Traffic Fine: ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಕಟ್ಟಲು 50% ಡಿಸ್ಕೌಂಟ್, ಕರ್ನಾಟಕ ಸರ್ಕಾರ ಆದೇಶ
ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡದ ಮೊತ್ತದಲ್ಲಿ ಶೇಕಡ 50% (Traffic Fine Discount) ರಿಯಾಯಿತಿ ಕೊಟ್ಟು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆಯೂ ಇಂತಹ ಕ್ರಮವನ್ನು ಅನುಸರಿಸಿ, ದೊಡ್ಡಮಟ್ಟದಲ್ಲಿ ಫೈನ್ ಸಂಗ್ರಹಿಸಲಾಗಿದ್ದು, ಹಲವು ವಾಹನ ಸವಾರರಿಗೆ ಭಾರೀ ಅನುಕೂಲವಾಗಿತ್ತು.
ಪೋಲಿಸ್ ಇಲಾಖೆ ಸಂಚಾರಿ ನಿಯಮ ಉಲ್ಲಂಘನೆಗೆ ಇ-ಚಲನ್ ಮೂಲಕ ವಿಧಿಸಿರುವ ದಂಡದ ಮೊತ್ತದಲ್ಲಿ ವಾಹನ ಸವಾರರಿಗೆ ರಿಯಾಯಿತಿ ನೀಡಿ, ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್.ಪುಷ್ಪ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 9ರ ತನಕ ಡಿಸ್ಕೌಂಟ್ ಮೊತ್ತದಲ್ಲಿ ಫೈನ್ ಕಟ್ಟಲು ಅವಕಾಶವಿದೆ. ಈ ಹಿಂದೆ, ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಈ ರೀತಿಯ ಕ್ರಮ ಕೈಗೊಂಡು ಸರ್ಕಾರ ಯಶಸ್ವಿಯಾಗಿತ್ತು.

ಫೆಬ್ರುವರಿ 11ರೊಳಗೆ ಇತ್ಯರ್ಥವಾಗುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಒಂದು ಬಾರಿಯ ಕ್ರಮವಾಗಿ 50% ಡಿಸ್ಕೌಂಟ್ ನಲ್ಲಿ ದಂಡ ಕಟ್ಟಲು ಅವಕಾಶ ನೀಡಲಾಗಿತ್ತು. ಆ ಬಳಿಕ ಮಾರ್ಚ್ 4 ರಿಂದ 15 ದಿನಗಳಿಗೆ ಅನ್ವಯವಾಗುವಂತೆ ಮತ್ತೊಮ್ಮೆ ಇಂತಹದ್ದೇ ಕ್ರಮವನ್ನು ಜಾರಿಗೊಳಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಗಳಿಗೆ ರಿಯಾಯಿತಿ ಮೊತ್ತದಲ್ಲಿ ದಂಡ ಕಟ್ಟುವುದನ್ನು ನಿಲ್ಲಿಸಲಾಗಿತ್ತು.
ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಾಹನ ಸವಾರರಿಗೆ ದಂಡ ಮೊತ್ತದಲ್ಲಿ ರಿಯಾಯಿತಿ ನೀಡಲು ಜೂನ್ 14ರಂದು ಹೈಕೋರ್ಟ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದೀಗ, ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರವು ದಂಡದ ಮೊತ್ತ ಪಾವತಿಯಲ್ಲಿ ಮತ್ತೊಮ್ಮೆ ರಿಯಾಯಿತಿ ನೀಡಿ, ಆದೇಶಿಸಿದೆ.

ಫೆಬ್ರುವರಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡದ ಮೊತ್ತದಲ್ಲಿ ಶೇಕಡ 50% ರಿಯಾಯಿತಿ ನೀಡಿದಾಗ ಬೆಂಗಳೂರು ನಗರ ಪೊಲೀಸರು, ಕೇವಲ ಎರಡು ದಿನದಲ್ಲಿ ಬರೋಬ್ಬರಿ ರೂ.13.8 ಕೋಟಿಗೂ ಹೆಚ್ಚು ದಂಡವನ್ನು ಸಂಗ್ರಹಿಸಿದ್ದರು. ಜೊತೆಗೆ 4,77,298 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದರು. 2022ರಲ್ಲಿ ಹೈದರಾಬಾದ್ ಟ್ರಾಫಿಕ್ ಪೊಲೀಸರು, ಇಂತಹ ಕ್ರಮವನ್ನು ಜಾರಿಗೊಳಿಸಿ, ಯಶಸ್ವಿಯಾಗಿದ್ದರು.
ನೀವು ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದರೇ, ನಿಮ್ಮ ವಾಹನದ ಮೇಲೆ ಎಷ್ಟು ಪ್ರಕರಣಗಳಿವೆ, ದಂಡದ ಮೊತ್ತ ಎಷ್ಟಿದೆ ಎಂಬುದುನ್ನು ಮೊದಲು ತಿಳಿಯಿರಿ. ಹತ್ತಿರದ ಸಂಚಾರ ಪೊಲೀಸ್ ಠಾಣೆ ಅಥವಾ ಕರ್ನಾಟಕ ಒನ್ ಮೂಲಕ ದಂಡವನ್ನು ಪಾವತಿಸಬಹುದು. ಸದ್ಯ, ಸೆಪ್ಟೆಂಬರ್ 9ರವರೆಗೆ ದಂಡ ಕಟ್ಟಲು ಅವಕಾಶವಿದ್ದು, ಯಾವುದೇ ರೀತಿಯಲ್ಲಿ ಆತುರ ಪಡದೇ ಫೈನ್ ಪಾವತಿಸಿ.
ಒಟ್ಟಾರೆ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡದ ಮೊತ್ತದಲ್ಲಿ ಶೇಕಡ 50% ರಿಯಾಯಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಹಾಗೆಂದು ಯಾರು ಸಹ ಟ್ರಾಫಿಕ್ ರೋಲ್ಸ್ ಉಲ್ಲಂಘಿಸಬೇಡಿ. ವಾಹನಗಳನ್ನು ನಿಗದಿತ ವೇಗದ ಮಿತಿಯಲ್ಲಿ ಓಡಿಸಿ, ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ, ಮದ್ಯಪಾನ ಮಾಡಿ, ಫೋನ್ ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸಬೇಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications