Siddaramaiah: ಸರ್ಕಾರಕ್ಕೆ 100 ದಿನ, ಮಂತ್ರಿಗಳಿಗೆ ದುಬಾರಿ ಬೆಲೆಯ ಟೊಯೊಟಾ ಇನ್ನೋವಾ ಗಿಫ್ಟ್!.. ವಿಶೇಷತೆಗಳೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ತನ್ನ ಐದು ಗ್ಯಾರಂಟಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹೊಂದಿಸಲು ಹೆಣಗಾಡುತ್ತಿದೆ. ಆದರೆ, ಸಂಪುಟ ಸಚಿವರ ಓಡಾಟಕ್ಕೆ ಹೊಚ್ಚ ಹೊಸ ಕಾರುಗಳನ್ನು ನೀಡಲು ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ.
ಸರಿ ಸುಮಾರು 9.9 ಕೋಟಿ ರೂಪಾಯಿ ವೆಚ್ಚದಲ್ಲಿ 33 ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಹೈಬ್ರಿಡ್ ಎಂಪಿವಿಗಳನ್ನು ಖರೀದಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಇತ್ತೀಚೆಗೆ, 100 ದಿನ ಪೂರೈಸಿದ ಸಿಎಂ ಸಿದ್ದರಾಮಯ್ಯ ಸರ್ಕಾರವು ಸಚಿವರಿಗೆ ವಿಶೇಷ ಉಡುಗೊರೆಯಾಗಿ ಈ ಕಾರುಗಳನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಹೊಸ ಕಾರುಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಮೂರು ತಿಂಗಳ ನಂತರ ನೂತನ ಕಾರುಗಳನ್ನು ಖರೀದಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಮಂತ್ರಿಗಳಿಗೆ ಕಾರುಗಳನ್ನು ಕೊಂಡುಕೊಳ್ಳಲು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯೂ ಹಣಕಾಸು ಇಲಾಖೆಯ ಅನುಮತಿ ಕೋರಿತ್ತು.
ಸಿಎಂ ಸಿದ್ದರಾಮಯ್ಯ ಅನುಮತಿಯೊಂದಿಗೆ 33 ಕಾರುಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದ್ದು, ಪ್ರತಿಯೊಂದಕ್ಕೆ 30 ಲಕ್ಷದಂತೆ 9.9 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 1 ತಿಂಗಳೊಳಗೆ ಮಂತ್ರಿಗಳು ಹೊಸ ಕಾರುಗಳನ್ನು ಪಡೆಯಲಿದ್ದಾರೆ. ಇನ್ನೋವಾ ಹೈಕ್ರಾಸ್ ಎಂಪಿವಿ ಕಾಯುವಿಕೆ ಅವಧಿ ಹೆಚ್ಚಿದೆ. ಆದರೆ, ಸರ್ಕಾರವೇ ನೇರವಾಗಿ ಖರೀದಿಸುತ್ತಿರವುದರಿಂದ ಅದು ಕಡಿಮೆಯಾಗುವ ನೀರಿಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಚಿವರಿಗೆ ಇಷ್ಟೊಂದು ಭಾರೀ ಮೊತ್ತದಲ್ಲಿ ಕಾರುಗಳನ್ನು ಕೊಂಡುಕೊಳ್ಳುತ್ತಿರುದಕ್ಕೆ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸರ್ಕಾರ ಹೊಸ ಕಾರು ಖರೀದಿಸುತ್ತಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 'ಅದರಲ್ಲಿ ತಪ್ಪೇನಿದೆ. ಸಚಿವರ ಸುರಕ್ಷತೆ ಮುಖ್ಯ. ಅವರು, ದೂರ ಪ್ರಯಾಣ ಮಾಡಬೇಕಾಗಿರುತ್ತದೆ. ಇತರೆ ರಾಜ್ಯಗಳಂತೆ ನಮ್ಮಲ್ಲಿ ಯಾವುದೇ ಚಾರ್ಟರ್ಡ್ ಫ್ಲೈಟ್ ಮತ್ತು ಹೆಲಿಕಾಪ್ಟರ್‌ಗಳಿಲ್ಲ' ಎಂದು ಹೇಳಿದ್ದಾರೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ರೂ.18.82 ಲಕ್ಷದಿಂದ ರೂ.30.26 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಇದು, ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರೆಯಲಿದ್ದು, ಇದರ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 172 bhp ಪವರ್, 205 Nm ಪೀಕ್ ಟಾರ್ಕ್ ಹೊರಹಾಕುತ್ತದೆ. CVT ಗೇರ್ ಬಾಕ್ಸ್ ಪಡೆದಿದೆ.
ಮತ್ತೊಂದು, 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ & ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 184.8 bhp ಪವರ್, 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 21 kmpl ಮೈಲೇಜ್ ನೀಡುತ್ತದೆ. 7 - 8 ಆಸನ ವ್ಯವಸ್ಥೆಯೊಂದಿರುವ ಕಾರು, 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್, ಫೋನ್ ಚಾರ್ಜಿಂಗ್ ಸೇರಿದಂತೆ ಅತ್ಯಾಕರ್ಷಕ ಫೀಚರ್ಸ್ ಒಳಗೊಂಡಿದೆ.
ಕರ್ನಾಟಕದ ಬಿಡದಿಯ ಟೊಯೊಟಾ ಘಟಕದಲ್ಲಿ ತಯಾರಾಗುವ ಇನ್ನೋವಾ ಹೈಕ್ರಾಸ್ ಎಂಪಿವಿ, ಸುರಕ್ಷತೆ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್) ಒಳಗೊಂಡಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications