Karnataka New Airport: ತುಮಕೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಗುಡ್ ನ್ಯೂಸ್!
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Kempegowda International Airport) ಮೂಲಕ ದೇಶ, ವಿದೇಶಗಳಿಗೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಏರ್‌ಪೋರ್ಟ್ ಮೇಲೆ ಒತ್ತಡ ಕಡಿಮೆ ಮಾಡಲು ತುಮಕೂರು (Tumakuru) ಸಮೀಪ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧವಾಗುತ್ತಿರುವಂತೆ ತೋರುತ್ತಿದೆ.
ತುಮಕೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, 'ಕರ್ನಾಟಕದಲ್ಲಿ ಮತ್ತೊಂದು ಅಂತರರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತುಮಕೂರು, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ನಡುವೆ 8000 ಎಕರೆ ಜಮೀನು ಗುರುತಿಸಲಾಗಿದ್ದು, ಕೆಐಎಡಿಬಿ (ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್ಮೆಂಟ್ ಬೋರ್ಡ್)ಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಐಎಡಿಬಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ' ಎಂದು ಹೇಳಿದ್ದಾರೆ.

'ದೇಶದ ಮೆಟ್ರೊಪಾಲಿಟನ್ ಸಿಟಿಗಳಲ್ಲಿ 2 ವಿಮಾನ ನಿಲ್ದಾಣಗಳಿವೆ. ಆದರೆ, ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ರನ್ ವೇ ಇದ್ದರೂ ವಾರ್ಷಿಕ 1 ಕೋಟಿಗೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದು, ಅಲ್ಲಿ ಹೆಚ್ವಿನ ಒತ್ತಡವಿದೆ. ಅದನ್ನು ಕಡಿಮೆಗೊಳಿಸಲು ಎರಡನೇ ವಿಮಾನ ನಿಲ್ದಾಣದ ಅಗತ್ಯವಿದೆ' ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತುಮಕೂರು - ಚಿತ್ರದುರ್ಗ ನಡುವೆ ಸ್ಥಳ ಹುಡುಕಾಟ ಕೆಲಸಗಳು ಪ್ರಾರಂಭವಾಗಿವೆ ಎಂದು ಈ ಹಿಂದೆ ವರದಿಯಾಗಿತ್ತು. ಕಳೆದ ತಿಂಗಳ ಆರಂಭದಲ್ಲಿ ಆ ಕುರಿತು ಪ್ರತಿಕ್ರಿಯೆ ನೀಡಿದ್ದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು, ಹೊಸ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದರು.

ತುಮಕೂರಿನಲ್ಲಿ ವಿಮಾನ ನಿಲ್ದಾಣ ಏಕೆ?: ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಮಾರ್ಗಸೂಚಿಗಳ ಪ್ರಕಾರ, ಪ್ರಸ್ತುತ ವಿಮಾನ ನಿಲ್ದಾಣವಿರುವ 150 ಕಿಲೋಮೀಟರ್ ಅಂತರದಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ಸ್ಥಾಪನೆಯನ್ನು ಅನುಮತಿಸಲಾಗುವುದಿಲ್ಲ. ಆಗೊಮ್ಮೆ, ಆ ಅಂತರದೊಳಗೆ 2ನೇ ವಿಮಾನ ನಿಲ್ದಾಣವನ್ನು ನಿರ್ಮಿಸಿದರೆ, ಎರಡು ವಿಮಾನ ನಿಲ್ದಾಣಗಳ ನಡುವೆ ಏರ್ ಟ್ರಾಫಿಕ್ ಸೇರಿದಂತೆ ಹಲವು ತೊಂದರೆಗಳು ಬರುತ್ತಿವೆ.
ಇಂತಹ ತೊಂದರೆಗಳನ್ನು ನಿಭಾಯಿಸಿ, ಬೆಂಗಳೂರು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ಸಲುವಾಗಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತುಮಕೂರು ಸೂಕ್ತವಾದ ಸ್ಥಳವೆಂದು ಹೇಳಬಹುದು. ಮೇಲಾಗಿ ಬೆಂಗಳೂರಿನಿಂದ ತುಮಕೂರಿಗೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ ಈ ವಿಮಾನ ನಿಲ್ದಾಣ ನಿರ್ಮಾಣದಿಂದ ಕೈಗಾರಿಕೆಯೂ ಬೆಳವಣಿಗೆಯಾಗಿ, ಒಂದಷ್ಟು ಮಂದಿಗೆ ಉದ್ಯೋಗ ಸಿಗುತ್ತದೆ.
ರಾಜ್ಯದಲ್ಲಿ ವಿಮಾನ ನಿಲ್ದಾಣಗಳು ಎಷ್ಟರಮಟ್ಟಿಗೆ ವೇಗವಾಗಿ ಪ್ರಗತಿಯಾಗುತ್ತಿವೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಕೆಲವೇ ತಿಂಗಳ ಹಿಂದೆ, 'ಸ್ಟಾರ್ ಏರ್' ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ, ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೆ ವಿಮಾನ ಸೇವೆಯನ್ನು ಶುರು ಮಾಡಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಹೆಚ್ಚಿನ ಸಹಾಯವಾಗುತ್ತಿದೆ. ಇಲ್ಲಿ ಬೋಯಿಂಗ್ 737 ಹಾಗೂ ಏರ್‌ಬಸ್ A320ನಂತಹ ದೊಡ್ಡ-ದೊಡ್ಡ ವಿಮಾನಗಳನ್ನು ಇಳಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications