Karnataka: ಶಾಕಿಂಗ್.. 2023ರಲ್ಲಿ ಅಪಘಾತದಿಂದ ಪ್ರತಿದಿನ 34 ಜನ ಸಾವು, ಸುರಕ್ಷಿತ ಚಾಲನೆಗೆ ಏನು ಮಾಡಬೇಕು?
ಕಳೆದ ವರ್ಷ ಕರ್ನಾಟಕ (Karnataka)ದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದ್ದಾರೆ. ಪ್ರತಿದಿನ 34 ಮಂದಿ ಮೃತಪಟ್ಟಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದ್ದು, ಬೆಂಗಳೂರು ನಗರದಲ್ಲಿ ಅತಿಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಸಂಚಾರಿ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ತಮ್ಮ 'ಎಕ್ಸ್' ಖಾತೆಯಲ್ಲಿ 2023ರ ರಸ್ತೆ ಅಪಘಾತಗಳ ಕುರಿತ ಅಂಕಿಅಂಶಗಳ ವಿವರವನ್ನು ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ಪ್ರತಿದಿನ 34 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮಾರಣಾಂತಿಕ ಅಪಘಾತಗಳ ಪ್ರಮಾಣ ಶೇಕಡ 5% ಅಧಿಕಗೊಂಡಿದೆ. ಅಜಾಗರೂಕ ಚಾಲನೆ, ಉತ್ತಮ ಚಾಲನಾ ಕೌಶಲ್ಯಗಳ ಕೊರತೆ, ಹದಗೆಟ್ಟ ರಸ್ತೆಗಳಿಂದ ಹೆಚ್ಚಿನ ಅಪಘಾತವಾಗಿವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 2023ರಲ್ಲಿ ಒಟ್ಟು 43,440 ಅಪಘಾತಗಳು ಸಂಭವಿಸಿವೆ. 12,327 ಮಂದಿ ಪ್ರಾಣ ಕಳೆದುಕೊಂಡಿದ್ದು, 52,531 ಜನ ಗಾಯಕೊಂಡಿದ್ದಾರೆ. ಬೆಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯ 4,974 ಅಪಘಾತ ಪ್ರಕರಣಗಳು ದಾಖಲಾಗಿವೆ. 915 ಜನರು ಜೀವ ಕಳೆದುಕೊಂಡಿದ್ದು, 4,164 ಮಂದಿಗೆ ಗಾಯಗಳಾಗಿವೆ. ತುಮಕೂರು ಜಿಲ್ಲೆಯಲ್ಲಿಯೂ 2,601 ಅಪಘಾತಗಳಾಗಿವೆ. 783 ಮಂದಿ ಮೃತಪಟ್ಟಿದ್ದು, 2895 ಮಂದಿ ಗಾಯಾಳುಗಳಾಗಿದ್ದಾರೆ.
ಬೆಂಗಳೂರು ಜಿಲ್ಲೆಯಲ್ಲಿ 2,451 ಅಪಘಾತ ಪ್ರಕರಣಗಳು ವರದಿಯಾಗಿದ್ದು, 694 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 2,546 ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 2,160 ಅಪಘಾತಗಳು ದಾಖಲಾಗಿದ್ದು, 515 ಮಂದಿ ಪ್ರಾಣ ಬಿಟ್ಟಿದ್ದು, 2,620 ಜನರು ಗಾಯಾಳುಗಳಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ 2,138 ಅಪಘಾತಗಳಾಗಿವೆ. ಒಟ್ಟು 502 ಸಾವನ್ನಪ್ಪಿದ್ದು, 2,272 ಮಂದಿಗೆ ಗಾಯಗಳಾಗಿವೆ.

ಮೈಸೂರು ಜಿಲ್ಲೆಯಲ್ಲಿ 1,736 ಅಪಘಾತ ಪ್ರಕರಣಗಳು ದಾಖಲಾಗಿವೆ. 472 ಮಂದಿ ಪ್ರಾಣ ಕಳೆದುಕೊಂಡಿದ್ದು, 1,982 ಮಂದಿ ಗಾಯಗೊಂಡಿದ್ದಾರೆ. ಮೈಸೂರು ನಗರದಲ್ಲಿ 953 ಅಪಘಾತಗಳು ವರದಿಯಾಗಿದ್ದು, 168 ಜನರು ಮೃತಪಟ್ಟಿದ್ದಾರೆ. 992 ಜನರಿಗೆ ಗಾಯಗಳಾಗಿವೆ. ರಾಮನಗರ ಜಿಲ್ಲೆಯಲ್ಲಿ 1627 ಅಪಘಾತ ಪ್ರಕರಣಗಳು ವರದಿಯಾಗಿದ್ದು, 421 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಕೆಜಿಎಫ್ ಹಾಗೂ ಕೊಡಗಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ವಾಹನ ಚಲಾಯಿಸುವಾಗ ನೆನಪಿನಲ್ಲಿಡಬೇಕಾದ ಅಂಶಗಳಿವು: ಹೆದ್ದಾರಿಗಳಲ್ಲಿ ಸಂಬಂಧಪಟ್ಟ ಇಲಾಖೆ ನಿಗದಿಪಡಿಸಿದ ವೇಗ ಮಿತಿಯಲ್ಲಿ ವಾಹನಗಳನ್ನು ಚಲಾಯಿಸಿ. ರಸ್ತೆಯಲ್ಲಿ ಬೈಸಿಕಲ್, ಬೈಕ್ ಮತ್ತು ಕಾರುಗಳನ್ನು ಓಡಿಸುವ ಮುನ್ನ ಯಾವಾಗಲೂ ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿದಂತೆ ಇತರೆ ಸುರಕ್ಷತಾ ಸಾಧನಗಳನ್ನು ಉಪಯೋಗ ಮಾಡುವುದನ್ನು ಮರೆಯದಿರಿ. ಇದು ನಿಮ್ಮ ಜೀವವನ್ನು ಉಳಿಸುತ್ತದೆ.
ಮದ್ಯಪಾನ ಮಾಡಿ ಯಾವತ್ತು ವಾಹನಗಳನ್ನು ಓಡಿಸಬೇಡಿ. ಇದರಿಂದ ನಿಮ್ಮ ಗಮನವನ್ನು ರಸ್ತೆಯ ಮೇಲೆ ಕೇಂದ್ರೀಕರಿಸಲು ಸಾದ್ಯವಾಗುವುದಿಲ್ಲ. ಚಾಲನೆ ಮಾಡುವಾಗ ಮೊಬೈಲ್ ಫೋನ್ ಅಥವಾ ಇಯರ್ ಫೋನ್ ಅನ್ನು ಎಂದಿಗೂ ಬಳಸಬೇಡಿ. ಜೊತೆಗೆ ರಸ್ತೆಗೆ ವಾಹನಗಳನ್ನು ತರುವ ಮೊದಲು ಸಂಚಾರಿ ಸುರಕ್ಷತೆ ನಿಯಮಗಳ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಿ. ಇದರಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications