನೆರವಿನಿಂದ ಸಂಚರಿಸುತ್ತದೆ. 544 hp ಗರಿಷ್ಠ ಪವರ್ ಹಾಗೂ 745 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಬಿಎಂಡಬ್ಲ್ಯೂ ಐ7 ಎಲೆಕ್ಟ್ರಿಕ್ ಸೆಡಾನ್, ಸಂಪೂರ್ಣ ಚಾರ್ಜಿನಲ್ಲಿ 550 kmಕ್ಕಿಂತ ಹೆಚ್ಚು ರೇಂಜ್ ನೀಡಲಿದ್ದು, 239 km/h ಟಾಪ್ ಸ್ವೀಡ್ ಹೊಂದಿದೆ. ಕೇವಲ 4.7 ಸೆಕೆಂಡುಗಳಲ್ಲಿ 0 ಯಿಂದ 100 km/h ವೇಗವನ್ನು ಪಡೆಯಲಿದೆ. 195 kW ಚಾರ್ಜರ್ ಬಳಕೆಯಲ್ಲಿ ಈ ಕಾರಿನ ಬ್ಯಾಟರಿ ಪ್ಯಾಕ್ ಶೇಕಡ 10 ರಿಂದ 80% ಚಾರ್ಜ್ ಆಗಲು 34 ನಿಮಿಷ ತೆಗೆದುಕೊಳ್ಳುತ್ತದೆ.
ಬಿಎಂಡಬ್ಲ್ಯೂ ಐ7 ಎಲೆಕ್ಟ್ರಿಕ್ ಸೆಡಾನ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹಿಂಬದಿ ಸೀಟಿನ ಪ್ರಯಾಣಿಕರಿಗಾಗಿ 31.3 - ಇಂಚಿನ 8ಕೆ ಟಚ್‌ಸ್ಕ್ರೀನ್ ಡಿಸ್ಪ್ಲೇ, 12.3 - ಇಂಚಿನ ಕರ್ವ್ಡ್ ಡಿಜಿಟಲ್ ಕಾಕ್‌ಪಿಟ್, 14.9 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಅಂಬಿಯೆಂಟ್ ಲೈಟಿಂಗ್ ಹೊಂದಿದೆ. ಜೊತೆಗೆ ಪ್ರಯಾಣಿಕರು, ಅಮೆಜಾನ್ ಫೈರ್ ಟಿವಿ ಮೂಲಕ ಮನರಂಜನಾ ವೀಡಿಯೊಗಳನ್ನು ವೀಕ್ಷಿಸಬಹುದು.
ನಟಿ ಜಾಕ್ವೆಲಿನ್ ಫರ್ನಾಂಡೀಸ್, ಬಿಎಂಡಬ್ಲ್ಯೂ ಐ7 ಎಲೆಕ್ಟ್ರಿಕ್ ಸೆಡಾನ್ ಮಾತ್ರವಲ್ಲದೆ, ದುಬಾರಿ ಬೆಲೆಯ ಹಮ್ಮರ್ ಎಚ್2, ಮರ್ಸಿಡಿಸ್ -ಬೆಂಜ್ ಮೇಬಾಕ್ ಎಸ್500, ರೇಂಜ್ ರೋವರ್ ವೋಗ್, ಬಿಎಂಡಬ್ಲ್ಯೂ 525ಡಿ ಹಾಗೂ ಜೀಪ್ ಕಂಪಾಸ್ ಕಾರನ್ನು ಹೊಂದಿದ್ದಾರೆ. ಪ್ರಸ್ತುತ ಭಾರತದಲ್ಲಿ ಹಮ್ಮರ್ ಎಚ್2 ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಮೊದಲು ರೂ.75 ಲಕ್ಷ ಬೆಲೆಗೆ ಐದು ಆಸನ ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಸಿಗುತ್ತಿತ್ತು.
ಮರ್ಸಿಡಿಸ್ -ಬೆಂಜ್ ಮೇಬಾಕ್ ಎಸ್500 ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಅದು ಮಾರಾಟವಾಗುವಾಗ ರೂ.1.86 ಕೋಟಿ ಬೆಲೆಗೆ ಖರೀದಿಗೆ ದೊರೆಯುತ್ತಿತ್ತು. ಪೆಟ್ರೋಲ್ ಎಂಜಿನ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿದ್ದ ಈ ಕಾರು, 7.81 kmpl ಮೈಲೇಜ್ ನೀಡುತ್ತಿತ್ತು. ನ್ಯಾವಿಗೇಷನ್ ಡ್ರೈವಿಂಗ್ ಸಿಸ್ಟಮ್, ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿತ್ತು.
ಭಾರತದಲ್ಲಿ ಬಿಎಂಡಬ್ಲ್ಯೂ 525ಡಿ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ, ರೂ.45 ಲಕ್ಷ ಬೆಲೆಗೆ ಈ ಕಾರನ್ನು ಮಾರಾಟ ಮಾಡಲಾಗುತ್ತಿತ್ತು. ಇದು, ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 218 BHP ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದಿತ್ತು. ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿದ್ದ ಈ ಕಾರು, 16.73 kmpl ಮೈಲೇಜ್ ನೀಡುತ್ತಿತ್ತು.
ಜೀಪ್ ಕಂಪಾಸ್ ರೂ.21.73 ಲಕ್ಷದಿಂದ ರೂ.32.07 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 172 PS ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್/ 9-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. 14.9 - 17.1 kmpl ಮೈಲೇಜ್ ಕೊಡುತ್ತದೆ.


Click it and Unblock the Notifications