ಏನಿದು ಕೊಂಕಣ ರೈಲಿನ ವಿಶಿಷ್ಟ 'ರೊ-ರೊ' ಸರ್ವೀಸ್?
ನಿಮಗೆಲ್ಲರಿಗೂ ತಿಳಿದಿರುವಂತೆಯೇ 1990ನೇ ಇಸವಿಯಲ್ಲಿ ಇಂಡಿಯನ್ ರೈಲ್ವೇಗೆ (ಐಆರ್) ಸಹಾಯಿಯಾಗಿ ಸ್ಥಾಪಿತವಾಗಿರುವ ಕೊಂಕಣ ರೈಲ್ವೇ ಕಾರ್ಪೋರೇಷನ್ (ಕೆಆರ್‌ಎಸ್) ತನ್ನದೇ ಆದ ವಿಶಿಷ್ಟತೆಯಿಂದ ಗುರುತಿಸಿಕೊಂಡಿದೆ. ನವಿ ಮುಂಬೈನಲ್ಲಿ ಕೇಂದ್ರ ಕಛೇರಿಯಿರುವ ಕೊಂಕಣ ಪ್ರಯಾಣಿಕ ರೈಲಿನ ಮೊದಲ ಪಯಣವು 1993ರಲ್ಲಿ ಉಡುಪಿಯಿಂದ ಮಂಗಳೂರಿಗೆ ಸಾಗಿತ್ತು.
ಕಣ್ಣಿಗೆ ಮುದ ನೀಡುವ ಜಗತ್ತಿನ 25 ಮನೋಹರ ರೈಲು ಮಾರ್ಗಗಳು
ಬಳಿಕ 1998ನೇ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸಿದ್ದ ಕೊಂಕಣ ರೈಲಿನಲ್ಲಿ ರೊ-ರೊ ಸೇವೆ ವಿಶೇಷವೆನಿಸಿದೆ. ರೊರೊ ಅಂದರೆ ರೋಲ್ ಆನ್ ರೋಲ್ ಆಫ್ ಸರ್ವೀಸ್ - ಅಂದರೆ ಸರಕುಗಳಿಂದ ತುಂಬಿಕೊಂಡಿರುವ ಟ್ರಕ್‌ಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕೊಂಕಣ ರೈಲು ವ್ಯಾಗನ್ ಮೂಲಕವೇ ಹೊತ್ಯೊಯ್ಯಲಾಗುತ್ತದೆ. ಇದರೊಂದಿಗೆ ಏಕಕಾಲಕ್ಕೆ ಇಂಧನ ಜೊತೆ ಸಮಯ ಸಹ ಉಳಿಸಬಹುದಾಗಿದೆ.

1999ನೇ ಇಸವಿಯ ಗಣರಾಜ್ಯೋವದಂದು ಆರಂಭಿಸಿದ್ದ ಕೊಂಕಣ ರೈಲು ರೊರೊ ಸೇವೆಯು, ಈಗಾಗಲೇ 15 ವಸಂತಗಳನ್ನು ಪೂರ್ಣಗೊಳಿಸಿದೆ. ಆರಂಭಿಕ ಕಾಲಘಟ್ಟದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಿದ್ದರೂ ಇವೆಲ್ಲವನ್ನು ನಿಭಾಯಿಸುವಲ್ಲಿ ರೊರೊ ವ್ಯವಸ್ಥೆ ಯಶಸ್ವಿಯಾಗಿದೆ.

ವರದಿಗಳ ಪ್ರಕಾರ ಪಶ್ಛಿಮ ಘಟ್ಟದ ಘಾಟಿ ಪ್ರದೇಶದಲ್ಲಿ ಘನ ವಾಹನಗಳಲ್ಲಿ ಸಂಚಾರಿಸುವುದು ತುಂಬಾನೇ ಅಪಾಯಕಾರಿಯಾಗಿದೆ.

ರಾತ್ರಿ ವೇಳೆಯ ಪಯಣ, ಕಿರಿದಾದ ರಸ್ತೆ, ಅಡ್ಡಾದಿಡ್ಡಿಯಾದ ರಸ್ತೆ, ವಾಹನ ದಟ್ಟಣೆ, ಕಳಪೆ ರಸ್ತೆ ಹಾಗೂ ಹವಾಮಾನ ವ್ಯಪರೀತ ಈ ಎಲ್ಲ ಪರಿಸ್ಥಿತಿಗಳು ಅಪಾಯವನ್ನು ಕೈ ಬೀಸಿ ಕರೆಯುತ್ತಿದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಇಂಧನ ಉಳಿತಾಯದ ಜೊತೆಗೆ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳುವುದು ರೊರೊ ಅವಿಷ್ಕಾರದ ಉದ್ದೇಶವಾಗಿತ್ತು.

ಹಡಗುಗಳಲ್ಲಿ ಸರಕು ಸಾಗಣೆ ಕಂಡುಬರುತ್ತಿದ್ದ ಈ ತಂತ್ರಜ್ಞಾನವನ್ನು ಅವಿಷ್ಕರಿಸಿದ ಶ್ರೇಯ ಕೊಂಕಣ ರೈಲ್ವೇಗೆ ಸಲ್ಲುತ್ತದೆ. ಈ ಮೂಲಕ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸುಲಭವಾಗಿ ಸರಕು ಸಹಿತ ಟ್ರಕ್ಕುಗಳನ್ನು ಸಾಗಿಸಬಹುದಾಗಿದೆ.

ಈ ಎಲ್ಲದರ ನೆರವಿನಿಂದ ಇಂಧನ ಉಳಿತಾಯದ ಜೊತೆಗೆ ಟ್ರಕ್ ಚಾಲಕರ ಆತಂಕವು ದೂರವಾಯಿತು. ಅಲ್ಲದೆ ಯಾವುದೇ ಟ್ರಾಫಿಕ್ ಉಪಟಲವಿಲ್ಲದೆ ಅತ್ಯಂತ ವೇಗದಲ್ಲೇ ತನ್ನ ಗುರಿ ತುಲುಪುವಲ್ಲಿ ಯಶಸ್ವಿಯಾಗಿತ್ತು.

ಇದು ಕೊಂಕಣ ರೈಲ್ವೇ ಕಾರ್ಪೋರೇಷನ್ ಜೊತೆ ಟ್ರಕ್ ನಿರ್ವಾಹಕರಿಗೂ ಉಪಯುಕ್ತವೆನಿಸಿತ್ತು. ಇದರಿಂದಾಗಿ ಟ್ರಕ್ ಚಾಲಕರು ಸಾಕಷ್ಟು ನಿರಾಳತೆಯನ್ನು ಅನುಭವಿಸುವಂತಾಗಿದೆ.

ಅಂದ ಹಾಗೆ ಮೊದಲ ರೊರೊ ಸರ್ವೀಸ್, 1998ನೇ ಇಸವಿಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕದ ಸುರತ್ಕಲ್‌ಗೆ ಆರಂಭಿಸಲಾಗಿತ್ತು. ಅಲ್ಲದೆ ಕಳೆದ 15 ವರ್ಷಗಳೆಡೆ ಮೂರು ಲಕ್ಷಕ್ಕೂ ಹೆಚ್ಚು ಟ್ರಕ್ಕುಗಳನ್ನು ಗುರಿ ಮುಟ್ಟಿಸಿದೆ.

ಅಂದರೆ ವರ್ಷಂಪ್ರತಿ 22,000 ಟ್ರಕ್ಕುಗಳನ್ನು ಹೊತ್ಯೊಯ್ಯುವಲ್ಲಿ ಯಶ ಕಂಡಿದೆ. ಪ್ರಸ್ತುತ ಕೋಲಾಡ್-ವರ್ನಾ, ಕೋಲಾಡ್-ಸುರತ್ಕಲ್ ಹಾಗೂ ಅಂಕೋಲಾ-ಸುರತ್ಕಲ್ ನಡುವಣ ಈ ಸೇವೆ ದೇಶದ್ಯಾಂತ ವ್ಯಾಪಿಸಿದರೆ ಇನ್ನಷ್ಟು ಇಂಧನ ಉಳಿತಾಯ ಮಾಡಬಹುದಾಗಿದೆ.

ಅಂದರೆ ಕೋಲಾಡ್-ವರ್ನಾ ನಡುವೆ ರಸ್ತೆ ಮಾರ್ಗವಾಗಿ 24 ಗಂಟೆ ತಗಲುತ್ತಿದ್ದರೆ ರೊರೊ ವ್ಯವಸ್ಥೆಯ ಮುಖಾಂತರ 12 ಗಂಟೆಗಳಲ್ಲಿ ಗುರಿ ಮುಟ್ಟುತ್ತಿತ್ತು. ಹಾಗೆಯೇ ಕೋಲಾಡ್-ಸುರತ್ಕಲ್ 40 ಗಂಟೆಗಳ ಪಯಣವು 22 ಗಂಟೆಗೆ ಇಳಿಕೆ ಕಂಡಿತ್ತು. ಒಟ್ಟಿನಲ್ಲಿ ರೊರೊ ವ್ಯವಸ್ಥೆಯು ಸಮಯ ಉಳಿತಾಯ, ಪರಿಸರ ಸ್ನೇಹಿ ಹಾಗೂ ರಸ್ತೆ ಪಯಣಕ್ಕಿಂತ ಹೆಚ್ಚು ಸುರಕ್ಷಿತವೆನಿಸಿದೆ.
ರೋಲ್ ಆನ್ ರೋಲ್ ಆಫ್ ಆಕರ್ಷಕ ವೀಡಿಯೋ ವೀಕ್ಷಿಸಿ


Click it and Unblock the Notifications








