1.30 ಕೋಟಿ ಕೊಟ್ಟು ಆನೆಗಾತ್ರದ ಟೊಯೊಟಾ ಕಾರು ತೆಗೆದುಕೊಂಡ ನಟ ರಿಷಬ್ ಶೆಟ್ಟಿ: ಇದು ರಸ್ತೆ ಮೇಲಿನ ಅರಮನೆ!
ಭಾರತೀಯ ಸಿನಿಮಾ ರಂಗದಲ್ಲಿ ರಿಷಬ್ ಶೆಟ್ಟಿ (Rishab Shetty) ಬಹುಮುಖ ಪ್ರತಿಭೆಯಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 'ಉಳಿದವರು ಕಂಡಂತೆ' ಹಾಗೂ 'ಬೆಲ್ ಬಾಟಮ್' ಚಿತ್ರಗಳು ರಿಷಬ್ ಶೆಟ್ಟಿ ಅವರಿಗೆ ಹೆಚ್ಚು ಜನಮನ್ನಣೆ ತಂದುಕೊಟ್ಟವು. ಅವರು ನಿರ್ದೇಶಿಸಿದ್ದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ರಿಷಬ್ ಶೆಟ್ಟಿ ಅವರೇ ಆಕ್ಷನ್ ಕಟ್ ಹೇಳಿ, ನಟಿಸಿದ್ದ 'ಕಾಂತಾರ' ಕನ್ನಡ ಸೇರಿ ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿತ್ತು. ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿಯೂ ಮಾಡಿತ್ತು. ಈಗ 'ಕಾಂತಾರ' ಪ್ರೀಕ್ವೆಲ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸದ್ಯ ನಟ ರಿಷಬ್ ಶೆಟ್ಟಿ ಹೊಚ್ಚ ಹೊಸ ಟೊಯೊಟಾ ವೆಲ್‌ಫೈರ್ (Toyota Vellfire) ಕಾರನ್ನು ಖರೀದಿ ಮಾಡಿದ್ದಾರೆ. ತಮ್ಮ ಕುಟುಂಬದೊಂದಿಗೆ ಈ ನೂತನ ಕಾರನ್ನು ಡೆಲಿವರಿಯೂ ತೆಗೆದುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿವೆ.

ಟೊಯೊಟಾ ವೆಲ್‌ಫೈರ್ ವಿಶೇಷತೆಗಳೇನು: ಇದೊಂದು ಎಂಪಿವಿ (ಮಲ್ಟಿ-ಪರ್ಪಸ್ ವೆಹಿಕಲ್) ಆಗಿದೆ. ದುಬಾರಿ ಬೆಲೆಯನ್ನು ಹೊಂದಿರುವ ಈ ಕಾರು, ರೂ.1.22 ಕೋಟಿಯಿಂದ ರೂ.1.32 ಕೋಟಿ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಹೆಚ್ಐ (Hi) ಹಾಗೂ ವಿಐಪಿ - ಎಕ್ಸಿಕ್ಯೂಟಿವ್ (VIP - Executive Lounge) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಪಡೆದಿದೆ.
ಈ ಕಾರು ಹೊರಭಾಗದಲ್ಲಿ ನೋಡುಗರ ಕಣ್ಮನ ಸೆಳೆಯುವ ವಿನ್ಯಾಸವನ್ನು ಹೊಂದಿದೆ. ಬ್ಲ್ಯಾಕ್ ಮತ್ತು ಪ್ಲಾಟಿನಂ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ. ಇದರಲ್ಲಿ 7 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 148 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ ಟೊಯೊಟಾ ವೆಲ್‌ಫೈರ್ ಎಂಪಿವಿ ಶಕ್ತಿಯುತ ಪವರ್‌ಟ್ರೇನ್‌ನ್ನು ಹೊಂದಿದೆ. 2.5-ಲೀಟರ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್‌ನ್ನು ಪಡೆದಿದೆ. 193 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 240 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೊಸ ಟೊಯೊಟಾ ವೆಲ್‌ಫೈರ್ ಎಂಪಿವಿ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 14-ಕಲರ್ ಆಂಬಿಯೆಂಟ್ ಲೈಟಿಂಗ್, 8-ವೇ ಚಾಲಿತ ಡ್ರೈವರ್ ಸೀಟ್, 15-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಡುಯಲ್-ಪ್ಯಾನಲ್ ಸನ್‌ರೂಫ್‌ನ್ನು ಒಳಗೊಂಡಿದೆ.
ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಲೇನ್-ಕೀಪ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಹಲವು ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ನೂತನ ಟೊಯೊಟಾ ವೆಲ್‌ಫೈರ್ ಎಂಪಿವಿಗೆ ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ.
ಇನ್ನು, ನಟ ರಿಷಬ್ ಶೆಟ್ಟಿ ಅವರು, ಆಡಿ ಕ್ಯೂ7 (Audi Q7) ಕಾರಿನ ಮಾಲೀಕರು ಆಗಿದ್ದಾರೆ. ಇದು ರೂ.88.70 ಲಕ್ಷದಿಂದ ರೂ.97.85 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 3-ಲೀಟರ್ ವಿ6 ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








