ಬಡವರ ಹಸಿವಿಗೆ ಸ್ಪಂದಿಸಿದ ಬಾಲಕರು, ಮಾಡಿದ್ದೇನು?
ಕರೋನಾ ವೈರಸ್ ಪ್ರಪಂಚದಾದ್ಯಂತ ಅಪಾರ ಪ್ರಮಾಣದ ಸಾವು ನೋವು ಉಂಟು ಮಾಡುತ್ತಿದೆ. ಜಗತ್ತಿನಾದ್ಯಂತ ಈ ಸೋಂಕಿಗೆ ಒಳಗಾದವರ ಸಂಖ್ಯೆ ಹತ್ತು ಲಕ್ಷವನ್ನು ಮೀರಿದೆ.

ಕರೋನಾ ವೈರಸ್ ಭಾರತದಲ್ಲಿಯೂ ವೇಗವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಕರೋನಾ ವೈರಸ್ ನಿಂದ ರಕ್ಷಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಬಡವರು ಹಾಗೂ ಕಾರ್ಮಿಕರು ಈ ಹೆಚ್ಚು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಕೆಳವರ್ಗದ ಜನರಿಗೆ ಆಹಾರ ಹಾಗೂ ಪಡಿತರದ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸಲು ಸರ್ಕಾರಗಳು ಕೈಲಾದಷ್ಟು ಪ್ರಯತ್ನ ಪಡುತ್ತಿವೆ. ಇದರ ಜೊತೆಗೆ ಹಲವಾರು ಜನ ಧನ ಸಹಾಯ ಮಾಡುತ್ತಿದ್ದಾರೆ.

ಆದರೆ ಇಬ್ಬರು ಚಿಕ್ಕ ಮಕ್ಕಳು ತಮ್ಮ ಬಳಿಯಿದ್ದ ಹಣವನ್ನು ಬಡವರಿಗಾಗಿ ಪೊಲೀಸರಿಗೆ ದಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಯೂಟ್ಯೂಬ್‌ನಲ್ಲಿ ಕಿಡ್ಸ್ ಬೈಕ್ ಎಂಬ ಚಾನೆಲ್ ಹೊಂದಿರುವ ಇಬ್ಬರು ಮಕ್ಕಳು ತಾವು ಈ ಚಾನೆಲ್ ನಿಂದ ಗಳಿಸಿದ್ದ 5,000 ರೂಪಾಯಿಗಳನ್ನು ಬಡ ಹಾಗೂ ಹಸಿದ ಜನರಿಗಾಗಿ ದೇಣಿಗೆ ನೀಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ, ಈ ಇಬ್ಬರು ಮಕ್ಕಳು ತಮ್ಮ ಪಾಕೆಟ್ ಬೈಕ್‌ಗಳಲ್ಲಿ ಮನೆಯಿಂದ ಹೊರಬಂದಿದ್ದಾರೆ. ಕೂಡಲೇ ಅಲ್ಲಿಯೇ ಇದ್ದ ಪೊಲೀಸರು ಈ ಮಕ್ಕಳನ್ನು ತಡೆದು ಲಾಕ್‌ಡೌನ್‌ನಲ್ಲಿ ಹೊರಬಂದ ಕಾರಣವನ್ನು ಕೇಳಿದ್ದಾರೆ.

ಮಕ್ಕಳು ಯೂಟ್ಯೂಬ್‌ನಲ್ಲಿ ಕಿಡ್ಸ್ ಬೈಕ್ ಎಂಬ ಚಾನೆಲ್ ಹೊಂದಿರುವ ಬಗ್ಗೆ ಹಾಗೂ ಲಾಕ್‌ಡೌನ್‌ನಿಂದಾಗಿ ಬಡವರಿಗೆ ಸರಿಯಾಗಿ ಆಹಾರವನ್ನು ಪಡೆಯಲು ಸಾಧ್ಯವಾಗದೇ ಇರುವುದರ ಬಗ್ಗೆ ಫೇಸ್‌ಬುಕ್, ಟಿವಿ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದಿದ್ದಾಗಿ ಹೇಳಿದ್ದಾರೆ.
ಈ ಕಾರಣಕ್ಕೆ ತಮ್ಮ ಯೂಟ್ಯೂಬ್ ಚಾನೆಲ್ ನಿಂದ ಗಳಿಸಿರುವ ಹಣವನ್ನು ಬಡವರ ಆಹಾರಕ್ಕಾಗಿ ದಾನ ಮಾಡಲು ಬಯಸಿರುವುದಾಗಿ ತಿಳಿಸಿದ್ದಾರೆ. ಆ ಇಬ್ಬರು ಮಕ್ಕಳು ಪೊಲೀಸರಿಗೆ ತಮ್ಮ ಬಳಿಯಿದ್ದ ರೂ.5,000ಗಳನ್ನು ನೀಡಿದ್ದಾರೆ. ಈ ಹಣವನ್ನು ಬಡವರಿಗೆ ಸಹಾಯ ಮಾಡಲು ಬಳಸಲಾಗುವುದೆಂದು ಪೊಲೀಸರು ಮಕ್ಕಳಿಗೆ ಭರವಸೆ ನೀಡಿದ್ದಾರೆ.

ಅಂದ ಹಾಗೆ ಈ ಮಕ್ಕಳು ಚಾಲನೆ ಮಾಡುತ್ತಿದ್ದ ಪಾಕೆಟ್ ಬೈಕುಗಳ ಬಳಕೆ ಭಾರತದಲ್ಲಿ ಕಾನೂನುಬದ್ಧವಲ್ಲ. ಈ ಪಾಕೆಟ್ ಬೈಕ್‌ಗಳಿಗೆ ಆರ್‌ಟಿಒಗಳು ಮಾನ್ಯತೆ ನೀಡುವುದಿಲ್ಲ. ಆದರೆ ಈ ಬೈಕ್‌ಗಳನ್ನು ರೇಸ್‌ಟ್ರಾಕ್, ಖಾಸಗಿ ಮೈದಾನ, ತೋಟದಮನೆಗಳಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದು.


Click it and Unblock the Notifications